- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮಂಗಳೂರು ಪೊಲೀಸರ ಮಿಂಚಿನ ಕಾರ್ಯಾಚರಣೆ: 35 ಲಕ್ಷ ರೂ. ಮೌಲ್ಯದ ಅಕ್ರಮ ಮರಳು ಜಪ್ತಿ

mangalore [1]ಮಂಗಳೂರು: ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯನ್ನು ಮಟ್ಟಹಾಕಲು ಪೊಲೀಸ್‌‌ ಇಲಾಖೆ ಹೊಸ ಪ್ರಯತ್ನವೊಂದಕ್ಕೆ ಮುನ್ನುಡಿಯಿಟ್ಟಿದ್ದು, ವಿಶೇಷ ಕಾರ್ಯತಂಡವನ್ನು ರಚಿಸಲಾಗಿದೆ. ನೂತನ ಕಾರ್ಯಪಡೆಯು ಮಂಗಳೂರು ನಗರ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿದ್ದು, ಹಲವೆಡೆ ಅಕ್ರಮವಾಗಿ ದಾಸ್ತಾನಿರಿಸಿದ್ದ ಮರಳನ್ನು ವಶಪಡಿಸಿಕೊಂಡಿದೆ.

ಅಕ್ರಮ ಮರಳುಗಾರಿಕೆಗೆ ಬ್ರೇಕ್‌‌ ಹಾಕುವ ನಿಟ್ಟಿನಲ್ಲಿ ಮಂಗಳೂರು ನಗರದ ಪೊಲೀಸ್‌ ಆಯುಕ್ತ ವಿಪುಲ್‌‌ ಕುಮಾರ್ ಮಾರ್ಗದರ್ಶನದಲ್ಲಿ ಪೊಲೀಸ್‌ ಉಪ ಆಯುಕ್ತರಾದ ಹನುಮಂತರಾಯ, ಉಮಾಪ್ರಶಾಂತ್‌‌ ಅವರ ಮೇಲುಸ್ತುವಾರಿಯಲ್ಲಿ ಸಹಾಯಕ ಪೊಲೀಸ್‌ ಆಯುಕ್ತ ಗೋಪಾಲಕೃಷ್ಣ ನಾಯಕ್‌‌, ಸಿಸಿಬಿ ಘಟಕದ ಪೊಲೀಸ್‌ ನಿರೀಕ್ಷಕ ಕೆ. ಶ್ರೀನಿವಾಸ್‌ ಮುಂದಾಳುತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿದೆ.

ಈ ವಿಶೇಷ ತಂಡವು ನಡೆಸಿದ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ದಾಸ್ತಾನಿರಿಸಿದ್ದ ಲಕ್ಷಾಂತರ ಮರಳನ್ನು ವಶಪಡಿಸಿಕೊಂಡಿದೆ. ಬಡಗುಳಿಪಾಡಿ ಗ್ರಾಮದಲ್ಲಿ 177 ಲೋಡ್‌, ಸರ್ವೆ ನಂಬರ್‌ 118/ಪಿ2ಪಿ1 ರಲ್ಲಿ 26 ಲೋಡ್‌, ಸರ್ವೆ ನಂಬರ್‌‌ 68ರಲ್ಲಿದ್ದ 60 ಲೋಡ್‌ , ಸರ್ವೆ ನಂಬರ್‌ 85 ರಲ್ಲಿದ್ದ 50 ಲೋಡ್‌ ಮರಳನ್ನು ವಶಪಡಿಸಿಕೊಳ್ಳಲಾಗಿದೆ.

ಜೊತೆಗೆ ಮೊಗರು ಗ್ರಾಮದ ನಾರ್ಲಪದವು ಎಂಬಲ್ಲಿ ಸರ್ವೆ ನಂಬರ್‌ 61/2 ಬಿ 1 ರಲ್ಲಿದ್ದ 40 ಲೋಡ್‌, ಸರ್ವೆ ನಂಬರ್‌‌ 56/ಪಿ5 ರಲ್ಲಿದ್ದ 193 ಲೋಡ್‌, ಮೂಡುಪೆರಾರ್ ಗ್ರಾಮದ ಚರ್ಚ್ ಬಳಿ ಸರ್ವೆ ನಂಬರ್‌‌ 76/1 ಪಿ 2ರಲ್ಲಿದ್ದ 272 ಲೋಡ್‌, ಸರ್ವೆ ನಂಬರ್‌ 78 ರಲ್ಲಿದ್ದ 35 ಲೋಡ್‌ಗಳಷ್ಟು ಅಕ್ರಮ ಮರಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಒಟ್ಟು 853 ಲೋಡ್‌ಗಳಷ್ಟು ಮರಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದರ ಅಂದಾಜು 35 ಲಕ್ಷ ರೂಪಾಯಿ ಮೌಲ್ಯದ್ದಾಗಿದೆ ಎಂದು ತಿಳಿದುಬಂದಿದೆ.