SSLC ಫಲಿತಾಂಶ ಪ್ರಕಟ ಉಡುಪಿಗೆ ಮೊದಲ ಸ್ಥಾನ, ಯಾದಗಿರಿಗೆ ಮತ್ತೆ ಕೊನೆಯ ಸ್ಥಾನ

11:48 AM, Monday, May 7th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

SSLC-resultಉಡುಪಿ: 2018 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸೋಮವಾರ (ಮೇ7) ಹೊರಬಿದ್ದಿದೆ. ಈ ಬಾರಿ ಒಟ್ಟಾರೆ ಶೇ.71.93 ಫಲಿತಾಂಶ ಬಂದಿದೆ. ಜಿಲ್ಲಾವಾರು ಫಲಿತಾಂಶದಲ್ಲಿ ಉಡುಪಿಗೆ ಮೊದಲ ಸ್ಥಾನದಲ್ಲಿದ್ದರೆ, ಯಾದಗಿರಿ ಕೊನೆಯ ಸ್ಥಾನದಲ್ಲಿದೆ. ಶೇಕಡಾ 4ರಷ್ಟು ಹೆಚ್ಚಳವಾಗಿದೆ. ಈ ಬಾರಿಯೂ, ಬಾಲಕಿಯರೇ ಮೇಲುಗೈ, ಶೇ. 78.01ವಿದ್ಯಾರ್ಥಿನಿಯರು ತೇರ್ಗಡೆ, ಶೇ.66.56 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಕಳೆದ ಬಾರಿ 67.87ಷ್ಟು ಫಲಿತಾಂಶ ಬಂದಿತ್ತು. ಈ ಬಾರಿ ಇಬ್ಬರು ವಿದ್ಯಾರ್ಥಿಗಳು ರಾಜ್ಯಕ್ಕೆ ಟಾಪರ್, 625ಕ್ಕೆ 625 ಅಂಕವನ್ನು ಇಬ್ಬರು ವಿದ್ಯಾರ್ಥಿಗಳು ಪಡೆದಿದ್ದು, 624 ಅಂಕಗಳನ್ನು ಎಂಟು ವಿದ್ಯಾರ್ಥಿಗಳು ಪಡೆದಿದ್ದಾರೆ. ಗ್ರಾಮೀಣ ಭಾಗದ ಶೇ.74 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ನಗರ ಭಾಗದಲ್ಲಿ ಶೇ.69.38 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಉಡುಪಿ ಮೊದಲ ಸ್ಥಾನದಲ್ಲಿದ್ದರೆ, ಉತ್ತರ ಕನ್ನಡ ದ್ವಿತೀಯ, ಚಿಕ್ಕೋಡಿ ಮೂರನೇ ಸ್ಥಾನದಲ್ಲಿದೆ, ಯಾದಗಿರಿ ಕೊನೆಯ ಸ್ಥಾನದಲ್ಲಿದೆ.

ಬೆಂಗಳೂರು ನಗರ ಜಿಲ್ಲೆಗೆ 22 ನೇ ಸ್ಥಾನ ಪಡೆದುಕೊಂಡಿದೆ. ಮಧ್ಯಾಹ್ನ ಒಂದು ಗಂಟೆ ನಂತರ ಅಂತರ್ಜಾಲ ತಾಣದಲ್ಲಿ ಫಲಿತಾಂಶ ಲಭ್ಯವಾಗಲಿದ್ದು, ಮೇ 8ರ ಮಂಗಳವಾರ ಮಧ್ಯಾಹ್ನ 12ರ ವೇಳೆಗೆ ರಾಜ್ಯದ ಎಲ್ಲಾ ಪ್ರೌಢಶಾಲೆಗಳಲ್ಲಿ ಪ್ರಕಟಿಸಲಾಗುತ್ತದೆ. ಈ ಬಾರಿ ಒಟ್ಟು 4,56,103 ಬಾಲಕರು ಮತ್ತು 3,98,321 ಬಾಲಕಿಯರೂ ಸೇರಿದಂತೆ ಒಟ್ಟು 8,54,424 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಬರೆದಿದ್ದರು. ಇದರಲ್ಲಿ 70,253 ಮಂದಿ ಪುನರಾವರ್ತಿತ ವಿದ್ಯಾರ್ಥಿಗಳು ಮತ್ತು 23,199 ಮಂದಿ ಖಾಸಗಿ ವಿದ್ಯಾರ್ಥಿಗಳು ಸೇರಿದ್ದಾರೆ.

ಏಪ್ರಿಲ್ 15 ರಿಂದ 25 ರವರೆಗೆ ಉತ್ತರ ಪತ್ರಿಕೆ ಮೌಲ್ಯಮಾಪನ ನಡೆದಿತ್ತು. ಎಸ್‌ಎಸ್‌ಎಸ್‌ಸಿ ಬೋರ್ಡ್ ಪ್ರಧಾನ ನಿರ್ದೇಶಕಿ ಶಾಲಿನಿ ರಜನೀಶ್‌ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದ್ದಾರೆ.ಇದೇ ಮೊದಲ ಬಾರಿಗೆ ಅಂಕಗಳ ಮರುಎಣಿಕೆ ಮತ್ತು ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನ ಹಾಗೂ ಜೆರಾಕ್ಸ್ ಪ್ರತಿ ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಮತ್ತು ಶುಲ್ಕ ಪಾವತಿ ಮಾಡುವ ವ್ಯವಸ್ಥೆಯನ್ನು ಮಂಡಳಿ ಜಾರಿಗೆ ತಂದಿದೆ. ಫಲಿತಾಂಶವನ್ನು www.sslc.kar.nic.in, www.karresults.nic.in ನಲ್ಲಿ ವೀಕ್ಷಿಸಬಹುದು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English