- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

2ನೇ ಬಾರಿಗೆ ಸ್ಪೀಕರ್‌ ಸ್ಥಾನ ಅಲಂಕರಿಸಿದ ರಮೇಶ್‌ ಕುಮಾರ್‌

ramesh-kumar [1]ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸ್ಪೀಕರ್ ಆಗಿ ಕಾಂಗ್ರೆಸ್ ಪಕ್ಷದ ಕೆ.ಆರ್.ರಮೇಶ್ ಕುಮಾರ್ ಅವಿರೋಧ ಆಯ್ಕೆಯಾಗಿದ್ದಾರೆ.

ಕೊನೆ ಕ್ಷಣದಲ್ಲಿ ಬಿಜೆಪಿಯ ಸುರೇಶ್ ಕುಮಾರ್ ಅವರು ನಾಮಪತ್ರ ವಾಪಸ್ ಪಡೆದ ಹಿನ್ನೆಲೆಯಲ್ಲಿ ರಮೇಶ್ ಕುಮಾರ್ ಅವರು ಸ್ಪೀಕರ್ ಆಗಿ ಅವಿರೋಧವಾಗಿ ಆಯ್ಕೆಯಾದರು. ವಿಧಾನಸಭೆ ಕಲಾಪ ಮಧ್ಯಾಹ್ನ 12.20ರ ಸುಮಾರಿಗೆ ಆರಂಭವಾಗುತ್ತಿದ್ದಂತೆಯೇ ಕಾರ್ಕಳ ಬಿಜೆಪಿ ಶಾಸಕ ಸುನೀಲ್ ಕುಮಾರ್ ಅವರು, ಸ್ಪೀಕರ್ ಸ್ಥಾನಕ್ಕೆ ಸುರೇಶ್ ಕುಮಾರ್ ಅವರನ್ನು ಸೂಚಿಸುತ್ತಿಲ್ಲ ಎಂದು ಹೇಳಿದರು. ಅದಕ್ಕೆ ಸಮ್ಮತಿ ಇರುವುದಾಗಿ ಸುರೇಶ್ ಕುಮಾರ್ ಹಂಗಾಮಿ ಸ್ಪೀಕರ್ ಕೆ.ಜಿ.ಬೋಪಯ್ಯಗೆ ಹೇಳಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಅವರು ರಮೇಶ್ ಕುಮಾರ್ ಅವರ ಹೆಸರನ್ನು ಸ್ಪೀಕರ್ ಸ್ಥಾನಕ್ಕೆ ಸೂಚಿಸಿದರು. ನೂತನ ಡಿಸಿಎಂ ಡಾ. ಜಿ. ಪರಮೇಶ್ವರ್ ಅವರು ಅದನ್ನು ಅನುಮೋದಿಸಿದರು. ಧ್ವನಿಮತದ ಬಳಿಕ ರಮೇಶ್ ಕುಮಾರ್ ಅವರನ್ನು ಸ್ಪೀಕರ್ ಆಗಿ ಅವಿರೋಧವಾಗಿ ಆಯ್ಕೆ ಮಾಡಿರುವುದಾಗಿ ಹಂಗಾಮಿ ಸ್ಪೀಕರ್ ಕೆ.ಜಿ.ಬೋಪಯ್ಯ ಘೋಷಿಸಿದರು.

ತದನಂತರ ನೂತನ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಸಭಾಧ್ಯಕ್ಷ ಪೀಠಕ್ಕೆ ಕರೆತಂದರು. ಬಳಿಕ ರಮೇಶ್ ಕುಮಾರ್ ಅವರು ಇಬ್ಬರಿಗೂ ಹಸ್ತಲಾಘವ ಮಾಡುವ ಮೂಲಕ ಸ್ಪೀಕರ್ ಪೀಠವನ್ನು ಅಲಂಕರಿಸಿದರು.

ಸಿಎಂ ಕುಮಾರಸ್ವಾಮಿ, ಡಿಸಿಎಂ ಡಾ. ಜಿ.ಪರಮೇಶ್ವರ್, ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಮತ್ತಿತರ ನಾಯಕರು ನೂತನ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಅಭಿನಂದಿಸಿದರು.

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೂಟ ಇಬ್ಬರು ಪಕ್ಷೇತರರನ್ನು ಒಳಗೊಂಡಂತೆ ಒಟ್ಟು 117 ಮಂದಿ ಶಾಸಕರ ಸಂಖ್ಯಾ ಬಲವನ್ನು ಹೊಂದಿದೆ. ಬಿಜೆಪಿ 104 ಸಂಖ್ಯಾ ಬಲವನ್ನು ಹೊಂದಿದೆ. ಚುನಾವಣೆ ನಡೆದಿದ್ದರೆ ಬಿಜೆಪಿ ಅಭ್ಯರ್ಥಿ ಗೆಲುವು ಕಷ್ಟ ಎಂದು ಅರ್ಥೈಸಿಕೊಂಡ ವರಿಷ್ಠರು ಸುರೇಶ್‌‌ ಕುಮಾರ್ ಸ್ಪೀಕರ್ ಚುನಾವಣೆಯಲ್ಲಿ ಸ್ಪರ್ಧಿಸದೆ ಇರುವ ನಿರ್ಧಾರ ಕೈಗೊಂಡರು.

ಬಹುತೇಕ ವಿಧಾನಸಭೆಯಲ್ಲಿ ಸಭಾಧ್ಯಕ್ಷರ ಆಯ್ಕೆ ಅವಿರೋಧವಾಗಿ ನಡೆಯುವುದೇ ರೂಢಿಯಾಗಿದೆ. ಸ್ಪೀಕರ್ ಸ್ಥಾನ ಪಕ್ಷಾತೀತವಾಗಿದ್ದು, ಎಲ್ಲಾ ಪಕ್ಷಗಳಿಗೂ ಸಮಾನ ನ್ಯಾಯ ಕೊಡುವಂತಹ ಜವಾಬ್ದಾರಿ ಹೊಂದಿದೆ. ಹೀಗಾಗಿ ಸ್ಪೀಕರ್ ಆಯ್ಕೆಗೆ ಬಹುಮತ ಇರುವ ಪಕ್ಷಗಳಿಗೆ ಸಾಧ್ಯವಾಗಲಿದ್ದು, ಪ್ರತಿಪಕ್ಷಗಳು ಸ್ಪರ್ಧೆಯಿಂದ ಹಿಂದೆ ಸರಿಯುತ್ತವೆ.

ರಮೇಶ್ ಕುಮಾರ್ ಅವರ ಆಯ್ಕೆಯಲ್ಲೂ ಅದೇ ರೀತಿಯ ಸಂಪ್ರದಾಯ ಮುಂದುವರೆದಿದೆ. ಕೋಲಾರ ಜಿಲ್ಲೆ ಶ್ರೀನಿವಾಸಪುರ ಕ್ಷೇತ್ರದಿಂದ 6 ನೇ ಅವಧಿಗೆ ಶಾಸಕರಾಗಿರುವ ರಮೇಶ್‌‌ ಕುಮಾರ್ ವಿಧಾನಸಭೆಯ ಸಭಾಧ್ಯಕ್ಷರಾಗಿ ಎರಡನೇ ಅವಧಿಗೆ ಆಯ್ಕೆಯಾಗಿದ್ದಾರೆ.

1994 ರಿಂದ 1999 ರವರೆಗೆ ಮೊದಲು ಸಭಾಧ್ಯಕ್ಷರಾಗಿ ಅವರು ಆಯ್ಕೆಯಾಗಿದ್ದರು. ಈ ಮೊದಲು ಕಾಯಂ ವಿಧಾನಸಭೆ ಅಧ್ಯಕ್ಷರಾಗಿ ಒಬ್ಬ ವ್ಯಕ್ತಿ ಎರಡು ಅವಧಿಗೆ ಕೆಲಸ ಮಾಡಿರುವ ಉದಾಹರಣೆಗಳು ಇಲ್ಲ. ರಮೇಶ್‌‌ ಕುಮಾರ್ ಅವರು ಎರಡನೇ ಬಾರಿ ಸಭಾಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಆ ಕೀರ್ತಿಗೆ ಪಾತ್ರರಾಗಿದ್ದಾರೆ.