- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ದೆಹಲಿಗೆ ತೆರಳಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಪರಮೇಶ್ವರ್‌

rahul-gandhi [1]ಬೆಂಗಳೂರು: ಕಾಂಗ್ರೆಸ್ ಪಕ್ಷದ ಯಾವ ಯಾವ ಶಾಸಕರಿಗೆ ಮಂತ್ರಿ ಸ್ಥಾನ ಕೊಡಬೇಕು ಎಂಬುದನ್ನು ಹೈಕಮಾಂಡ್‌ ಜೊತೆ ಚರ್ಚಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಪರಮೇಶ್ವರ್‌ ಅವರು ಇಂದು ದೆಹಲಿಗೆ ತೆರಳಿದ್ದಾರೆ. ನಿನ್ನೆಯಷ್ಟೆ ವಿಶ್ವಾಸಮತವನ್ನು ಸಮ್ಮಿಶ್ರ ಸರ್ಕಾರ ಗೆದ್ದಿದ್ದು, ಇಂದಿನಿಂದ ಸಚಿವ ಸಂಪುಟ ವಿಸ್ತರಣೆ ಕಸರತ್ತು ಪ್ರಾರಂಭವಾಗಿದೆ. ಅದರ ಭಾಗವಾಗಿಯೇ ಇಂದು ಈ ಇಬ್ಬರು ನಾಯಕರು ರಾಹುಲ್ ಗಾಂಧಿ ಅವರನ್ನು ಭೇಟಿ ಆಗಲು ತೆರಳಿದ್ದಾರೆ.

ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್ ಶಾಸಕರಿಂದ ‘ದೆಹಲಿ ಲಾಬಿ’ ಜೆಡಿಎಸ್‌-ಕಾಂಗ್ರೆಸ್‌ನ ಮೈತ್ರಿ ಸರ್ಕಾರವು 12:22 ಅನುಪಾತದಲ್ಲಿ ಸಚಿವ ಸಂಪುಟ ಸ್ಥಾನಗಳನ್ನು ಹಂಚಿಕೊಳ್ಳಲಿದೆ ಎನ್ನಲಾಗಿದ್ದು, ಜೆಡಿಎಸ್‌ಗೆ ಮುಖ್ಯಮಂತ್ರಿ ಸೇರಿ 12 ಸ್ಥಾನಗಳು, ಕಾಂಗ್ರೆಸ್‌ಗೆ 22 ಸಚಿವ ಸ್ಥಾನಗಳು ದೊರೆಯಲಿವೆ. ಎರಡೂ ಪಕ್ಷದಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದ್ದು, ಕಾಂಗ್ರೆಸ್‌ನಲ್ಲಂತೂ ಹಿರಿಯ ನಾಯಕರುಗಳು ಸಾಕಷ್ಟು ಮಂದಿ ಮಂತ್ರಿ ಪದವಿಗಾಗಿ ಬೇಡಿಕೆ ಇಟ್ಟಿದ್ದಾರೆ ಹಾಗಾಗಿ ಕಾಂಗ್ರೆಸ್‌ಗೆ ಎಲ್ಲರನ್ನೂ ಸಮಾಧಾನಪಡಿಸುವುದು ಕಷ್ಟವಾಗಿ ಪರಿಣಮಿಸಿದೆ.

ಹಿರಿಯ ನಾಯಕ ಡಿಕೆ ಶಿವಕುಮಾರ್ ಅವರೂ ಸಹ ಮುನಿಸಿಕೊಂಡಿದ್ದು ಅವರಿಗೆ ಸಶಕ್ತವಾದ ಸ್ಥಾನವನ್ನು ನೀಡಲೇಬೇಕಿದೆ. ಅಲ್ಲದೆ ಶಾಮನೂರು ಶಿವಶಂಕರಪ್ಪ ಸೇರಿದಂತೆ ಹಲವರು ಈಗಾಗಲೇ ಮಂತ್ರಿ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಸಚಿವ ಸ್ಥಾನ ಮಾತ್ರವಲ್ಲದೆ, ಪರಮೇಶ್ವರ್ ರಾಜಿನಾಮೆಯಿಂದ ತೆರವಾಗಿರುವ ಕೆಪಿಸಿಸಿ ಅಧ್ಯಕ್ಷ ಸ್ಥಾನ ಹಾಗೂ ವಿಧಾನ ಪರಿಷತ್‌ ಅಭ್ಯರ್ಥಿಗಳ ಬಗ್ಗೆಯೂ ಚರ್ಚೆ ನಡೆಸಲಿದ್ದಾರೆ.