- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮಂಗಳೂರಿನ ಮನೆಗಳಲ್ಲಿ ಕೆಂಪು ಬಣ್ಣದ ಮಣ್ಣು ನೀರು, ಆತಂಕ

mangaluru [1]ಮಂಗಳೂರು: ನಗರದ ಮನೆಗಳಿಗೆ ಮೂರು ದಿನಗಳಿಂದ ಮಣ್ಣು ಮಿಶ್ರಿತ ಕಲುಷಿತ ಕುಡಿಯುವ ನೀರು ಸರಬರಾಜು ಆಗುತ್ತಿದೆ. ಮನೆಗಳ ನಲ್ಲಿ ಮೂಲಕ ಬರುವ ಕುಡಿಯುವ ನೀರು ಕೆಂಪು ಬಣ್ಣಕ್ಕೆ ತಿರುಗಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ.

ತುಂಬೆ ವೆಂಟೆಡ್ ಡ್ಯಾಮ್ ನಿಂದ ಮಂಗಳೂರು ನಗರಕ್ಕೆ ನೀರು ಪೂರೈಕೆಯಾಗುತ್ತಿದ್ದು, ಕಲುಷಿತಗೊಂಡ ಕೆಂಪು ಬಣ್ಣದ ನೀರು ಮನೆಗಳ ನಲ್ಲಿಯಲ್ಲಿ ಬರುತ್ತಿದೆ. ನಗರದ ಕೆಲವೆಡೆ ನೀರು ಕುಡಿಯಲು ಸಾದ್ಯವಾಗದೆ, ದುರ್ವಾವಾಸನೆಯಿಂದ ಕೂಡಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ಕಳೆದ ಬುಧವಾರದಿಂದ ಈ ರೀತಿಯ ನೀರು ಸರಬರಾಜು ಆಗುತ್ತಿದ್ದು, ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಹೀಗಾಗಿದೆ ಎಂದು ಹೇಳಲಾಗುತ್ತಿದೆ . ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ನೀರು ಸರಬರಾಜು ಆಗುವ ಮೊದಲು ಕೆಲವು ಹಂತದ ಶುದ್ಧೀಕರಣ ನಡೆದರೂ ನೀರಲ್ಲಿ ಕೆಂಪು ಅಂಶ ಉಳಿದುಕೊಂಡಿದೆ. ಅದೇ ಮಣ್ಣು ಮಿಶ್ರಿತ ನೀರು ನಗರಕ್ಕೆ ಸರಬರಾಜು ಆಗುತ್ತಿದೆ.

ಈಗ ಸರಬರಾಜು ಆಗುತ್ತಿರುವ ನೀರನ್ನು ಸಂಗ್ರಹಿಸಿದರೆ ಬಕೆಟ್ ನ ತಳಭಾಗದಲ್ಲಿ ಕೆಂಪು ಮಣ್ಣಿನ ಪದರ ಅಂಟಿಕೊಳ್ಳುತ್ತದೆ. ಅದೇ ನೀರನ್ನು ಬಿಸಿ ಮಾಡಿದರೆ ಪಾತ್ರೆಯ ಕೆಳಭಾಗದಲ್ಲಿ ಕೆಂಪು ಮಣ್ಣಿನ ಕಣಗಳು ಸಂಗ್ರಹವಾಗುತ್ತವೆ ಎಂದು ಜನರು ದೂರುತ್ತಿದ್ದಾರೆ. ಅಲ್ಲದೆ ಈ ನೀರನ್ನು ಉಪಯೋಗಿಸಿ ಮಾಡಿದ ಅನ್ನ ಸಂಜೆಯಾಗುತ್ತಿದ್ದಂತೆ ಹಾಳಾಗುತ್ತಿದೆ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ.

ಈ ಬಗ್ಗೆ ಮಹಾನಗರಪಾಲಿಕೆ ಆಯುಕ್ತರು, ಮಳೆಗಾಲದಲ್ಲಿ ಈ ಸಮಸ್ಯೆ ಇರತ್ತದೆ. ಮಳೆ ನೀರಿನೊಂದಿಗೆ ಮಣ್ಣು ಕೊಚ್ಚಿಕೊಂಡು ಬಂದು ನೀರಿನ ಬಣ್ಣ ಬದಲಾಗುತ್ತದೆ. ಈಗಾಗಲೇ ನೀರನ್ನು ಪರೀಕ್ಷೆ ಮಾಡಲಾಗಿದ್ದು, ನೀರು ತಿಳಿಯಾಗಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ. ನೀರನ್ನು ಕುದಿಸಿ, ಆರಿಸಿ ಕುಡಿಯಲು ಜಿಲ್ಲಾ ಆರೋಗ್ಯಾಧಿಕಾರಿಗಳು ಜನರಲ್ಲಿ ಮನವಿ ಮಾಡಿದ್ದಾರೆ.