- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಇನ್ನು ಮುಂದೆ ಈ ರೀತಿ ಕಹಿ ಘಟನೆ ನಡೆಯದಂತೆ ಚೆನ್ನಾಗಿ ಬದುಕುತ್ತೇವೆ : ದರ್ಶನ್‌

Darshan-Vijayalaksmi [1]

ಬೆಂಗಳೂರು: ‘ಒಂದು ತಿಂಗಳ ನಂತರ ಜೈಲಿನಿಂದ ಬಿಡುಗಡೆಗೊಂಡ ಚಿತ್ರನಟ ದರ್ಶನ್‌ ಭಾನುವಾರ ಬೆಳಿಗ್ಗೆ ಬೆಂಗಳೂರಿನ ಸಿಟಿ ಇನ್‌ಸ್ಟಿಟ್ಯೂಟ್‌ನಲ್ಲಿ ಪತ್ರಿಕಾಗೋಷ್ಠಿ ಕರೆದು ಬಾರಿ ಕ್ಷಮೆ ಕೋರಿದರು. ಏನೋ ಕಹಿ ಘಟನೆ ನಡೀಬಾರದಾಗಿತ್ತು. ನಡೆದು ಹೋಯಿತು. ದಯವಿಟ್ಟು ಕ್ಷಮಿಸಿ. ನಿಮ್ಮ ಮೂಲಕ ಆಭಿಮಾನಿಗಳಿಗೆ ಕ್ಷಮೆ ಕೇಳುತ್ತಿದ್ದೇನೆ. ಎಂದರು.

ಇನ್ನು ಮುಂದೆ ಈ ರೀತಿ ಆಗದಂತೆ ಎಚ್ಚರವಹಿಸುವುದಾಗಿ ಹೇಳಿದರು. ನಾನು ನನ್ನ ಹೆಂಡತಿ ಇಬ್ಬರೂ ಚೆನ್ನಾಗಿದ್ದೇವೆ. ಇದೊಂದು ಕೆಟ್ಟ ಘಟ್ಟ ಅಷ್ಟೇ. ಇನ್ನು ಮುಂದೆ ಈ ರೀತಿ ಕಹಿ ಘಟನೆ ನಡೆಯದಂತೆ ಚೆನ್ನಾಗಿ ಬಾಳಿ ತೋರಿಸುತ್ತೇವೆ. ನಮಗೆ ನಿಮ್ಮ ಸಹಕಾರ, ಪ್ರೀತಿ ಮುಖ್ಯ ಎಂದರು.

ದರ್ಶನ್‌ ಪತ್ನಿ ವಿಜಯಲಕ್ಷ್ಮೀ, ಇದೊಂದು ಕೆಟ್ಟ ಘಳಿಗೆ ಅಷ್ಟೇ. ಅಂಥದ್ದೊಂದು ಕೆಟ್ಟ ಘಳಿಗೆ ಬರಬಾರದಿತ್ತು, ಬಂದಿದೆ. ಅದನ್ನು ಮೀರಿ ಬೆಳೆಯಬೇಕು, ಬದುಕು ಕಟ್ಟಿಕೊಳ್ಳಬೇಕು ಎಂಬುದು ನನ್ನ ಹಾಗೂ ದರ್ಶನ್‌ ಅವರ ಆಸೆ. ಇದರಿಂದ ನಮ್ಮಿಬ್ಬರ ಪ್ರೀತಿ ಇನ್ನಷ್ಟು ಗಟ್ಟಿಯಾಗಿದೆ. ನಾವಿಬ್ಬರು ಇನ್ನಷ್ಟು ಹತ್ತಿರವಾಗಿದ್ದೀವಿ. ಈ ಒಂದು ತಿಂಗಳಲ್ಲಿ ದರ್ಶನ್‌ ಸಹ ಸಾಕಷ್ಟು ಬದಲಾಗಿದ್ದಾರೆ’ ಎಂದರು.

ದರ್ಶನ್‌ ಹಾಗೂ ವಿಜಯಲಕ್ಷ್ಮೀ ಅವರ ದಾಂಪತ್ಯದಲ್ಲಿ ನಿಖೀತ ಹೆಸರು ಬಂದಿದ್ದಕ್ಕೆ ಮತ್ತು ಆ ಕಾರಣಕ್ಕೆ ನಿಖೀತಾ ಅವರನ್ನು ನಿರ್ಮಾಪಕರ ಸಂಘ ಬ್ಯಾನ್‌ ಮಾಡಿದ್ದನ್ನು ದರ್ಶನ್‌ ಗಮನಕ್ಕೆ ತಂದಾಗ, ಆ ಬಗ್ಗೆ ಸಮಜಾಯಿಷಿ ನೀಡಿದ ವಿಜಯಲಕ್ಷ್ಮೀ, ‘ನಿಖೀತಾ ಹೆಸರನ್ನು ನಾನು ಎತ್ತಿದ್ದಲ್ಲ. ಅವರನ್ನು ಬ್ಯಾನ್‌ ಮಾಡಿ ಎಂದು ನಾನ್ಯಾರಲ್ಲೂ ಹೇಳಿಲ್ಲ. ಇಷ್ಟಕ್ಕೂ ಅವರನ್ನು ಬ್ಯಾನ್‌ ಮಾಡುವುದಕ್ಕೆ ಯಾರೂ ನನ್ನ ಬಳಿ ಸಲಹೆಗಳನ್ನು ಕೇಳಿಲ್ಲ. ಇದ್ಯಾವುದೂ ನನ್ನ ಕಡೆಯಿಂದ ಆಗಿದ್ದಲ್ಲ’ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ದರ್ಶನ್‌ ಸಹೋದರ ದಿನಕರ್‌ ತೂಗುದೀಪ, ಸೃಜನ್‌ ಲೋಕೇಶ್‌ ಮುಂತಾದವರಿದ್ದರು.