- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಜಿಲ್ಲೆಯಲ್ಲಿ ಮೀನಿಗೆ ರಾಸಾಯನಿಕ ಬಳಕೆ ಮಾಡಿ ಮಾರಾಟ ವದಂತಿ..ಮೀನು ಮಾರಾಟಗಾರರು ಸಂಕಷ್ಟ!

fish [1]ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೀನಿಗೆ ರಾಸಾಯನಿಕ ಬಳಕೆ ಮಾಡಿ ಮಾರಾಟ ಮಾಡುತ್ತಾರೆ ಎನ್ನುವ ವದಂತಿ ಸಾಮಾಜಿಕ ಜಾಲತಾಣಗಳ ಮೂಲಕ ಹರಡುತ್ತಿರುವುದರಿಂದ ಮೀನು ಮಾರಾಟಗಾರರು ಸಂಕಷ್ಟಕ್ಕೀಡಾಗಿದ್ದಾರೆ.

ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಮೀನಿಗೆ ರಾಸಾಯನಿಕ ಸಿಂಪಡಣೆ ಮಾಡಿ ಮಾರಾಟ ಮಾಡುತ್ತಾರೆ ಎನ್ನುವ ಆಕ್ಷೇಪಣೆಯನ್ನು ಮಾಡುವ ಓರ್ವ ಗ್ರಾಹಕ ಮೀನು ಮಾರಾಟಗಾರರ ಬಳಿ ವಾಗ್ವಾದ ಮಾಡುವುದನ್ನು ಒಳಗೊಂಡ ವಿಡಿಯೋವೊಂದನ್ನು ವಾಟ್ಸಪ್ ಗುಂಪಿನಲ್ಲಿ ಹರಿಯಬಿಡಲಾಗಿದೆ. ಈ ಸಂಭಾಷಣೆಯಲ್ಲಿ ಗ್ರಾಹಕರು ಮೀನು ಮಾರಾಟಗಾರರನ್ನು ಆಕ್ಷೇಪಿಸುತ್ತಿದ್ದಾರೆ. ಮೀನು ಮಾರಾಟಗಾರ ತಾನು ಆ ರೀತಿ ಯಾವೂದೇ ಕೆಮಿಕಲ್ ಬಳಸಿಲ್ಲ. ಹೊರಗಿನಿಂದ ಮೀನು ಬರುತ್ತದೆ. ನಾವು ಮಾರಾಟ ಮಾಡುತ್ತಿದ್ದೇವೆ ಎನ್ನುವ ಉತ್ತರವನ್ನು ನೀಡುತ್ತಾನೆ.

ಈ ಸಂಭಾಷಣೆಯ ವಿಡಿಯೋ ವೈರಲ್ ಆಗಿರುವುದರಿಂದ ಕಳೆದ ಎರಡು ದಿನಗಳಿಂದ ಮಂಗಳೂರಿನ ಸ್ಥಳೀಯ ಬಿಡಿ ಮೀನು ಮಾರಾಟಗಾರರ ಬಳಿ ನಿತ್ಯ ಮೀನು ಖರೀದಿಸುವ ಗ್ರಾಹಕರು ಮೀನಿಗೆ ಕೆಮಿಕಲ್ ಹಾಕಿದೆಯೇ ಎಂದು ಪ್ರಶ್ನಿಸುತ್ತಾರೆ. ಇನ್ನು ಕೆಲವರು ಕೆಲವು ದಿನ ಮೀನು ಬೇಡ ಎನ್ನುವ ನಿರ್ಧಾರಕ್ಕೆ ಬಂದಿರುವುದು ಮೀನು ಮಾರಾಟದಲ್ಲಿ ಇಳಿಕೆಯಾಗಿರುವುದಕ್ಕೆ ಕಾರಣವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಯಾಂತ್ರೀಕೃತ ಮೀನುಗಾರಿಕೆಗೆ ರಜೆ ಇರುವುದರಿಂದ ಸ್ಥಳೀಯವಾಗಿ ಮೀನು ಮಾರುಕಟ್ಟೆಗೆ ಬಾರದೆ ಇರುವ ಕಾರಣ ಜಿಲ್ಲೆಗೆ ಮದ್ರಾಸು, ತಮಿಳುನಾಡು, ಹೈದರಾಬಾದ್ ಮೊದಲಾದ ಕಡೆಗಳಿಂದ ಮೀನು ಪೂರೈಕೆಯಾಗುತ್ತಿದೆ. ಈ ಸಂದರ್ಭ ಮೀನು ಕೆಡದಂತೆ ಸಂರಕ್ಷಿಸಲು ಕೆಲವೊಂದು ರಾಸಾಯನಿಕಗಳ ಬಳಕೆ ಮಾಡುತ್ತಾರೆ ಎನ್ನುವ ಬಗ್ಗೆ ವದಂತಿ ಹರಡಿದೆ. ಇದರಿಂದ ಕರಾವಳಿಯಲ್ಲಿ ಮೀನು ಮಾರಾಟಗಾರರು ಸಮಸ್ಯೆ ಎದುರಿಸುವಂತಾಗಿದೆ.