- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಪುತ್ತೂರು ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಫೋಟ, ಕಾಂಗ್ರೆಸ್ಸ್ ಕಾರ್ಯಕರ್ತರು ತಟಸ್ಥ

hemanath shetty [1]ಪುತ್ತೂರು : ಈ ಬಾರಿ ಪುತ್ತೂರು ಕಾಂಗ್ರೆಸ್ಸ್ ನಲ್ಲಿ ಎರಡು ಬಣಗಳಾಗಿದ್ದು, ಪಕ್ಷದೊಳಗೆ ಶಕುಂತಳಾ ಶೆಟ್ಟಿಯವರನ್ನು ಸೋಲಿಸಲು ರಣತಂತ್ರ ನಡೆಯುತ್ತಿದೆ. ಅದನ್ನು ಸರಿಪಡಿಸಲು ಪುತ್ತೂರು ಚುನಾವಣಾ ಕಚೇರಿಯಲ್ಲಿ ಗುರುವಾರ ನಡೆದ ಸಭೆಗೆ ದ.ಕ ಜಿಲ್ಲಾ ಕಾಂಗ್ರೆಸ್ಸ್ ಅಧ್ಯಕ್ಷ ಹರೀಶ್ ಕುಮಾರ್ ಹಾಗೂ ಎಐಸಿಸಿ ರಾಷ್ಟ್ರೀಯ ಕಾರ್ಯದರ್ಶಿ, ಮೈಸೂರು ವಿಭಾಗದ ಉಸ್ತುವಾರಿ ವಿಷ್ಣುನಾಥನ್ ಆಗಮಿಸಿದ್ದರು. ಅದರೂ ಭಿನ್ನಮತೀಯರು ಬಾರದೆ ಸಂಧಾನ ವಿಫಲಗೊಂಡಿದೆ.

ಕಾವು ಹೇಮನಾಥ ಶೆಟ್ಟಿಯವರು ಹಾಗೂ ಪುತ್ತೂರು ನಗರಸಭೆಯ ಸದಸ್ಯರು ಶಕುಂತಳಾ ಶೆಟ್ಟಿಯವರನ್ನು ಬೆಂಬಲಿಸದೆ, ಪಚಾರಕ್ಕೂ ಹೋಗದೆ ಸುಮ್ಮನಾಗಿದ್ದಾರೆ. ಹೇಮನಾಥ ಶೆಟ್ಟಿಯವರು ಈ ಬಾರಿ ಕಾಂಗ್ರೆಸ್ಸ್ ನಿಂದ ಸ್ಫರ್ಧಿಸಲು ಬಹಳಷ್ಟು ಪ್ರಯತ್ನಿಸಿದ್ದರು. ಇದಕ್ಕೆ ಕಾರಣನೂ ಇದೆ ಕಳೆದ ಅವಧಿಯ ಚುನಾವಣೆಯಲ್ಲಿ ಬಿಜೆಪಿಯಿಂದ ಕಾಂಗ್ರೆಸ್ಸ್‌ಗೆ ಬಂದ ಶಕುಂತಲಾ ಶೆಟ್ಟಿಯವರನ್ನು ಗೆಲ್ಲಿಸಿದ್ದೇ ಈ ಹೇಮನಾಥ ಶೆಟ್ಟಿ. ಬೂತ್ ಮಟ್ಟದಲ್ಲಿ ಅತೀ ಹೆಚ್ಚು ಮತಗಳನ್ನು ತನ್ನ ಏರಿಯಾದಲ್ಲಿಯೇ ತೆಗೆಸಿಕೊಟ್ಟಿದ್ದರು. ಹಾಗಾಗಿ ಬಿಜೆಪಿಗಿಂತ ೪೫೦೦ ದಷ್ಟು ಅಲ್ಪ ಅಂತರದ ಮತಗಳಿಂದ ಗೆಲುವು ಸಾಧಿಸಿದ್ದರು.

ಕಳೆದ ಬಾರಿ ಚುನಾವಣೆ ಎದುರಿಸುವಾಗ ಶಕುಂತಳಾ ಶೆಟ್ಟಿ ಇದು ನನ್ನ ಪ್ರತಿಷ್ಟೆಯ ಪ್ರಶ್ನೆ ಬಿಜೆಪಿ ವಿರುದ್ದ ಈ ಬಾರಿ ಗೆಲ್ಲಬೇಕು. ಬರುವ ಚುನಾವಣೆ ನಿನಗೆ ಬಿಟ್ಟುಕೊಡುತ್ತೇನೆ ಎಂದು ಹೇಮನಾಥ ಶೆಟ್ಟಿಗೆ ಹೇಳಿದ್ದರಂತೆ. ಅವರು ಮಾತು ಮುರಿದಿದ್ದಾರೆ ಎಂಬ ಅಸಮಾಧಾನ ಒಂದೆಡೆಯಾದರೆ. ಜಿಲ್ಲಾಪಂಚಾಯತ್ ಚುನಾವಣೆಗೆ ಹೇಮನಾಥ ಶೆಟ್ಟಿ ಪತ್ನಿಗೆ ಅವಕಾಶ ಮಾಡಿಕೊಡುವಲ್ಲಿಯೂ ಶಕುಂತಳಾ ಶೆಟ್ಟಿ ತಟಸ್ಥರಾಗಿದ್ದರು. ರಮಾನಾಥ ರೈಯವರು ಪ್ರಭಾವದಿಂದ ಹೇಮನಾಥ ಪತ್ನಿಯನ್ನು ಜಿಲ್ಲಾಪಂಚಾಯತ್‌ಗೆ ಸ್ಪರ್ಧಿಸುವ ಅವಕಾಶ ಒದಗಿ ಬಂದಿತ್ತು.

ಪುತ್ತೂರು ನಗರ ಸಭೆ ಯಲ್ಲಿರುವ ಅಧ್ಯಕ್ಷರಿಂದ ಹಿಡಿದು ಹೆಚ್ಚಿನ ಸದಸ್ಯರು ಹೇಮನಾಥ ಶೆಟ್ಟಿ ಸಂಬಂಧಿಕರೇ ಆಗಿರುವುದರಿಂದ ಶಕುಂತಳಾ ಶೆಟ್ಟಿ ಇವರ‍್ಯಾರನ್ನೂ ಇದುವರೆಗೆ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇರುವುದು ಅವರಿಗೆ ಮುಳುವಾಗುವುದರಲ್ಲಿದೆ. ಹೇಮನಾಥ ಶೆಟ್ಟಿ ಪುತ್ತೂರಿನಲ್ಲಿ ಪ್ರಭಾವೀ ವ್ಯಕ್ತಿಯಾಗಿರುವುದರಿಂದ ಶಕುಂತಳಾ ಶೆಟ್ಟಿ ಬಿಜೆಪಿಯಿಂದ ಬಂದವರು ಎಂಬ ಭಾವನೆ ಕಾಂಗ್ರೆಸ್ಸ್ ಕಾರ‍್ಯಕರ್ತರಲ್ಲಿದೆ.

ಹೇಮನಾಥ ಶೆಟ್ಟಿ ಹಾಗೂ ಶಕುಂತಳಾ ಶೆಟ್ಟಿ ಶೀತಲ ಸಮರದಿಂದ ಈ ಬಾರಿ ಬಿಜೆಪಿಗೆ ಲಾಭವಾಗಲಿದೆ ಎಂದು ಪುತ್ತೂರಿನಲ್ಲಿ ಜನ ಹೇಳಿಕೊಳ್ಳುತ್ತಿದ್ದಾರೆ.