- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಅತಂತ್ರ ವಿಧಾನಸಭೆ: ಮರುಕಳಿಸಿದ ಹದಿನಾಲ್ಕು ವರ್ಷದ ಹಿಂದಿನ ಇತಿಹಾಸ!

siddarmah [1]ಬೆಂಗಳೂರು: ಬಹುನಿರೀಕ್ಷಿತ ಕರ್ನಾಟಕ ವಿಧಾನಸಭೆ ಫಲಿತಾಂಶದಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಬಾರದೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಮೈತ್ರಿ ಸರ್ಕಾರ ರಚನೆಗಾಗಿ ಮೂರು ಪಕ್ಷಗಳ ನಡುವೆ ಜಂಘೀ ಕುಸ್ತಿ ಆರಂಭಗೊಂಡಿದ್ದು, ಮೊದಲ ಪ್ರಯತ್ನದಲ್ಲಿ ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚಿಸುವ ದಿಕ್ಕಿನತ್ತ ದಾಪುಗಾಲಿಟ್ಟಿವೆ.

ಹದಿನಾಲ್ಕು ವರ್ಷದ ಹಿಂದಿನ ಇತಿಹಾಸ ಈ ಬಾರಿ ಮತ್ತೆ ಮರುಕಳಿಸಿದೆ. 2004ರ ವಿಧಾನಸಭೆ ಚುನಾವಣೆಯಲ್ಲಿ ಇದೇ ರೀತಿಯ ಅತಂತ್ರ ಸ್ಥಿತಿ ನಿರ್ಮಾಣವಾಗಿತ್ತು. ಆಗ ಮೊದಲ ಹಂತದಲ್ಲಿ ಜೆಡಿಎಸ್, ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದವು. ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದರು. ಎರಡು ವರ್ಷದಲ್ಲೇ ಜೆಡಿಎಸ್, ಕಾಂಗ್ರೆಸ್‍ಗೆ ಕೈಕೊಟ್ಟು ಬಿಜೆಪಿ ಜೊತೆ ಸೇರಿ ಹೊಸ ಸರ್ಕಾರ ರಚಿಸಿತ್ತು. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಯಡಿಯೂರಪ್ಪ ಉಪಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು.

ಈ ಬಾರಿಯೂ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗದೆ ಇರುವುದರಿಂದ ಮತ್ತೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. 104 ಸ್ಥಾನಗಳನ್ನು ಪಡೆದಿರುವ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ, 78 ಸ್ಥಾನ ಗಳಿಸಿರುವ ಕಾಂಗ್ರೆಸ್ ಎರಡನೇ ದೊಡ್ಡ ಪಕ್ಷವಾಗಿದೆ. ಜೆಡಿಎಸ್ 38 ಸ್ಥಾನ ಗಳಿಸಿ ಕಿಂಗ್ ಮೇಕರ್ ಸ್ಥಾನದಲ್ಲಿದೆ.

ರಾಜ್ಯದಲ್ಲಿ ಎರಡನೇ ಬಾರಿಗೆ ಬಿಎಸ್‍ಪಿ ಖಾತೆ ತೆರೆದಿದೆ. ಕೊಳ್ಳೆಗಾಲದಲ್ಲಿ ಮಹೇಶ್ ಅವರು ಬಿಎಸ್‍ಪಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ರಾಣೆಬೆನ್ನೂರಿನಲ್ಲಿ ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅವರನ್ನು ಸೋಲಿಸಿ ಪಕ್ಷೇತರ ಅಭ್ಯರ್ಥಿ ಶಂಕರ್ ಅವರು ಜಯಗಳಿಸಿದ್ದಾರೆ. ಇನ್ನು ಮುಳಬಾಗಿಲಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ಇರಲಿಲ್ಲ. ಕಾಂಗ್ರೆಸ್ ಬೆಂಬಲಿತ ಎಚ್.ನಾಗೇಶ್ ಜಯಗಳಿಸಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಎರಡನೇ ದೊಡ್ಡ ಪಕ್ಷವಾಗಿ ಕಾಂಗ್ರೆಸ್ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವುದು ಅನಿವಾರ್ಯವಾಗಿದ್ದು, ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವುದು ಅನಿವಾರ್ಯವಾಗಿದೆ. ಜೆಡಿಎಸ್‍ನ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದ್ದು, ಕಾಂಗ್ರೆಸ್‍ನಿಂದ ಉಪಮುಖ್ಯಮಂತ್ರಿ ಸ್ಥಾನಕ್ಕಾಗಿ ಪೈಪೋಟಿ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.