- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮೋದಿಯನ್ನು ಟೀಕಿಸಲು ಆರಂಭಿಸಿದ ನಂತರ ನನಗೆ ಆಫರ್‌ ನೀಡುವುದನ್ನೇ ಬಾಲಿವುಡ್ ನಿಲ್ಲಿಸಿದೆ: ಪ್ರಕಾಶ್ ರೈ

bollywood [1]ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ಟೀಕಿಸಲು ಆರಂಭಿಸಿದ ನಂತರ ನನಗೆ ಯಾವುದೇ ಪಾತ್ರಗಳ ಆಫರ್‌ ನೀಡುವುದನ್ನೇ ಬಾಲಿವುಡ್ ನಿಲ್ಲಿಸಿದೆ ಎಂದು ನಟ ಪ್ರಕಾಶ್ ರೈ ಹೇಳಿದ್ದಾರೆ.

ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ಮೌನವನ್ನು ಪ್ರಶ್ನಿಸಿ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಮೊದಲ ಬಾರಿಗೆ ಟೀಕಿಸಿದ ಬಳಿಕ ತಮ್ಮನ್ನು ಹಿಂದಿ ಸಿನಿಮಾರಂಗ ಮೂಲೆಗುಂಪು ಮಾಡಿತು ಎಂದು ಸಂದರ್ಶನವೊಂದರಲ್ಲಿ ರೈ ದೂರಿದ್ದಾರೆ.

ಆದರೆ, ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ಯಾವುದೇ ಸಮಸ್ಯೆ ಇಲ್ಲ. ನಾನು ಬಹಿರಂಗವಾಗಿ ಧ್ವನಿ ಎತ್ತಲು ಆರಂಭಿಸಿದಾಗಿನಿಂದ ಹಿಂದಿ ಚಿತ್ರರಂಗದಿಂದ ಯಾವುದೇ ಆಹ್ವಾನ ಬಂದಿಲ್ಲ. ಆದರೆ, ಅದರ ಬಗ್ಗೆ ಚಿಂತೆಯಿಲ್ಲ. ನನ್ನ ಬಳಿ ಸಾಕಾಗುವಷ್ಟು ಹಣವಿದೆ ಎಂದು ಹೇಳಿದ್ದಾರೆ.

ಗೌರಿ ಸಾವು ನನ್ನನ್ನು ತೀವ್ರ ಘಾಸಿಗೊಳಿಸಿದೆ. ಆಕೆ ಪ್ರಶ್ನೆಗಳನ್ನು ಕೇಳುತ್ತಿದ್ದರು. ಆಕೆಯನ್ನು ಮೌನವಾಗಿಸಿದಾಗ ನನ್ನಲ್ಲಿ ತಪ್ಪಿತಸ್ಥ ಭಾವ ಮೂಡಿತು. ಆಕೆಯ ಹೋರಾಟದಲ್ಲಿ ಆಕೆಯನ್ನು ಒಂಟಿಯಾಗಿ ಬಿಡಬೇಕೇ? ನಾನು ಪ್ರಶ್ನಿಸಿದ್ದಷ್ಟೂ, ನನ್ನ ಧ್ವನಿಯನ್ನು ಅಡಗಿಸುವ ಪ್ರಯತ್ನಗಳು ಹೆಚ್ಚುತ್ತಿವೆ. ಅದು ವೈಯಕ್ತಿಕ ತೇಜೋವಧೆ ಇರಬಹುದು, ಬೆದರಿಕೆ ಇರಬಹುದು ಅಥವಾ ನನ್ನ ಕೆಲಸವನ್ನು ತಡೆಯುವ ಪ್ರಯತ್ನ ಇರಬಹುದು. ಅದನ್ನು ಮಾಡುತ್ತಿರುವುದು ಬಿಜೆಪಿ.

ನಾವೇಕೆ ಅಮಿತ್ ಶಾ ಬಗ್ಗೆ ಹೆಸರುತ್ತೇವೆ? ಆತನಲ್ಲಿ ನಾಯಕತ್ವದ ಯಾವ ಗುಣಗಳಿವೆ? ದೇಶಕ್ಕೆ ಯಾವುದಾದರೂ ಮಹೋನ್ನತ ಅಥವಾ ಪ್ರಗತಿಪರ ಚಿಂತನೆಗಳನ್ನೇನಾದರೂ ನೀಡಿದ್ದಾರೆಯೇ? ಎಂದು ಅಮಿತ್ ಶಾ ವಿರುದ್ಧ ರೈ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಮುಖಂಡರು ಹಿಂದಿನದ್ದರ ಕುರಿತು ಮಾತನಾಡುತ್ತಾರೆ. ನೆಹರೂ ಏನು ಮಾಡಿದರು? ಟಿಪ್ಪು ಸುಲ್ತಾನ್ ಏನು ಮಾಡಿದ? ಸನಾತನ ಧರ್ಮ ಏನು ಹೇಳುತ್ತದೆ? ನನ್ನ ಎರಡು ಪೀಳಿಗೆಯ ಹಿಂದಿನ ತಲೆಮಾರಿನ ನನ್ನ ಮುತ್ತಜ್ಜನ ಕುರಿತು ನನಗೆ ತಿಳಿದಿಲ್ಲ. ಟಿಪ್ಪು ಸುಲ್ತಾನ್ ಕಟ್ಟಿಕೊಂಡು ನಾನೇನು ಮಾಡಲಿ? ಎಂದು ಬಿಜೆಪಿಯನ್ನು ಟೀಕಿಸಿದ್ದಾರೆ.