- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ರಾಜ್ಯದಲ್ಲಿ ಮುಂದುವರಿದ ವರುಣನ ಅಬ್ಬರ… ರೈತರ ಮೊಗದಲ್ಲಿ ಮಂದಹಾಸ

heavy-rain [1]ಬೆಂಗಳೂರು: ಭಾನುವಾರವೂ ರಾಜ್ಯದ ಹಲವೆಡೆ ವರುಣನ ಅಬ್ಬರ ಜೋರಾಗಿತ್ತು. ಧಾರವಾಡ, ಚಿಕ್ಕಮಗಳೂರು, ಹಾವೇರಿ, ತುಮಕೂರು ಸೇರಿದಂತೆ ವಿವಿಧೆಡೆ ಧಾರಾಕಾರ ಮಳೆಯಾಗಿದೆ.

ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ, ಲಕಮಾಪುರ, ಯಾದವಾಡ ಸೇರಿದಂತೆ ಅನೇಕ ಕಡೆಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಿದ್ದು, ಕೆಲವೆಡೆ ನೆರೆ ಕೂಡ ಬಂದಿದೆ. ತಾಲೂಕಿನ ಉಪ್ಪಿನ ಬೆಟಗೇರಿಯಿಂದ ಹನುಮನಹಾಳಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಮೇಲೆ ನೀರು ತುಂಬಿ ಬಂದಿದ್ದು, ಆ ಮಾರ್ಗ ಸಂಪೂರ್ಣ ಬಂದ್ ಆಗಿತ್ತು.

ಚಿಕ್ಕ ಹಳ್ಳ ಇದಾಗಿದ್ದು, ಸೇತುವೆ ಜಲಾವೃತಗೊಂಡಿತ್ತು. ಬೈಕ್ ಸವಾರರು ಧೈರ್ಯ ಮಾಡಿ ಅದರಲ್ಲೇ ದಾಟಿ ಹೋಗುತ್ತಿದ್ದರು. ಮಳೆಯ ನೀರು ಮೇಲೆ ಬಂದಿರುವುದರಿಂದ ಹಾವುಗಳಂತ ವಿಷ ಜಂತುಗಳು ಮೇಲೆಯೇ ಹರಿದಾಡುತ್ತಿವೆ.

ಜಿಲ್ಲೆಯಲ್ಲಿ ಒಂದೆರಡು ದಿನದಿಂದ ಸುರಿಯುತ್ತಿದ್ದ ಮಳೆ ನಿನ್ನೆಯೂ ಕೂಡ ಮುಂದುವರೆದಿತ್ತು. ಜೂನ್ ಆರಂಭದಲ್ಲಿ ಮುಂಗಾರು ಮಳೆ ವಾಡಿಕೆಯಂತೆ ಬರುವ ನಿರೀಕ್ಷೆಯಲ್ಲಿದ್ದ ರೈತರು ನಿಟ್ಟುಸಿರು ಬಿಡುವಂತಾಗಿದೆ.

ಚಿಕ್ಕಮಗಳೂರು, ಮೂಡಿಗೆರೆ, ಎನ್.ಆರ್.ಪುರ, ಶೃಂಗೇರಿ ಮತ್ತು ಕೊಪ್ಪ ತಾಲೂಕುಗಳಲ್ಲಿ ಬಹುತೇಕ ಭತ್ತದ ಗದ್ದೆಗಳಲ್ಲಿ ಮಣ್ಣು ಹದಗೊಳಿಸುವ ಕಾರ್ಯ ಸಮರ್ಪಕವಾಗಿ ನಡೆಯುತ್ತಿದೆ. ಮಳೆಯಿಂದ ಬತ್ತಿದ್ದ ಹೇಮಾವತಿ ನದಿಯಲ್ಲಿ ನೀರು ಹರಿಯುವ ಮೂಲಕ ನದಿಗೆ ಜೀವ ಕಳೆ ಬಂದಂತಾಗಿದೆ.

ಹಾವೇರಿ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆಯಾಗಿದ್ದು ಜನಜೀವನ ಅಸ್ತವ್ಯಸ್ಥಗೊಂಡಿತ್ತು. ಮಳೆಯಿಂದ ತಗ್ಗು ಪ್ರದೇಶಗಳಿಗೆ ನುಗ್ಗಿದೆ. ನೀರಿಲ್ಲದೆ ಖಾಲಿ ಖಾಲಿಯಾಗಿದ್ದ ಜಿಲ್ಲೆಯ ನದಿಗಳು ತುಂಬಿ ಹರಿಯುತ್ತಿವೆ. ಕೃಷಿ ಚಟುವಟಿಕೆಗಳು ಗರಿಗೆದರಿವೆ.

ಜಿಲ್ಲೆಯ ವಿವಿಧೆಡೆ ಸುರಿದ ಭಾರಿ ಮಳೆಯಾಗಿದ್ದು ರೈತಾಪಿ ವರ್ಗದಲ್ಲಿ ಸಂತಸ ಮೂಡಿದ್ದರೆ, ಇನ್ನೊಂದೆಡೆ ವರುಣನ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಶಿರಾ, ಕುಣಿಗಲ್, ತಿಪಟೂರು, ಗುಬ್ಬಿ ತಾಲೂಕಿನಲ್ಲಿ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ.

ಜಿಲ್ಲೆಯಲ್ಲಿ ಮಳೆರಾಯನ ಆರ್ಭಟ ಜೋರಾಗಿದೆ. ಮುದ್ದೇಬಿಹಾಳ ತಾಲೂಕಿನ ಹಿರೇಮುರಾಳ ಗ್ರಾಮದಲ್ಲಿ ನಿನ್ನೆ ಸಿಡಿಲು ಬಡಿದು ಎರಡು ಕುರಿಗಳ ಸಾವನ್ನಪ್ಪಿವೆ.

ಶಿವಾಜಿ ಬಣಕಾರ ಎಂಬುವರಿಗೆ ಸೇರಿದ ಎರಡು ಕುರಿಗಳು ಸಾವನ್ನಪ್ಪಿವೆ. ಅಲ್ಲದೆ ಸಿಡಿಲಿನ ಹೊಡೆತಕ್ಕೆ ತೆಂಗಿನ ಮರ ಸುಟ್ಟುಹೋಗಿದೆ. ದಾವಲಸಾಬ್ ಎಂಬುವರು ಅಪಾಯದಿಂದ ಪಾರಾಗಿದ್ದಾರೆ.