- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಹಾವನ್ನೇ ಹಾರ ಮಾಡಿಕೊಳ್ಳೋ ಪೋರ… ಕಡಲ ತಡಿಯಲ್ಲಿ ಸರ್ಪಗಳ ಜೊತೆ ಬಾಲಕನ ಆಟ

small-boy [1]ಮಂಗಳೂರು: ಹಾವು ಅಂದ ಕೂಡಲೇ ಹೌಹಾರುವವರೇ ಜಾಸ್ತಿ. ಇನ್ನು ಕಂಡರಂತೂ ದೂರಾನೇ ಓಡಿ ಹೋಗ್ತಾರೆ. ಆದರೆ ಇಲ್ಲೊಬ್ಬ ಪುಟ್ಟ ಪೋರ ಹಾವಿನ ಜೊತೆಗೇ ಆಟವಾಡ್ತಾನೆ. ಹಾವನ್ನೇ ಹೂವಿನ ರೀತಿ ಕುತ್ತಿಗೆಗೆ ಹಾರ ಹಾಕ್ಕೊಳ್ತಾನೆ!

ಹೌದು, ಈ ಬಾಲಕನ ಹೆಸರು ಮಹಮ್ಮದ್ ಶಾಕೀರ್. ಇನ್ನೂ ಮೂರು ವರ್ಷ ತುಂಬಿಲ್ಲ. ಪುಟ್ಟ ಪುಟ್ಟ ಹೆಜ್ಜೆ ಇಡುತ್ತಾ ಬಾಲ ಚೇಷ್ಟೆಯನ್ನಾಡುವ ವಯಸ್ಸಲ್ಲಿ ಹಾವಿನ ಜೊತೆ ಸ್ನೇಹ ಮಾಡುತ್ತಾನೆ. ಹಾವಿನ ಬಾಲವನ್ನು ಹಿಡ್ಕೊಂಡು ಕೊಂಚವೂ ಭಯವಿಲ್ಲದೆ ವಿನೋದ ತೋರಿಸುತ್ತಾನೆ. ಈ ಬಾಲಕನ ಕೈಚಳಕ ನೋಡಿದರೆ ಸಾಮಾನ್ಯರು ಹೌಹಾರಬೇಕು,

ಮಂಗಳೂರಿನ ಬೈಕಂಪಾಡಿಯಲ್ಲಿರುವ ಗಣೇಶ್ ಮೆಂಡನ್ ಎಂಬುವವರಿಗೆ ಹಾವು ಹಿಡಿಯೋ ಹವ್ಯಾಸ ಹೊಂದಿದ್ದಾರೆ. ಇವರ ಮನೆ ಬಳಿಯಲ್ಲೇ ಉತ್ತರ ಕರ್ನಾಟಕ ಮೂಲದ ಬಾಲಕ ಮಹಮ್ಮದ್ ಶಾಕೀರ್ ಕುಟುಂಬವೂ ವಾಸವಾಗಿದೆ. ಅಂತೆಯೇ ಮಹಮ್ಮದ್‌ನ ತಾಯಿ ದುಡಿಮೆಗೆ ತೆರಳುವುದರಿಂದ ತಮ್ಮ ಆತನನ್ನು ಮೆಂಡನ್ ಬಳಿ ನಿತ್ಯವೂ ಬಿಟ್ಟು ಹೋಗುತ್ತಿದ್ದರು.

ಗಣೇಶ್ ಮೆಂಡನ್ ಅಕ್ಕ ಪಕ್ಕದಲ್ಲಿ ಕಾಣಿಸುವ ಹಾವು ಹಿಡಿಯುತ್ತಿದ್ದರು. ಇದನ್ನು ಮಹಮ್ಮದ್‌ ಕೂಡ ನೋಡುತ್ತಿದ್ದ. ಹೀಗಾಗಿ ಆತನಿಗೆ ಹಾವು ಕೂಡ ಆಟದ ವಸ್ತುವಾಗಿಬಿಟ್ಟಿದೆ. ಸಮುದ್ರ ತೀರದಲ್ಲಿ ವಾಸ ಇರುವುದರಿಂದ ಹಾವುಗಳ ಸಂಚಾರವೂ ಸಹಜವಾಗಿದ್ದು, ಬಾಲಕ ಹಾವಿನ ಭಯವೇ ಇಲ್ಲದಂತೆ ವರ್ತಿಸುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಇನ್ನು ತೀರ ಬಡ ಕುಟುಂಬದ ಹುಡುಗನಾಗಿರುವ ಮಹಮ್ಮದ್ ಶಾಕೀರ್, ಸದ್ಯಕ್ಕೆ ಗಣೇಶ್ ಮೆಂಡನ್ ಮನೆಯಲ್ಲೇ ಬೆಳೆಯುತ್ತಿದ್ದಾನೆ. ಶಾಕೀರನ್ನು ತಾವೇ ಓದಿಸುತ್ತೇವೆ ಅನ್ನುವ ಮಾತು ಗಣೇಶ್ ಮೆಂಡನ್ ಕುಟುಂಬದ್ದು. ತಮ್ಮ ಮಗನಂತೇ ಮುದ್ದಿನಿಂದ ಸಾಕುತ್ತಿರುವ ಈ ಕುಟುಂಬಕ್ಕೆ ಶಾಕೀರ್ ಕೂಡ ಮತ್ತೊಬ್ಬ ಮಗನಿದ್ದಂತೆ.

ಶಾಕೀರ್ ಸಣ್ಣ ಮಗು ಆಗಿರುವುದರಿಂದ ವಿಷದ ಹಾವನ್ನು ಆತನ ಕೈಗೆ ಕೊಡುವುದಿಲ್ಲ. ವಿಷ ಇಲ್ಲದೇ ಇರುವ ಹಾವುಗಳ ಜೊತೆ ಮಾತ್ರ ಆಟಕ್ಕೆ ಬಿಡುತ್ತಾರೆ.