- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ರಾಜ್ಯ ಸರಕಾರ ಕಾನೂನಿಗಿಂತ ಮಾನವೀಯತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪರಿಹಾರ ನೀಡಿ: ವೇದವ್ಯಾಸ ಕಾಮತ್

desh-vedavyas [1]ಮಂಗಳೂರು: ರಾಜ್ಯ ಸರಕಾರ ಕಾನೂನಿಗಿಂತ ಮಾನವೀಯತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪರಿಹಾರ ನೀಡಬೇಕು ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಕಂದಾಯ ಸಚಿವ ಆರ್ ವಿ ದೇಶಪಾಂಡೆಯವರಿಗೆ ಮನವಿ ಮಾಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಸಭೆಯ ಬಳಿಕ ಸಚಿವ ಆರ್ ವಿ ದೇಶಪಾಂಡೆಯವರಿಗೆ ಮಂಗಳೂರು ನಗರ ದಕ್ಷಿಣದಲ್ಲಿ ಆಗಿರುವ ಹಾನಿಯ ಸಂಪೂರ್ಣ ವರದಿಯನ್ನು ನೀಡಿ ವೇದವ್ಯಾಸ ಕಾಮತ್ ಮಾಧ್ಯಮಗಳೊಂದಿಗೆ ಮಾತನಾಡಿದರು.

ಮಳೆಯಿಂದ ನಷ್ಟಕ್ಕೊಳಗಾದ ಸುಮಾರು 110 ಮನೆಗಳಿಗೆ ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದೇನೆ.ಅನೇಕ ಮನೆಗಳ ಆವರಣ ಗೋಡೆಗಳು ಮತ್ತು ಕಟ್ಟಡಗಳ ತಡೆಗೋಡೆಗಳು ನೀರಿಗೆ ಕೊಚ್ಚಿ ಹೋಗಿವೆ. ಎಷ್ಟೋ ಮನೆಗಳ ಒಳಗೆ ನೀರು ನುಗ್ಗಿದ ಪರಿಣಾಮ ಮನೆಯ ಸೊತ್ತುಗಳು ಹಾನಿಗೊಳಗಾಗಿವೆ. ಮನೆಗಳಲ್ಲಿ ಇದ್ದ ಅಮೂಲ್ಯ ಯಂತ್ರೋಪಕರಣಗಳು ಹಾಳಾಗಿ ನಷ್ಟವಾಗಿದೆ. ಮನೆ ಕುಸಿದರೆ ಅಥವಾ ಮನೆ ಭಾಗಶ: ಧ್ವಂಸವಾದರೆ ಸರಕಾರ ಪರಿಹಾರ ಕೊಡುತ್ತದೆ. ಆದರೆ ಕಾನೂನು ಪ್ರಕಾರ ಆವರಣ ಗೋಡೆ, ಮನೆಯ ಒಳಗಿನ ಸೊತ್ತುಗಳಿಗೆ ಆದ ನಷ್ಟಕ್ಕೆ ಸರಕಾರ ಪರಿಹಾರ ಕೊಡುವುದಿಲ್ಲ. ಆದರೆ ಈ ಬಾರಿಯ ಮಳೆಯನ್ನು ವಿಶೇಷ ಸಂದರ್ಭ ಎಂದು ಪರಿಗಣಿಸಿ ಪರಿಹಾರದ ಸ್ವರೂಪವನ್ನು ವಿಸ್ತರಿಸಬೇಕು ಎಂದು ಮನವಿ ಮಾಡಿರುವುದಾಗಿ ವೇದವ್ಯಾಸ ಕಾಮತ್ ತಿಳಿಸಿದರು.

ಮಂಗಳೂರು ನಗರ ದಕ್ಷಿಣದಲ್ಲಿ ಕಂದಾಯ ವಿಭಾಗದಲ್ಲಿ ಇರುವ ಸಮಸ್ಯೆಗಳನ್ನು ಕೂಡ ಇದೇ ಸಂದರ್ಭದಲ್ಲಿ ಅವರು ಸಚಿವರ ಗಮನಕ್ಕೆ ತಂದರು .