- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮೋದಿಯವರು ನಿನ್ನೆ ನೀಡಿರುವ ಹೇಳಿಕೆ ಬಗ್ಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ: ಹೆಚ್.ಡಿ.ದೇವೇಗೌಡ

devegowda [1]

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ನಿನ್ನೆ ನೀಡಿರುವ ಹೇಳಿಕೆ ಬಗ್ಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹೇಳಿದ್ದಾರೆ.

ಪ್ರೆಸ್‍ ಕ್ಲಬ್ ಹಾಗೂ ಬೆಂಗಳೂರು ವರದಿಗಾರರ ಕೂಟ ಜಂಟಿಯಾಗಿ ಇಂದು ಆಯೋಜಿಸಿದ್ದ 2018ರ ವಿಧಾನಸಭೆ ಚುನಾವಣೆ ಮಾತು ಮಂಥನ ಸಂವಾದಲ್ಲಿ ಮಾತನಾಡಿದ ಅವರು, ಉಡುಪಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ವಾಸ್ತವ ಸ್ಥಿತಿಯನ್ನು ಅರಿತು ಮಾಜಿ ಪ್ರಧಾನಿಗೆ ಗೌರವ ಕೊಡುವುದಾಗಿ ಹೇಳಿದ್ದಾರೆ. ಅದರಲ್ಲಿ ಯಾವುದೇ ಔಚಿತ್ಯವಿಲ್ಲ ಎಂದರು.

ಉಡುಪಿಯಲ್ಲಿ ಪ್ರಧಾನಿಯವರು ದೇವೇಗೌಡರು ಬಂದರೆ ಬಾಗಿಲು ತೆರೆಯುವೆ ಎಂದು ಹೇಳಿರುವುದನ್ನು ಹೇಗೆ ಅರ್ಥ ಮಾಡಿಕೊಳ್ಳುತ್ತಾರೋ ಗೊತ್ತಿಲ್ಲ. ಪ್ರಧಾನಿ ಅವರು ಒಂದು ರಾಜ್ಯಕ್ಕೆ ಹೋದಾಗ ಹೇಗೆ ಮಾತನಾಡಬೇಕೆಂಬುದನ್ನು ತಿಳಿದುಕೊಂಡಿರುತ್ತಾರೆ ಎಂದರು.

ಮಹದಾಯಿ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಬಾರಿ ಪ್ರಧಾನಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ವಿವಾದ ಬಗೆಹರಿಸುವಂತೆ ಕೋರಿದ್ದರೂ ಕೂಡ ಅವರು ಈ ಕುರಿತು ಮಾತನಾಡದಿದ್ದರೆ ಏನು ಮಾಡಲು ಸಾಧ್ಯ . ತೆಂಗು ಬೆಳೆಗಾರರಿಗೆ ಕೇರಳ ಮಾದರಿಯಲ್ಲಿ ಪರಿಹಾರ ಒದಗಿಸಬೇಕೆಂಬ ಮನವಿಗೂ ಕೂಡ ಸ್ಪಂದಿಸಲಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ತಾವೂ ಕೂಡ ಬದಲಾಗಿಲ್ಲ. ಪ್ರಧಾನಿ ಮೋದಿ ಕೂಡ ಬದಲಾಗಿಲ್ಲ. ರಾಜ್ಯದ ರೈತನ ಮಗ, ಕನ್ನಡಿಗರಾದ ತಾವು ಪ್ರಧಾನಿಯಾದಾಗ ಆಗಿನ ಮುಖ್ಯಮಂತ್ರಿ ಜೆ.ಎಚ್.ಪಟೇಲರು ಮುಖ್ಯಮಂತ್ರಿಗಳ ನಿವಾಸ ಹಾಗೂ ಕಚೇರಿಯಲ್ಲಿ ತಮ್ಮ ಫೋಟೋ ಹಾಕಿದ್ದರು. ಆನಂತರ ಮುಖ್ಯಮಂತ್ರಿಯಾದ ಎಸ್.ಎಂ.ಕೃಷ್ಣ, ಧರ್ಮಸಿಂಗ್, ಹೆಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ ಯಾರೂ ಸಹ ಆ ಫೋಟೋ ತೆಗೆಸಿರಲಿಲ್ಲ. ಆದರೆ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದ ಕೂಡಲೇ ನನ್ನ ಫೋಟೋವನ್ನು ಹೊರಹಾಕಿದರು. ಕನ್ನಡಿಗ ಪ್ರಧಾನಿಯಾಗಿದ್ದ ಬಗ್ಗೆ ಗೌರವ ಕೊಡುವ ಸೌಜನ್ಯ ಸಿದ್ದರಾಮಯ್ಯ ಅವರಿಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಳೆದ 2 ತಿಂಗಳಿನಿಂದಲೂ ಜೆಡಿಎಸ್ ಹಾಗೂ ತಮ್ಮ ಬಗ್ಗೆ ಮುಖ್ಯಮಂತ್ರಿ ಅವರು ಮಾಡುತ್ತಿರುವ ಟೀಕೆಗಳನ್ನು ಕೂಡ ಗಮನಿದ್ದು, ಪುತ್ರ ವ್ಯಾಮೋಹದಿಂದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಬೇಕೆಂದು ಬಯಸುತ್ತಿಲ್ಲ, ಪ್ರಾದೇಶಿಕ ಪಕ್ಷವನ್ನು ಉಳಿಸುವ ಉದ್ದೇಶದಿಂದ ಬಯಸುತ್ತಿದ್ದೇನೆ ಎಂದ ಅವರು, ಸಿದ್ದರಾಮಯ್ಯ ಅವರು ಜೆಡಿಎಸ್ ರಾಜ್ಯಾಧ್ಯಕ್ಷರಾಗಿರಲಿಲ್ಲವೇ? ಎ.ಕೃಷ್ಣಪ್ಪ, ಮೀರಾಜುದ್ದೀನ್ ಪಟೇಲ್ ಅವರು ಜೆಡಿಎಸ್ ಅಧ್ಯಕ್ಷರಾಗಿರಲಿಲ್ಲವೇ? ಇವೆಲ್ಲ ಪುತ್ರ ವ್ಯಾಮೋಹವೇ ಎಂದು ಪ್ರಶ್ನಿಸಿದ ಅವರು, ಪಕ್ಷ ಉಳಿಸುವ ಹಠವಿದೆ ಎಂದು ಹೇಳಿದರು.

ಬಿಎಸ್‍ಪಿ ಜೊತೆ ಮೈತ್ರಿ ಮಾಡಿಕೊಂಡು ಆ ಪಕ್ಷಕ್ಕೆ 20 ವಿಧಾನಸಭಾ ಕ್ಷೇತ್ರಗಳನ್ನು ಬಿಟ್ಟುಕೊಡಲಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ 48 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು ಸಾವಿರಕ್ಕಿಂತ ಎರಡೂವರೆ ಸಾವಿರ ಮತಗಳ ಅಂತರದಿಂದ ಸೋತಿದ್ದರು. ಅಂತಹ ಕಡೆಗಳಲ್ಲಿ ಅನುಕೂಲವಾಗಬಹುದೆಂಬ ಉದ್ದೇಶದಿಂದ ಬಿಎಸ್‍ಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲಾಗಿದೆ. ಈ ಮೈತ್ರಿ ಲೋಕಸಭಾ ಚುನಾವಣೆಯಲ್ಲಿ ಮುರಿದುಕೊಳ್ಳುವುದಿಲ್ಲ ಎಂದರು.

ಒಂದು ಪ್ರಾದೇಶಿಕ ಪಕ್ಷವನ್ನು ಕಟ್ಟಿ ಬೆಳೆಸುವುದು ಸುಲಭವಲ್ಲ. ರಾಜ್ಯದ ಮುಖ್ಯಮಂತ್ರಿ ಆಗಿದ್ದ ಕೆಂಗಲ್ ಹನುಮಂತಯ್ಯ, ಗುಂಡೂರಾವ್, ಬಂಗಾರಪ್ಪ, ರಾಮಕೃಷ್ಣ ಹೆಗಡೆ, ಬಿ.ಎಸ್.ಯಡಿಯೂರಪ್ಪ ಅವರು ಪ್ರಾದೇಶಿಕ ಪಕ್ಷ ಕಟ್ಟಿದರೂ ಕೂಡ ಸಫಲರಾಗಲಿಲ್ಲ ಎಂದು ಮಾರ್ಮಿಕವಾಗಿ ನುಡಿದರು.