- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮಂಗಳೂರಿನಲ್ಲಿ ಡಿಕೆಶಿ, ಉಮನ್‌ ಚಾಂಡಿ… ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ

congress [1]ಮಂಗಳೂರು: ಬೆಳ್ತಂಗಡಿ ಮಾಜಿ ಶಾಸಕ, ಮಾಜಿ ಸಚಿವ ಗಂಗಾಧರ ಗೌಡ ಸಚಿವ ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲಿ ಇಂದು ಕಾಂಗ್ರೆಸ್ ಸೇರ್ಪಡೆಗೊಂಡರು.

ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಗಂಗಾಧರ ಗೌಡರಿಗೆ ಟಿಕೆಟ್‌ ತಪ್ಪಿದ ಹಿನ್ನೆಲೆ ಕೇರಳ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ, ಸಚಿವ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಗಂಗಾಧರ ಗೌಡ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಡಿ.ಕೆ.ಶಿವಕುಮಾರ್, ಮೋದಿಯವರ ಅಚ್ಛೇ ದಿನ್ ಯಾರಿಗೂ ಬಂದಿಲ್ಲ. ಯಾರಿಗೂ 15 ಲಕ್ಷ ರೂ.‌ ಮೋದಿಯವರಿಂದ ದೊರಕಿಲ್ಲ. ನಿನ್ನೆ ಮೋದಿಯವರು ದೇವೇಗೌಡರನ್ನು ಹೊಗಳಿದ್ದರು. ಅವರ ಕಾಲಮೇಲೆ ಅವರಿಗೆ ಶಕ್ತಿಯಿದ್ದಿದ್ದರೆ ಯಾರೂ ವಿರೋಧ ಪಕ್ಷದವರನ್ನು ಹೊಗಳಲ್ಲ ಎಂದು ಮೋದಿ ವಿರುದ್ಧ ಡಿಕೆಶಿ ಗುಡುಗಿದರು.

ಮೋದಿ ಗ್ಲೋಬಲ್ ಇನ್ವೆಸ್ಟರ್ಸ್ ಮೀಟ್ ಮಾಡಿ ಕರ್ನಾಟಕದಲ್ಲಿ ಇನ್ವೆಸ್ಟ್ ಮಾಡಿದ್ದಾರೆ ಎಂದಿದ್ದರು. ಈ ರೀತಿ ಹೇಳಿ ಕೆಲವು ದಿನಗಳ ಹಿಂದೆ ಅವರೇ ಶೇ.10 ಸರಕಾರ ಎಂದೂ ಹೇಳಿದ್ದರು. ಅನ್ನಭಾಗ್ಯವನ್ನು ಕನ್ನಭಾಗ್ಯ ಎಂದು ಕರೆದರು. ಶೋಭಾ, ಯಡಿಯೂರಪ್ಪ, ಸದಾನಂದ ಗೌಡರ‌ ಮುಂದೆ ಸರ್ಕಾರದ ಸಾಧನೆ ಬಗ್ಗೆ ಚರ್ಚಿಸಲು ಸಿದ್ಧರಿದ್ದೇವೆ. ಕಳೆದ 5 ವರ್ಷದಲ್ಲಿ ಒಂದು ಮಂತ್ರಿ ಮೇಲೆ ಬೆರಳೆತ್ತಿ ತೋರಿಸಲಾಗದಂತೆ ಆಡಳಿತ ನೀಡಿದ್ದೇವೆ. 1500 ಕೋಟಿ ರೂ. ಹಣ ಬೆಳ್ತಂಗಡಿ ಕ್ಷೇತ್ರದ ಅಭಿವೃದ್ಧಿಗೆ ವಸಂತ ಬಂಗೇರ ತಂದಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿಗಳ ಮೇಲೆ ಆರೋಪ ಎದುರಾದಾಗ ಸಿಬಿಐ ತನಿಖೆ ನಡೆಸಿ ನ್ಯಾಯ ಒದಗಿಸಿದ ಪಕ್ಷ ನಮ್ಮದು. ಕೇಂದ್ರದ ಬಜೆಟ್ 80,000 ಕೋಟಿ ರೂ. ಆಗಿತ್ತು. ಆದರೆ, ಕರ್ನಾಟಕದ ಜನತೆಗಾಗಿ ರಾಜ್ಯ ಸರ್ಕಾರ 80,000 ಕೋಟಿ ರೂ.‌ವ್ಯಯಿಸಿದೆ ಎಂದರು.

ಮುಂದೆ ವಿದ್ಯುತ್ ಕ್ಷೇತ್ರದಲ್ಲಿ ತೊಂದರೆಯಾಗದಂತೆ ಸಾಧನೆ ಮಾಡಿದ್ದೇವೆ. ರಸ್ತೆ, ಹಾಲು ಉತ್ಪಾದನಾ ಕ್ಷೇತ್ರಕ್ಕೂ ಸರ್ಕಾರ ಉತ್ತಮ‌ ಕೊಡುಗೆ ನೀಡಿದೆ. ರಾಜ್ಯದಲ್ಲಿ ಎಲ್ಲಾ ಇಲಾಖೆಯಲ್ಲಿ ಮಾಡಿದ ಸಾಧನೆಯನ್ನು ಇಡೀ ರಾಷ್ಟ್ರ ನೋಡುತ್ತಿದೆ. 50,000ರೂ. ನಂತೆ ಜನರ ಸಾಲಮನ್ನಾ ಮಾಡಿದ್ದೇವೆ. ಅಮಿತ್ ಶಾನವರೇ ಬಂದು ಅತ್ಯಂತ ಭ್ರಷ್ಟ ಸರ್ಕಾರ ಯಡಿಯೂರಪ್ಪ ಸರ್ಕಾರ ಎಂದಿದ್ದಾರೆ. ಸೀರೆ ಹಾಗೂ ಸೈಕಲ್ ಬಿಟ್ಟು ಬೇರೆ ಯಾವ ಯೋಜನೆ ಇವರು ಕೈಗೊಂಡಿದ್ದಾರೆ?. ಯಡಿಯೂರಪ್ಪ ನಿಂತುಕೊಂಡು ಅವರ ಯಾವುದಾದರೂ ಸಾಧನೆ ತಿಳಿಸಲಿ. ಕೋಮುಗಲಭೆ, ಅಶಾಂತಿಗೆ ಬಗ್ಗದೆ ಜಾತ್ಯಾತೀತ ನಿಲುವು ಜನರು ತಾಳಿ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಬಳಿಕ ಮಾತನಾಡಿದ ಕೇರಳದ ಕಾಂಗ್ರೆಸ್ ನಾಯಕ ಉಮ್ಮನ್ ಚಾಂಡಿ, ಈ ಹಿಂದೆ ಕಾಂಗ್ರೆಸ್ ಎದುರು ಬಿಜೆಪಿಯ 2 ಸಂಸದರು ಗೆಲ್ಲಲು ಶಕ್ತರಾಗಿದ್ದಾಗಲೂ ಬಿಜೆಪಿ ಮುಕ್ತ ಎಂದಿಲ್ಲ. ರಾಷ್ಟ್ರವನ್ನು ಬಿಜೆಪಿ ಮುಕ್ತಗೊಳಿಸಬೇಕೆಂಬ ಉದ್ದೇಶ ಕಾಂಗ್ರೆಸ್ ಹೊಂದಿಲ್ಲ. ರಾಜೀವ್ ಗಾಂಧಿ ಯೋಚನೆಯಂತೆ ಅಭಿವೃದ್ಧಿ ಪೂರಕ, ಹಸಿವು ಮುಕ್ತ ರಾಷ್ಟ್ರ ನಿರ್ಮಾಣ ನಮ್ಮ ಗುರಿ. ನರೇಂದ್ರ ಮೋದಿ ಕಪ್ಪುಹಣ ತಡೆಗಟ್ಟುವ ಬಗ್ಗೆ ಮಾತನಾಡುತ್ತಾರೆ. ಆದರೆ, ಕಪ್ಪು ಹಣ ಎಲ್ಲಿದೆ‌ ಎಂಬುದೇ ಮೋದಿಗೆ ತಿಳಿದಿಲ್ಲ ಎಂದು ಮೋದಿ ವಿರುದ್ಧ ಹರಿಹಾಯ್ದರು.

ಕಾಂಗ್ರೆಸ್ ಸರ್ಕಾರದ ಸಂದರ್ಭದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಬಹಳಷ್ಟು ಕಡಿಮೆಯಿತ್ತು. ಆದರೆ, ಬಿಜೆಪಿ ಸರ್ಕಾರ ಬೆಲೆಯನ್ನು ಗಗನಕ್ಕೇರುವಂತೆ ಮಾಡಿದೆ. ಕಾಂಗ್ರೆಸ್ ಸರ್ಕಾರವಿದ್ದಾಗ ಬೆಲೆ ಏರಿಕೆಯೆಂದು ಪ್ರತಿಭಟನೆ ಮಾಡಿದ್ದರು. ಆದರೆ, ಇಡೀ ಪ್ರಪಂಚಕ್ಕೆ ಹೋಲಿಸಿದಾಗ ಭಾರತದಲ್ಲಿ ಮಾತ್ರ ಪ್ರಸ್ತುತ ಪೆಟ್ರೋಲ್, ಡೀಸೆಲ್ ಬೆಲೆ ಏರಿದೆ. ದಿನಬಳಕೆಯ ವಸ್ತುಗಳ ಬೆಲೆಯನ್ನು ಇಳಿಕೆ ಮಾಡದಿದ್ದರೂ ಪರವಾಗಿಲ್ಲ. ಆದರೆ, ಬಿಜೆಪಿ ಜನರನ್ನು ಮೋಸ ಮಾಡಬಾರದು ಎಂದರು.

ದೇಶದಲ್ಲಿ ಕಾಂಗ್ರೆಸ್ ಏಕತೆಯನ್ನು ಸಾಧಿಸಿದರೆ ಬಿಜೆಪಿ ಪ್ರತ್ಯೇಕತೆ ನೀತಿ ಅನುಸರಿಸುತ್ತಿದೆ. ದ.ಕ. ಜಿಲ್ಲೆಯಲ್ಲಿ 8ಕ್ಕೆ 8 ಸ್ಥಾನಗಳನ್ನೂ ಕಾಂಗ್ರೆಸ್ ಗೆಲ್ಲಬೇಕು. ರಾಜ್ಯದಲ್ಲಿ ಮತ್ತೆ ಸಿದ್ಧರಾಮಯ್ಯ ಸರ್ಕಾರ ಬರುವಂತೆ ಪಕ್ಷವನ್ನು ಗೆಲ್ಲಿಸಬೇಕು. ಬಿಜೆಪಿ ಆಡಳಿತದಲ್ಲಿ ಮೂರು ಮುಖ್ಯಮಂತ್ರಿಗಳನ್ನು ರಾಜ್ಯ ನೋಡಬೇಕಾಯಿತು. ಆದರೆ, 5 ವರ್ಷಗಳ ಕಾಲ‌ ಮುಖ್ಯಮಂತ್ರಿಯಾಗಿದ್ದುಕೊಂಡು ಸಿದ್ದರಾಮಯ್ಯ ಉತ್ತಮ ಆಡಳಿತ ನೀಡಿದ್ದಾರೆ ಎಂದರು.