- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ವಂಚನೆಯಲ್ಲಿ ಮೋದಿ, ಯಡಿಯೂರಪ್ಪ ಸಮಾನರು: ಶಾಸಕಿ ಶಕುಂತಳಾ ಶೆಟ್ಟಿ

shakuntala-shetty [1]ಪುತ್ತೂರು: ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿ ಪ್ರಕಾರ ನೀಡಲಾದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವುದಾಗಿ ಹೇಳಿದ ಕೇಂದ್ರ ಸರಕಾರ ಅನಂತರ ಪ್ರತ್ಯೇಕವಾದಿಗಳ ಜತೆ ಸೇರಿ ಸರಕಾರ ರಚಿಸಿದೆ. ಅದೇ ರೀತಿ ಯಡಿಯೂರಪ್ಪ ಅವರು ಭ್ರಷ್ಟಾಚಾರ ನಿರ್ಮೂಲನೆ ಮಾಡುವುದಾಗಿ ತಾವೇ ಸಿಕ್ಕಿ ಬೀಳಲಿಲ್ಲವೇ? ಎಂದು ಕಾಂಗ್ರೆಸ್‌ ಅಭ್ಯರ್ಥಿ ಶಕುಂತಳಾ ಟಿ. ಶೆಟ್ಟಿ ಪ್ರಶ್ನಿಸಿದ್ದಾರೆ. ಬುಧವಾರ ಚುನಾವಣಾ ಪ್ರಚಾರ ಕಾರ್ಯದ ಸಂದರ್ಭದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.

ನರೇಂದ್ರ ಮೋದಿಯವರು ಚುನಾವಣಾ ಪೂರ್ವದಲ್ಲಿ ಜನತೆಗೆ ನೀಡಿದ ಯಾವ ಭರವಸೆಯನ್ನು ಈಡೇರಿಸಿದ್ದಾರೆ? ಎಂದು ಪ್ರಶ್ನಿಸಿದ ಅವರು, ಬಾಂಗ್ಲಾ ನುಸುಳುಕೋರನ್ನು ಹಿಮ್ಮೆಟ್ಟಿಸುವುದಾಗಿ ಹೇಳಿ ಈಗ 110 ಗ್ರಾಮಗಳನ್ನು ಅವರಿಗೇ ಬಿಟ್ಟುಕೊಟ್ಟಿದ್ದಾರೆ. ಇಂತಹ ದೇಶಪ್ರೇಮದ ಕಪಟ ನಾಟಕದ ಮೂಲಕ ಜನರನ್ನು ಮರಳು ಮಾಡಿ ವಂಚಿಸುವ ಕೆಲಸವನ್ನು ಕೇಂದ್ರ ಸರಕಾರ ಮಾಡುತ್ತಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗ ಯಡಿಯೂರಪ್ಪ ಅವರು ನೀಡಿದ ಭ್ರಷ್ಟಾಚಾರ ನಿರ್ಮೂಲನೆಯ ಆಶ್ವಾಸನೆ ಎಲ್ಲರಲ್ಲೂ ವಿಶ್ವಾಸ ಮೂಡಿಸಿತ್ತು. ಆದರೆ ತಾವೇ ಲಂಚದ ಹಣವನ್ನು ಪಡೆಯುವುದರ ಜತೆಗೆ ಭ್ರಷ್ಟ ಎನ್ನುವ ಪಟ್ಟಿಯೊಂದಿಗೆ ಜೈಲು ಸೇರಿದಾಗ ಜನತೆಯ ಆಶಾಕಿರಣವೇ ಕುಸಿದುಬಿದ್ದಿದೆ. ಈಗ ಅದೇ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಜೆಪಿ ಘೋಷಣೆ ಮಾಡಿದೆ. ಹಾಗಾದರೆ ಬಿಜೆಪಿ ವರಿಷ್ಠರು, ಮುಖಂಡರು ಜನತೆಯ ಕುರಿತು ಏನು ತಿಳಿದುಕೊಂಡಿದ್ದಾರೆ? ಎಂದು ಪ್ರಶ್ನಿಸಿದರು.

ಡಿ.ವಿ. ಸದಾನಂದ ಗೌಡ ಅವರು ಪುತ್ತೂರಿನಿಂದ ರಾಜಕೀಯ ಅವಕಾಶ ಪಡೆದು ಮುಖ್ಯಮಂತ್ರಿಯಾಗಿ, ಗೃಹ ಮಂತ್ರಿಯಾಗಿ ಆಯ್ಕೆಯಾದರೂ ಪುತ್ತೂರಿನ ಜನತೆಯನ್ನು ನೆನಪಿಸಿಕೊಳ್ಳದೆ ಇಲ್ಲಿನ ಅಭಿವೃದ್ಧಿಗೆ ಪುಡಿಗಾಸೂ ನೀಡಿಲ್ಲ, ಯಾವುದೇ ಯೋಜನೆಯನ್ನೂ ತರಲಿಲ್ಲ. ಈಗ ಪುತ್ತೂರು ವಿಧಾನಸಭಾ ಕ್ಷೇತ್ರದ ಹೊಸ ಆಶ್ವಾಸನೆಯ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದ್ದಾರೆ. ಇದನ್ನು ಜನರು ನಂಬಿ ಮತದಾನ ಮಾಡಲು ಮಾಡುವರೇ? ಅಥವಾ ಇವರಿಗೆ ಭರವಸೆ ನೀಡಿ ಮತ ಯಾಚಿಸುವ ನೈತಿಕತೆ ಇದೆಯೇ? ಎಂದು ಪ್ರಶ್ನಿಸಿದರು.

ನನ್ನ ಆಸ್ತಿಯ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ನಿಜಕ್ಕೂ ಆಸ್ತಿ, ಹಣ ಮಾಡಿರುವವರು ಯಾರು? ಎಂಬುದನ್ನು ದರ್ಬೆ ಸರ್ಕಲ್‌, ಪತ್ರಾವೋ ಸರ್ಕಲ್‌, ಸಾಮೆತ್ತಡ್ಕ ಬಡಾವಣೆ ಪರಿಸರದಲ್ಲಿ ಹುಡುಕುವ ಕೆಲಸವನ್ನು ಅವರು ಮಾಡಬೇಕು ಎಂದು ಶಕುಂತಳಾ ಶೆಟ್ಟಿ ಸವಾಲು ಹಾಕಿದರು.

ರಾಜ್ಯದಲ್ಲಿ ಶೋಭಾ ಕರಂದ್ಲಾಜೆ ಸಚಿವೆಯಾಗಿದ್ದಾಗ ಎಲ್ಲಿಗೆ 24 ಗಂಟೆ ವಿದ್ಯುತ್‌ ನೀಡಿದ್ದಾರೆ ಎಂದು ಪ್ರಶ್ನಿಸಿದ ಶೆಟ್ಟಿ, ವಿಶ್ವದಲ್ಲೇ ನಂ. 1 ಸೋಲಾರ್‌ಪಾರ್ಕ್‌ನ್ನು ಕರ್ನಾಟಕ ದಲ್ಲಿ ಆರಂಭಿಸುವ ಮೂಲಕ ವಿದ್ಯುತ್‌ ಸಂಬಂಧಿ ಎಲ್ಲ ಸಮಸ್ಯೆಗಳ ನಿವಾರಣೆಗೆ ನಿರಂತರ ಶ್ರಮಿಸಿದವರು ಕಾಂಗ್ರೆಸ್‌ ಸಚಿವ ಡಿ.ಕೆ. ಶಿವಕುಮಾರ್‌. ರೈತರಿಗೆ, ಜನಸಾಮಾನ್ಯರಿಗೆ ವಿದ್ಯುತ್‌ ಸಮಸ್ಯೆ ಕಂಡಾಗ ಡಿ.ಕೆ. ಶಿವಕುಮಾರ್‌ ಅವರಂತೆ ಸ್ಪಂದಿಸುವ ಬೇರೆ ಯಾವುದೇ ಸಚಿವರನ್ನು ನಾನು ಕಂಡಿಲ್ಲ ಎಂದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಹಮ್ಮದ್‌ ಬಡಗನ್ನೂರು, ವಕ್ತಾರ ಕುಂಬ್ರ ದುರ್ಗಾ ಪ್ರಸಾದ್‌ ರೈ, ಪ್ರಚಾರ ಸಮಿತಿಯ ಭಾಸ್ಕರ ಗೌಡ ಕೋಡಿಂಬಾಳ ಸಹಿತ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು .

ಪುತ್ತೂರು ಕ್ಷೇತ್ರದ ಅಭಿವೃದ್ಧಿಗೆ ಈವರೆಗೆ ಯಾರೂ ನೀಡದಷ್ಟು 1 ಸಾವಿರ ಕೋಟಿ ರೂ. ಅನುದಾನವನ್ನು ತರಿಸುವಲ್ಲಿ ಯಶಸ್ವಿ ಯಾಗಿದ್ದೇನೆ. ಅಭಿವೃದ್ಧಿ ಏನು ಎಂಬುದಕ್ಕೆ ಕಣ್ಣ ಮುಂದೆ ನಡೆದಿರುವ ಕೆಲಸ ಕಾರ್ಯ ಗಳೇ ಸಾಕ್ಷಿ. ಇದನ್ನು ಪ್ರತ್ಯೇಕವಾಗಿ ವಿವರಿಸುವ ಅಗತ್ಯತೆ ಬಿಜೆಪಿಯವರಿಗೆ ಕಂಡಿದೆಯೇ ಹೊರತು ಮತದಾರರಿಗೆ ಕಂಡಿಲ್ಲ ಎಂದು ವ್ಯಂಗ್ಯವಾಡಿದರು.