- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಚಾಣಕ್ಯ

ಭಾರತ ಕಂಡ ಬುದ್ದಿವಂತ ಅರ್ಥಶಾಸ್ತ್ರಜ್ಞ ಮತ್ತು ರಾಜನೀತಿಜ್ಞರಲ್ಲಿ ಚಾಣಕ್ಯ ಅಗ್ರಸ್ಥಾನದಲ್ಲಿ ನಿಲ್ಲುತ್ತಾನೆ. ಈತನನ್ನು ‘ಭಾರತದ ಮೆಕ್ಯಾವೆಲಿ’ ಎಂದು ಕರೆಯುವುದೂ ಉಂಟು. ಈತ ತನ್ನ ‘ಪಂಚತಂತ್ರ’, ‘ಕೌಟಿಲ್ಯನ ಅರ್ಥಶಾಸ್ತ್ರ’ ಮತ್ತು ತನ್ನ ಜೀವನ ವಿಧಾನಗಳಿಂದ ಬಹಳ ಜನಪ್ರಿಯ. ನಂದರ ವಂಶವನ್ನು ಅವಸಾನಗೊಳಿಸಿ ಚಂದ್ರಗುಪ್ತ ಮೌರ್ಯನನ್ನು ರಾಜನನ್ನಾಗಿ ಮಾಡಿದ ಈತನ ರೀತಿ ಅದ್ಭುತ. ಈತ ತನ್ನ ‘‘ಚಾಣಕ್ಯ ನೀತಿ’’ಯಲ್ಲಿ ನಮ್ಮ ಸುತ್ತಮುತ್ತಲು ಇರುವ ಪ್ರಾಣಿಗಳಿಂದ ನಾವು ಏನನ್ನು ಕಲಿಯಬಹುದು? ಎಂಬುದನ್ನು ಸವಿವರವಾಗಿ ಉಲ್ಲೇಖಿಸಿದ್ದಾನೆ.

ಸಿಂಹಾದೇಕಂ ಬಕಾದೇಕಂ ಶಿಕ್ಷೇಚ್ಚತ್ವಾರಿ ಕುಕ್ಕುಟಾ ತ್ವಾಯಸಾತ್ಪಂಚ ಶಿಕ್ಷೇಚ್ಚ ಷಟ್ ಶುನಸ್ತ್ರೀಣಿ ಗಾರ್ದಭಾತ್

ಅರ್ಥ: ಸಿಂಹದಿಂದ ಮತ್ತು ಬಕ(ಕೊಕ್ಕರೆ) ಪಕ್ಷಿಯಿಂದ ನಾವು ಒಂದು ವಿಷಯವನ್ನು ಕಲಿಯಬಹುದು. ಹಾಗೆಯೇ ಕೋಳಿಯಿಂದ ನಾಲ್ಕು, ಕಾಗೆಯಿಂದ ಐದು, ನಾಯಿಯಿಂದ ಆರು ಮತ್ತು ಕತ್ತೆಯಿಂದ ಮೂರು ವಿಷಯಗಳನ್ನು ಕಲಿಯಬಹುದು). ಸಿಂಹದಿಂದ ಕಲಿಯಬಹುದಾದದ್ದು ಏನೆಂದರೆ, ಎಷ್ಟೇ ಸಣ್ಣ ಕೆಲಸವಿದ್ದರೂ ಅದು ತನ್ನ ಕೆಲಸ ಮುಗಿಯುವ ತನಕ ತನ್ನ ಶಕ್ತಿ ಮರೆತು ವಿಶ್ರಮಿಸುವುದಿಲ್ಲ. ಅಂದರೆ, ಅದು ಯಾವುದೇ ಪ್ರಾಣಿಯನ್ನು ಹಿಡಿಯಲು ಯೋಚಿಸಿದರೆ ಅದಕ್ಕೆ ಸರಿಯಾದ ಗುರಿ ಇಟ್ಟುಕೊಂಡು ಕೆಲಸ ಮಾಡುತ್ತದೆ ಮಾತ್ರವಲ್ಲ ಸಾಯಿಸುವ ತನಕ ತನ್ನ ಕೆಲಸವನ್ನು ಬಿಟ್ಟುಬಿಡುವುದಿಲ್ಲ. ನಮ್ಮಲ್ಲಿ ಕೆಲವು ಜನರಿದ್ದಾರೆ. ಅವರಿಗೆ ಕೆಲಸ ಆರಂಭಿಸಿ ಮಾತ್ರ ಅಭ್ಯಾಸ. ಮುಗಿಸುವ ತನಕ ಆರಂಭಿಸಿದ ಹುಮ್ಮಸ್ಸು ಇರುವುದಿಲ್ಲ. ಸಿಂಹದಂತೆಯೆ ನಾವು ಕೂಡ ಏನೇ ಕೆಲಸ ಮಾಡಿದರೂ ಅಚ್ಚುಕಟ್ಟಾಗಿ ಉಪಾಯ ಮಾಡಿ, ತದೇಕಚಿತ್ತದಿಂದ ಕೆಲಸ ಮಾಡಿದರೆ ಆ ಕೆಲಸವು ಯಶಸ್ವಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ; ಬಕ(ಕೊಕ್ಕರೆ) ಪಕ್ಷಿಯು ತನ್ನ ಎಲ್ಲ ಇಂದ್ರಿಯಗಳನ್ನು ಸಂಯಮದಿಂದ ಹಿಡಿದಿಟ್ಟುಕೊಂಡು ದೇಶ, ಕಾಲ, ಬಲ ನೋಡಿಕೊಂಡು ತನ್ನ ಎಲ್ಲ ಕೆಲಸವನ್ನು ಮಾಡುತ್ತದೆ. ಅಂದರೆ, ಈ ಹಕ್ಕಿಯು ಮೀನನ್ನು ಹಿಡಿಯಬೇಕಾದರೆ ಸುಮ್ಮನೆ ನಿಂತಿದ್ದು – ಸಮಯ, ಜಾಗ ಎಲ್ಲ ನೋಡಿಕೊಂಡು ಒಂದೇ ಗುಟುಕಲ್ಲಿ ಮೀನನ್ನು ಹಿಡಿದುಬಿಡುತ್ತದೆ. ಅದೇ ರೀತಿ ಮಾನವರು ಕೂಡ ಸಂಯಮದಿಂದ ಕಾದು, ತಮ್ಮ ಸಮಯ ಬಂದಾಗ ತಮ್ಮ ಕೆಲಸವನ್ನು ಮಾಡಿದರೆ ಯಶಸ್ಸು ಸಿದ್ಧ ಎಂಬುದು ಇದರ ಅರ್ಥ.