- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಆಪರೇಷನ್‌ ಕಮಲದ ಭೀತಿ, ಈಗಲ್‌ಟನ್‌ನತ್ತ ಕಾಂಗ್ರೆಸ್‌ ಶಾಸಕರು

congress-bus [1]ಬೆಂಗಳೂರು: ರಾಜ್ಯದಲ್ಲಿ ಸರ್ಕಾರ ರಚನೆಗೆ ಕಾಂಗ್ರೆಸ್ – ಬಿಜೆಪಿ ನಡುವೆ ಭಾರಿ ಸರ್ಕಸ್‌ ನಡೆಯುತ್ತಿದೆ. ಮತ್ತೊಂದು ಕಡೆ ಬಿಜೆಪಿ ಆಪರೇಷನ್‌ ಕಮಲ ನಡೆಸುವ ಸಾಧ್ಯತೆ ಇದೆ ಎಂಬ ಗುಮಾನಿ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ ಶಾಸಕರನ್ನು ರಕ್ಷಿಸಿಕೊಳ್ಳಲು ಮುಂದಾಗಿದ್ದು, ರೆಸಾರ್ಟ್‌ ರಾಜಕೀಯಕ್ಕೆ ಮುಂದಾಗಿದೆ.

ಬಿಡದಿಯ ಈಗಲ್ ಟನ್ ರೆಸಾರ್ಟ್‌ ಗೆ ಕಾಂಗ್ರೆಸ್ ಶಾಸಕರನ್ನು ಕರೆದೊಯ್ಯಲು ಕೆಪಿಸಿಸಿ ಕಚೇರಿಗೆ ಖಾಸಗಿ ಐಶಾರಾಮಿ ಬಸ್‌ ಬಂದಿದ್ದು, ನೂತನ ಎಂಎಲ್‌ಗಳನ್ನು ಮೊದಲಿಗೆ ರಾಜ್ಯಪಾಲರ ಬಳಿ ಕರೆದುಕೊಂಡು ಹೋಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಆ ಬಳಿಕ ಈ ಬಸ್‌ ನೇರವಾಗಿ ಈಗಲ್‌ ಟನ್‌ ರೆಸಾರ್ಟ್‌ಗೆ ತೆರಳಲಿದೆ.

ಆನಂದ್‌ ಸಿಂಗ್‌, ನಾಗೇಂದ್ರ, ಪಕ್ಷೇತರ ಶಾಸಕ ನಾಗೇಶ್‌ ಸೇರಿದಂತೆ 79 ಶಾಸಕರು ರೆಸಾರ್ಟ್‌ಗೆ ತೆರಳಲಿದ್ದಾರೆ. ಈ ಎಲ್ಲದರ ಹೊಣೆಯನ್ನು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್‌ ಹಾಗೂ ಮಾಜಿ ಪವರ್‌ ಮಿನಿಸ್ಟರ್‌ ಡಿ.ಕೆ. ಶಿವಕುಮಾರ್‌ ಹೊತ್ತಿದ್ದಾರೆ.

100ಕ್ಕೂ ಹೆಚ್ಚು ರೂಂ ಬುಕ್‌: ಈಗಾಗಲೇ ರೆಸಾರ್ಟ್‌‌‌ನಲ್ಲಿ 100 ಕ್ಕು ಹೆಚ್ಚು ರೂಂ ಗಳು ಬುಕ್ಕಿಂಗ್ ಮಾಡಲಾಗಿದ್ದು, ತಡ ರಾತ್ರಿಯೇ ಈ ರೂಂಗಳನ್ನು ಕಾಂಗ್ರೆಸ್ ನಾಯಕರು ಬುಕ್‌ ಮಾಡಿದ್ದಾರೆ. ಶಾಸಕರನ್ನು ಕರೆತರುವ ಜವಾಬ್ದಾರಿಯನ್ನು ಡಿ .ಕೆ‌‌.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಹೆಗಲಿಗೆ ಹಾಕಲಾಗಿದೆ. ಶಾಸಕರು ರೆಸಾರ್ಟ್‌‌ಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ರೆಸಾರ್ಟ್ ಮುಂದೆ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.