- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ರಾಜ್ಯ ಕಾಂಗ್ರೆಸ್‍ನಲ್ಲಿ ಸದ್ಯ ಉಳಿದೆಲ್ಲಾ ಅಸಮಾಧಾನ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ!

dinesh-gundurao [1]ಬೆಂಗಳೂರು: ರಾಜ್ಯ ಕಾಂಗ್ರೆಸ್‍ನಲ್ಲಿ ಸದ್ಯ ಉಳಿದೆಲ್ಲಾ ಅಸಮಾಧಾನ, ಅತೃಪ್ತಿ ತಾತ್ಕಾಲಿಕವಾಗಿ ಶಮನವಾಗಿದ್ದು, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಡೆದಿರುವ ಹೋರಾಟ ಸದ್ಯ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ.

ಉಪ ಮುಖ್ಯಮಂತ್ರಿ, ಗೃಹ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿರುವ ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್ ಕಡೆಗೂ ತಮ್ಮ 8 ವರ್ಷದ ಕೆಪಿಸಿಸಿ ಸಾರಥ್ಯವನ್ನು ಮುಗಿಸಬೇಕಿದೆ. ಹಲವು ಹುದ್ದೆ ಒಬ್ಬರಿಗೇ ನೀಡುವ ಪರಿಪಾಠ ಕಾಂಗ್ರೆಸ್‍ನಲ್ಲಿ ಇಲ್ಲ. ಪಕ್ಷ ಇಲ್ಲವೇ ಸರ್ಕಾರ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ಸದ್ಯ ಈ ಆಯ್ಕೆ ವಿಚಾರ ಬಂದಾಗ ಪಕ್ಷದ ಮೇಲಿನ ಹಿಡಿತ ಉಳಿಸಿಕೊಳ್ಳುವ ಆಸೆ ಇದ್ದರೂ, ಸರ್ಕಾರ ನಡೆಸುವುದರ ಮೇಲಿನ ಮೋಹಕ್ಕೆ ಬಿಟ್ಟುಕೊಡಬಹುದು ಎನ್ನಲಾಗುತ್ತಿದೆ. ಆದರೆ ಎಲ್ಲವನ್ನೂ ನಿಭಾಯಿಸುವ ಆಸಕ್ತಿ ಪರಮೇಶ್ವರ್‌ಗೆ ಇದ್ದರೂ ಹೈಕಮಾಂಡ್‍ ಅವಕಾಶ ಕೊಡುವ ಸಾಧ್ಯತೆ ಕಡಿಮೆ.

ಇದರಿಂದ ಹಾಲಿ ಕಾರ್ಯಾಧ್ಯಕ್ಷರಾಗಿರುವ ದಿನೇಶ್‍ ಗುಂಡೂರಾವ್‍ ಬಹುತೇಕ ಕೆಪಿಸಿಸಿ ಸಾರಥಿ ಆಗುತ್ತಾರೆ ಎನ್ನುವ ಮಾತು ಕೇಳಿಬಂದಿತ್ತು. ಆದರೆ ಇದರ ಬೆನ್ನಲ್ಲೇ ಇಲ್ಲಿಯೂ ಹಲವು ಬಣಗಳು ಸೃಷ್ಟಿಯಾಗಿ ದಿನೇಶ್‍ ಹಾದಿ ಕಷ್ಟ ಎನ್ನಲಾಗುತ್ತಿದೆ. ಸದ್ಯ ಡಿಕೆಶಿ, ಎಂ.ಬಿ.ಪಾಟೀಲ್‍, ಎಸ್‍.ಆರ್‍. ಪಾಟೀಲ್, ಕೆ.ಎಚ್‍.ಮುನಿಯಪ್ಪ ಹೆಸರು ಕೇಳಿ ಬರುತ್ತಿದ್ದು, ಹೊಸದಾಗಿ ಎಚ್‍.ಕೆ.ಪಾಟೀಲ್‍ ಹೆಸರು ಕೂಡ ವಾರದಿಂದ ಸೇರ್ಪಡೆಯಾಗಿದೆ. ಪಕ್ಷದ ಸಂಸದರು ಸಭೆ ನಡೆಸಿ, ಹಿರಿಯರಿಗೆ ಅವಕಾಶ ಕೊಡಬೇಕು ಎಂಬ ಸಂದೇಶವನ್ನು ಹೈಕಮಾಂಡ್‌ಗೆ ಕಳಿಸಿದ್ದಾರೆ. ಇದೇ ವೇಳೆ ಉತ್ತರ ಕರ್ನಾಟಕಕ್ಕೆ ಅವಕಾಶ ಸಿಗಬೇಕೆಂಬ ಹೊಸ ಕೂಗು ಕೂಡ ಎದ್ದಿದೆ.

ಯಾವಾಗಲೂ ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯ ಆಗುತ್ತಲೇ ಇದೆ ಎಂದು ಸತೀಶ್ ಜಾರಕಿಹೊಳಿ ಅಸಮಾಧಾನವನ್ನೂ ಹೊರಹಾಕಿದ್ದಾರೆ. ಈ ಭಾಗದಲ್ಲಿ ಶೇ. 80 ಶಾಸಕರು ಚುನಾಯಿತರಾಗಿದ್ದರೆ, ದಕ್ಷಿಣದಲ್ಲಿ ಶೇ. 20 ಚುನಾಯಿತರಾಗಿರುತ್ತಾರೆ. ಇಂಥ ಸಂದರ್ಭದಲ್ಲೂ ಉತ್ತರ ಕರ್ನಾಟಕಕ್ಕೆ ಪ್ರಮುಖ ಸ್ಥಾನಮಾನ ಸಿಗುವುದಿಲ್ಲ. ಕೇವಲ ದಕ್ಷಿಣ ಭಾಗಕ್ಕೆ ಮಾತ್ರ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದಿದ್ದಾರೆ.

ಮೂಲಗಳ ಪ್ರಕಾರ ದಿನೇಶ್ ಗುಂಡೂರಾವ್ ಅವರನ್ನು ಅಧ್ಯಕ್ಷರನ್ನಾಗಿಸಿ, ಈಶ್ವರ ಖಂಡ್ರೆ ಅವರನ್ನು ಕಾರ್ಯಾಧ್ಯಕ್ಷ ಆಗಿಸುವ ಚಿಂತನೆ ಪಕ್ಷದಲ್ಲಿದೆ ಎನ್ನಲಾಗುತ್ತಿದೆ. ಪರಮೇಶ್ವರ್‍ ಅವರೇ ಇನ್ನೊಂದು ವರ್ಷ ಮುಂದುವರಿದು, ಲೋಕಸಭೆ ಚುನಾವಣೆ ನಂತರ ಅಧಿಕಾರ ಬಿಟ್ಟುಕೊಡಲಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಇದು ಸೂಕ್ತ ಎನ್ನುವ ಮಾತು ಕೇಳಿಬರುತ್ತಿದೆ. ಅಂತಿಮವಾಗಿ ಹೈಕಮಾಂಡ್‍ ಯಾರಿಗೆ ಮಣೆ ಹಾಕುತ್ತದೆ ಎನ್ನುವುದು ಇನ್ನೊಂದು ವಾರದಲ್ಲಿ ತಿಳಿಯಲಿದೆ.