- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕಾಂಗ್ರೆಸ್‌ ಪಟ್ಟಿಗಾಗಿ ಸಿಎಂ ಹೆಚ್‌ಡಿಕೆ ವೇಟಿಂಗ್‌… ಬುಧವಾರ ಸಂಪುಟ ರಚನೆ?

kumarswamy [1]ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ರಚಿಸಲ್ಪಟ್ಟಿರುವ ಸರ್ಕಾರದ ಸಚಿವ ಸಂಪುಟ ರಚನೆ ಬುಧವಾರ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್‍ನಿಂದ ಸಚಿವರಾಗುವವರ ಪಟ್ಟಿಯನ್ನು ಸಿಎಂ ನಿರೀಕ್ಷಿಸುತ್ತಿದ್ದು, ಆ ಪಟ್ಟಿ ದೊರೆತ ಕೂಡಲೇ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಪಡಿಸಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದು, ಡಾ.ಜಿ.ಪರಮೇಶ್ವರ್ ಉಪಮುಖ್ಯಮಂತ್ರಿಯಾಗಿದ್ದಾರೆ. ನಿರೀಕ್ಷೆಯಂತೆ ಉಭಯ ಪಕ್ಷಗಳಲ್ಲಿ ಖಾತೆ ಹಂಚಿಕೆ ಹಾಗೂ ಸಚಿವ ಸ್ಥಾನದ ಬಿಕ್ಕಟ್ಟು ಸರಳವಾಗಿ ಬಗೆಹರಿದರೆ ಬಾಕಿ ಉಳಿದಿರುವ 32 ಸಚಿವ ಸ್ಥಾನಗಳ ಪೈಕಿ ಮೊದಲ ಹಂತದಲ್ಲಿ ಜೆಡಿಎಸ್‍ನಿಂದ 10, ಕಾಂಗ್ರೆಸ್‍ನಿಂದ 20 ಸಚಿವ ಸ್ಥಾನಗಳನ್ನು ಭರ್ತಿ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

ಒಂದು ವೇಳೆ ಏಕಕಾಲದಲ್ಲಿ ಪೂರ್ಣ ಪ್ರಮಾಣದಲ್ಲಿ ಸಂಪುಟ ವಿಸ್ತರಣೆ ಮಾಡಲು ಸಾಧ್ಯವಾಗದಿದ್ದರೆ ಎರಡು ಮೂರು ಹಂತದಲ್ಲಿ ಸಂಪುಟ ವಿಸ್ತರಣೆ ಮಾಡಲಾಗುತ್ತದೆ. ಪ್ರಸ್ತುತ ಕಾಂಗ್ರೆಸ್ 22 ಸಚಿವ ಸ್ಥಾನ ಹಾಗೂ ಜೆಡಿಎಸ್‍ಗೆ 12 ಸಚಿವ ಸ್ಥಾನ ಹಂಚಿಕೆಯಾಗಿದೆ. ಕಾಂಗ್ರೆಸ್‍ನಿಂದ ಎರಡು ಸಚಿವ ಸ್ಥಾನಗಳನ್ನು ಉಳಿಸಿಕೊಂಡರೆ ಜೆಡಿಎಸ್‍ನಿಂದ ಒಂದು ಸಚಿವ ಸ್ಥಾನವನ್ನು ಉಳಿಸಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಮೂಲಗಳು ಹೇಳಿವೆ.

ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಜೊತೆ ಖಾತೆ ಹಂಚಿಕೆ ಹಾಗೂ ಸಂಪುಟ ವಿಸ್ತರಣೆ ಕುರಿತಂತೆ ಸಮಾಲೋಚನೆ ನಡೆಸಿದ ನಂತರ ಅಂತಿಮ ರೂಪ ಹೊರಬೀಳಲಿದೆ. ಇಂದು ಸಂಜೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ದೆಹಲಿಗೆ ತೆರಳುವ ಸಾಧ್ಯತೆ ಇದ್ದು, ಇಂದು ರಾತ್ರಿ ಅಥವಾ ನಾಳೆ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಹಾಗೂ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಸಮಾಲೋಚನೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ನಿನ್ನೆಯಷ್ಟೇ ಸಮ್ಮಿಶ್ರ ಸರ್ಕಾರ ವಿಧಾನಸಭೆಯಲ್ಲಿ ವಿಶ್ವಾಸ ಮತ ಸಾಬೀತುಪಡಿಸಿದೆ. ಸಂಪುಟ ವಿಸ್ತರಣೆ ಹಾಗೂ ಖಾತೆ ಹಂಚಿಕೆ ಬಗ್ಗೆ ಉಭಯ ಪಕ್ಷಗಳ ನಾಯಕರ ನಡುವೆ ಮಾತುಕತೆ ಮುಂದುವರೆದಿದೆ.