- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ರಾಜ್ಯದಲ್ಲಿ ಭಾರಿ ಮಳೆ…13 ವರ್ಷಗಳ ಹಿಂದಿನ ದಾಖಲೆ ಮುರಿದ ವರುಣ

heavy-rain [1]ಬೆಂಗಳೂರು: ರಾಜ್ಯದೆಲ್ಲೆಡೆ ಮುಂಗಾರು ಚುರುಕಾಗಿದ್ದು, ಕಳೆದ ಹತ್ತು ದಿನದಲ್ಲಿ ಸುರಿದ ಮಳೆ ಕಳೆದ 13 ವರ್ಷಗಳಲ್ಲೇ ಇದು ಅತ್ಯಧಿಕ ಪ್ರಮಾಣದ್ದಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್ಎನ್‌ಡಿಎಂಸಿ) ಮಾಹಿತಿ ನೀಡಿದೆ.

ಕೆಎಸ್ಎನ್‌ಡಿಎಂಸಿ ಪ್ರಕಟಿಸಿದ ಮುಂಗಾರು ಅವಧಿಯ ಮೊದಲ 10 ದಿನಗಳ ಮಳೆಯ ವರದಿಯಲ್ಲಿ ಈ ಅಂಶ ಉಲ್ಲೇಖಿಸಲಾಗಿದೆ. ವರದಿ ಪ್ರಕಾರ ಜೂ.1ರಿಂದ ಜೂ.10ರವರೆಗೆ ವಾಡಿಕೆಯಂತೆ ರಾಜ್ಯಾದ್ಯಂತ ಸರಾಸರಿ 51 ಮಿ.ಮೀ. ಮಳೆ ದಾಖಲಾಗಬೇಕು. ಆದರೆ ಈ ವರ್ಷ 92 ಮಿ.ಮೀ. ದಾಖಲಾಗಿದ್ದು, 2004ರ ನಂತರದಲ್ಲಿ ರಾಜ್ಯದಲ್ಲಿ ದಾಖಲಾದ ಅತ್ಯಧಿಕ ಮಳೆ ಇದಾಗಿದೆ.

2004ರಲ್ಲಿ ಇದೇ ಸಮಯದಲ್ಲಿ 99 ಮಿ.ಮೀ. ಮಳೆ ದಾಖಲಾಗಿತ್ತು. ಜೂ.8ರಿಂದ ಮಲೆನಾಡು, ಕರಾವಳಿಯಲ್ಲಿ ಮಳೆಯಬ್ಬರ ಹೆಚ್ಚಾಗಿದ್ದು, ಜೂ.15ರವರೆಗಿನ ಮಳೆ ಪ್ರಮಾಣ ಹೋಲಿಸಿದರೆ 13 ವರ್ಷದ ದಾಖಲೆಯನ್ನೂ ಮುರಿಯುವ ಸಾಧ್ಯತೆಯಿದೆ. 1991ರಲ್ಲಿ 10 ದಿನಗಳಲ್ಲಿ 167 ಮಿ.ಮೀ. ಮಳೆ ಸುರಿದಿರುವುದು ಸಾರ್ವಕಾಲಿಕ ದಾಖಲೆಯಾಗಿದೆ.

ಇನ್ನು ಜೂ.1ರಿಂದ ಜೂ.10ರವರೆಗೆ ಮಲೆನಾಡಿನ ಚಿಕ್ಕಮಗಳೂರು, ಕೊಡಗು, ಹಾಸನ, ಶಿವಮೊಗ್ಗ ಜಿಲ್ಲೆಗಳಲ್ಲಿ ಸುರಿದ ಮಳೆ 17 ವರ್ಷಗಳಲ್ಲೇ ಅತ್ಯಧಿಕವಾಗಿದೆ ಎಂದು ವರದಿಯಾಗಿದೆ. ಜೂ.20ರವರೆಗೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ಮಳೆಯಬ್ಬರ ಮುಂದುವರಿಯುವ ಎಚ್ಚರಿಕೆ ನೀಡಲಾಗಿದ್ದು, ದಕ್ಷಿಣ ಒಳನಾಡು ಹಾಗೂ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣವಿರಲಿದೆ.

ಬೆಂಗಳೂರು ಮಹಾನಗರದಲ್ಲಿ ಕಳೆದ 10 ದಿನಗಳಿಂದ ನಿರಂತರ ಭಾರಿ ಮಳೆ ಸುರಿಯುತ್ತಿದೆ. ವಾತಾವರಣ ಕೂಡ ತಂಪಾಗಿದ್ದು, ಬೆಳಗಿನ ಜಾವ ಹಾಗೂ ಸಂಜೆಯ ಸಮಯ ಮಳೆರಾಯ ಆರ್ಭಟ ನಡೆಸಿದ್ದಾನೆ. ಇದರಿಂದ ಮತ್ತೆ ಬೆಂಗಳೂರು ಉದ್ಯಾನನಗರಿ ವೈಭವ ಪಡೆದಿದೆ.