- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ವಾಟ್ಸ್‌ಆ್ಯಪ್‌ನಲ್ಲಿ ಸುಳ್ಳು ಸಂದೇಶ ರವಾನೆ: ಪೊಲೀಸರಿಂದ ಸ್ವಯಂ ಪ್ರೇರಿತ ಪ್ರಕರಣ ದಾಖಲು

vipul-kumar [1]ಮಂಗಳೂರು: ಕೆಲವು ವರ್ಷಗಳ ಹಿಂದೆ ಚರ್ಚ್‌ಗಳ ಮೇಲೆ ದುಷ್ಕರ್ಮಿಗಳು ನಡೆಸಿದ ದಾಂಧಲೆಯ ಚಿತ್ರವನ್ನು ಮುಂದಿಟ್ಟುಕೊಂಡು ನಿನ್ನೆ ಮೊನ್ನೆ ನಡೆದಿದೆ ಎಂದು ಬಿಂಬಿಸಿ ಕೆಲವರು ವಾಟ್ಸ್‌ಆ್ಯಪ್‌ನಲ್ಲಿ ಸುಳ್ಳು ಸಂದೇಶ ರವಾನೆ ಮಾಡಿರುದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ ಇದೀಗ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ವಿಫುಲ್ ಕುಮಾರ್ ತನ್ನ ಕಚೇರಿಯಲ್ಲಿ ಶುಕ್ರವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಂತಹ ಸಂದೇಶ ರವಾನೆಯಿಂದ ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗಲಿದೆ. ಆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ತನಿಖೆ ನಡೆಸಿ ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗುವಂತೆ ಕ್ರಮ ಜರುಗಿಸಲಾಗುವುದು ಎಂದರು.

ಇತ್ತೀಚಿನ ಚುನಾವಣೆಯ ಬಳಿಕ ಚರ್ಚ್ ಮೇಲೆ ದಾಳಿ ನಡೆದಿಲ್ಲ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸಂದೇಶ ರವಾನಿಸಲಾಗುತ್ತದೆ. ಯಾರೋ ರವಾನಿಸಿದ್ದನ್ನು ಪರಾಮರ್ಶಿಸದೆ ಇತರರಿಗೆ ರವಾನೆ ಮಾಡಿದರೆ ಅಂತಹವರ ಮೇಲೂ ಕಾನೂನು ಕ್ರಮ ಕೈಗೊಳ್ಳುವ ಅವಕಾಶವಿದೆ. ಇತ್ತೀಚೆಗೆ ಮದ್ರಾಸ್ ಹೈಕೋರ್ಟ್ ಈ ಬಗ್ಗೆ ತೀರ್ಪನ್ನು ಕೂಡ ನೀಡಿದೆ. ಹಾಗಾಗಿ ವಾಟ್ಸ್‌ಆ್ಯಪ್ ಮತ್ತಿತರ ಜಾಲತಾಣದಲ್ಲಿ ಸಂದೇಶ ರವಾನಿಸುವವರು ಎಚ್ಚರಿಕೆ ವಹಿಸಬೇಕು ಎಂದು ವಿಫುಲ್ ಕುಮಾರ್ ಹೇಳೀದರು.

ಸಾಮಾಜಿಕ ಜಾಲತಾಣದ ಮೇಲೆ ನಿಗಾ ಇಡುವ ಸಲುವಾಗಿ ‘ಸೋಶಿಯಲ್ ಮೀಡಿಯಾ ಮೋನಿಟರ್ ಸೆಲ್’ವೊಂದನ್ನು ಆಯುಕ್ತಾಲಯದಲ್ಲಿ ಸ್ಥಾಪಿಸಲಾಗಿದೆ ಎಂದು ವಿಫುಲ್ ಕುಮಾರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಟ್ರಾಫಿಕ್‌ಗಾಗಿ ಹೊಸ ವಾಟ್ಸ್‌ಆ್ಯಪ್ ಸಂಖ್ಯೆ: ಟ್ರಾಫಿಕ್ ಸಮಸ್ಯೆ, ಅವುಗಳಿಗೆ ಪರಿಹಾರ ಅಥವಾ ಸಲಹೆಗಳಿಗಾಗಿ ಆಯುಕ್ತಾಲಯವು ಹೊಸ ವಾಟ್ಸ್‌ಆ್ಯಪ್ (9480802303)ಸಂಖ್ಯೆಯೊಂದರ ಖಾತೆ ತೆರೆದಿದೆ. ಸಾರ್ವಜನಿಕರು ಆಯುಕ್ತಾಲಯ ವ್ಯಾಪ್ತಿಯ ಸಂಚಾರ ದಟ್ಟನೆ, ಉಲ್ಲಂಘನೆ ಇತ್ಯಾದಿ ಸಮಸ್ಯೆಗಳಲ್ಲದೆ, ಪರಿಹಾರಕ್ಕಾಗಿ ಈ ಸಂಖ್ಯೆಯನ್ನು ಬಳಸಿಕೊಳ್ಳಬಹುದು ಎಂದು ವಿಫುಲ್ ಕುಮಾರ್ ತಿಳಿಸಿದರು.

ಚುನಾವಣಾ ಫಲಿತಾಂಶದ ಬಳಿಕ ವಿಜಯೋತ್ಸವ ಸಂದರ್ಭ ಅಡ್ಯಾರ್‌ಪದವಿನಲ್ಲಿ ನಡೆದ ಕಲ್ಲು ತೂರಾಟ ಹಾಗೂ ಹಲ್ಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ 8 ಮಂದಿ ಆರೋಪಿಗಳನ್ನು ಮಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಾದ ಹರೀಶ್ ಪೂಜಾರಿ, ನಿಶಾಂತ್, ನಿತೇಶ್, ಅಭಿಷೇಕ್, ದಾವೂದ್ ಯಾನೆ ದಾವೂದ್ ಹಕೀಂ, ಮುಹಮ್ಮದ್ ನೌಷಾದ್, ಶಾಹುಲ್ ಹಮೀದ್ ಹಾಗೂ ಮುಹಮ್ಮದ್ ಜುನೈದ್ ಎಂಬವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದರು.