- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಬಿಜೆಪಿಯಲ್ಲಿ ಮತ್ತೆ ಭಿನ್ನಮತ ಸ್ಫೋಟ: ಯಡಿಯೂರಪ್ಪ ವಿರುದ್ಧ ಈಶ್ವರಪ್ಪ ಗರಂ

eshwarappa [1]ಬೆಂಗಳೂರು: ವಿಧಾನಸಭೆ ಚುನಾವಣೆ ಮುಗಿಯುತ್ತಿದ್ದಂತೆ ರಾಜ್ಯ ಬಿಜೆಪಿಯಲ್ಲಿ ಮತ್ತೆ ಭಿನ್ನಮತ ಸ್ಫೋಟಗೊಂಡಿದೆ. ಶಿವಮೊಗ್ಗದ ಹಿಡಿತ ಸಾಧಿಸುವ ಸಲುವಾಗಿಯೇ ಈ ಬಾರಿಯೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ಕೆ.ಎಸ್.ಈಶ್ವರಪ್ಪ ಮತ್ತೊಮ್ಮೆ ಸಿಡಿದು ನಿಂತಿದ್ದಾರೆ.

ಹೌದು, ರಾಜ್ಯ ಬಿಜೆಪಿಯಲ್ಲಿ ತಲೆದೂರುವ ಭಿನ್ನಮತದ ಮೂಲ ಹುಡುಕಿಕೊಂಡು ಹೊರಟರೆ ಅದು ತಲುಪುವುದು ಶಿವಮೊಗ್ಗಕ್ಕೆ. ಒಂದಲ್ಲ ಒಂದು ಕಾರಣದಿಂದ ಶಿವಮೊಗ್ಗ ನಾಯಕರಿಂದಲೇ ಭಿನ್ನಮತೀಯ ಚಟುವಟಿಕೆಗಳಿಗೆ ಚಾಲನೆ ಸಿಕ್ಕಿರುತ್ತದೆ, ಈಗಲೂ ಹಾಗೆಯೇ ಆಗಿದೆ.

ವಿಧಾನಸಭೆ ಚುನಾವಣೆಗೂ ಮುನ್ನ ಶಿವಮೊಗ್ಗ ಟಿಕೆಟ್ ಈಶ್ವರಪ್ಪ ಕೈತಪ್ಪಲಿದೆ ಎನ್ನುವ ಮಾತುಗಳು ಕೇಳಿಬಂದಾಗ ರೌದ್ರಾವತಾರ ತಾಳಿದ್ದ ಈಶ್ವರಪ್ಪರನ್ನು ಪಕ್ಷದ ಹೈಕಮಾಂಡ್ ಸಮಾಧಾನ ಪಡಿಸಿತ್ತು. ಪರಿಷತ್ ಸದಸ್ಯರಾದ ನಿಮಗೆ ಮಂತ್ರಿ ಸ್ಥಾನ ನೀಡಲಾಗುತ್ತದೆ ಎನ್ನುವ ಭರವಸೆ ನೀಡಿತ್ತು. ಇದನ್ನು‌ ಒಪ್ಪದಾಗ ರುದ್ರೇಗೌಡರಿಗೆ ಪರಿಷತ್ ಸದಸ್ಯ ಸ್ಥಾನದ ಭರವಸೆ ನೀಡಿ ಈಶ್ವರಪ್ಪಗೆ ಟಿಕೆಟ್ ನೀಡಲಾಯಿತು.

ಇದೀಗ ರುದ್ರೇಗೌಡರನ್ನು ವಿಧಾನ ಪರಿಷತ್‌‌ಗೆ ಆಯ್ಕೆ ಮಾಡುವ ವಿಷಯದಲ್ಲೇ ಮತ್ತೊಮ್ಮೆ ಪಕ್ಷದಲ್ಲಿ ಭಿನ್ನಮತ ಸ್ಪೋಟಗೊಂಡಿದೆ. ರುದ್ರೇಗೌಡರನ್ನು ಪರಿಷತ್‌‌ಗೆ ಆಯ್ಕೆ ಮಾಡಲು ವಿರೋಧ ವ್ಯಕ್ತವಾಗುತ್ತಿರಲಿಲ್ಲ. ಆದರೆ ಈಶ್ವರಪ್ಪ ಬೆನ್ನಿಗೆ ನಿಂತಿರುವ ಎಂ.ಬಿ ಭಾನುಪ್ರಕಾಶ್ ಬದಲಿಗೆ ರುದ್ರೇಗೌಡರನ್ನು ಪರಿಷತ್ತಿಗೆ ಕಳುಹಿಸುವ ಯಡಿಯೂರಪ್ಪ ಪ್ರಯತ್ನ ಈಶ್ವರಪ್ಪ ಅಸಮಧಾನಕ್ಕೆ ಕಾರಣವಾಗಿದೆ.

ಸದ್ಯ ಬಿಜೆಪಿಯ ಬಿ.ಜೆ. ಪುಟ್ಟಸ್ವಾಮಿ, ಡಿ.ಎಸ್. ವೀರಯ್ಯ, ರಘುನಾಥ್ ಮಲ್ಕಾಪುರೆ, ಎಂ.ಬಿ. ಭಾನುಪ್ರಕಾಶ್ ಅವಧಿ ಮುಗಿಯುತ್ತಿದ್ದು ಅವರ ಜಾಗಕ್ಕೆ ಎಬಿವಿಪಿ ಹಾಗೂ ಆರ್‌‌ಎಸ್‌‌ಎಸ್ ಹಿನ್ನೆಲೆಯುಳ್ಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್, ಮಾಜಿ ಎಂಎಲ್‌ಸಿ ಹಾಗೂ ವಕ್ತಾರ ಅಶ್ವತ್ಥನಾರಾಯಣ ಗೌಡ, ಮಾಜಿ ಸಂಸದೆ ತೇಜಸ್ವಿನಿ ಗೌಡ, ಲಿಂಗಾಯತ ಕೋಟಾದಡಿ ಶಿವಮೊಗ್ಗ ಜಿಲ್ಲೆ ಬಿಜೆಪಿ ಅಧ್ಯಕ್ಷ ರುದ್ರೇಗೌಡ ಮಾಜಿ ಸಂಸದ ವಿಜಯ್ ಸಂಕೇಶ್ವರ್, ಬ್ರಾಹ್ಮಣ ಕೋಟಾ ಅಡಿ ಹಾಲಿ ಸದಸ್ಯ ಎಂ.ವಿ. ಭಾನುಪ್ರಕಾಶ್ , ಮಾಜಿ ಎಂಎಲ್‌ಸಿ ಗೊ. ಮಧುಸೂಧನ್ ಕೂಡ ರೇಸ್‌‌ನಲ್ಲಿದ್ದಾರೆ.

ಇದರಲ್ಲಿ ಶಿವಮೊಗ್ಗ ಕೋಟಾ ಸಾಕಷ್ಟು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಭಾನುಪ್ರಕಾಶ್‌‌ರನ್ನು ಮರು ಆಯ್ಕೆ ಮಾಡಬೇಕು, ರುದ್ರೇಗೌಡರನ್ನು ತಮ್ಮ ಪರಿಷತ್ ಸ್ಥಾನ ಇಲ್ಲವೇ ಬೇರೆ ಯಾವುದಾದರೂ ಮೂಲಕ ಆಯ್ಕೆ ಮಾಡಿ ಎಂದು ಈಶ್ವರಪ್ಪ ಸಲಹೆ ನೀಡಿದ್ದಾರೆ. ಆದರೆ ಇದಕ್ಕೆ ಯಡಿಯೂರಪ್ಪ ಅಸಮ್ಮತಿ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ, ಪ್ರತಿಪಕ್ಷ ನಾಯಕ ಸ್ಥಾನ ನನ್ನ ಬಳಿ ಇದೆ, ಸಭಾಪತಿ ಸ್ಥಾನದಲ್ಲಿಯೂ ನಮ್ಮ ಜಿಲ್ಲೆಯವರೇ ಇದ್ದಾರೆ. ಈಗ ಪರಿಷತ್ ಸ್ಥಾನಕ್ಕೆ ಜಿಲ್ಲೆಯಿಂದ ಇಬ್ಬರನ್ನು ಕಳುಹಿಸಿದರೆ ಪಕ್ಷದ ಇತರ ಜಿಲ್ಲೆ ಕಡೆಗಣನೆ ಆರೋಪ ಬರಲಿದೆ ಹಾಗಾಗಿ ಬೇಡ ಎಂದು ಈಶ್ವರಪ್ಪ ಸಲಹೆಯನ್ನು ಯಡಿಯೂರಪ್ಪ ತಳ್ಳಿ ಹಾಕಿದ್ದಾರೆ ಎನ್ನಲಾಗಿದೆ.

ಪರಿಷತ್ ಸ್ಥಾನಕ್ಕೆ ಭಾನುಪ್ರಕಾಶ್ ಮರು ಆಯ್ಕೆಯ ತಮ್ಮ ಸಲಹೆಯನ್ನು ಪರಿಗಣಿಸದ ಯಡಿಯೂರಪ್ಪ ನಿಲುವನ್ನು ಖಂಡಿಸಿ ಇಂದು ಸಂಜೆ‌ 6 ಗಂಟೆಗೆ ಬಿಜೆಪಿ ಕಚೇರಿಯಲ್ಲಿ ಪರಿಷತ್ ಅಭ್ಯರ್ಥಿಗಳ ಆಯ್ಕೆ ಸಂಬಂಧ ನಡೆಯಲಿರುವ ಬಿಜೆಪಿ ಕೋರ್ ಕಮಿಟಿ ಸಭೆಗೆ ಈಶ್ವರಪ್ಪ ಗೈರಾಗಿ ತಮ್ಮ ಅಸಮಧಾನ ಹೊರಹಾಕಲಿದ್ದಾರೆ ಎಂದು ತಿಳಿದುಬಂದಿದೆ.