- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮುಲ್ಲರಪಟ್ನ ಸೇತುವೆ ಕುಸಿಯಲು ಮರಳು ಮಾಫಿಯಾ, ಅಧಿಕಾರಿ ನಿರ್ಲಕ್ಷ ಕಾರಣ: ಸಂಸದ ನಳಿನ್ ಕುಮಾರ್

nalin-kumar [1]ಮಂಗಳೂರು: ಮುಲ್ಲರಪಟ್ನ ಸೇತುವೆಯು ಮರಳು ಮಾಫಿಯಾಕ್ಕೆ ಬಲಿಯಾದ ಮೊದಲ ಸೇತುವೆಯಾಗಿದ್ದು, ಅಧಿಕಾರಿಗಳ ನಿರ್ಲಕ್ಷವೂ ಕಾರಣ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.

ಮಂಗಳೂರಿನಲ್ಲಿಂದು ಸುದ್ದಿಗಾರರ ಜತೆ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಲ್ಲಿ ಅಧಿಕಾರಿಗಳಿಗೆ ಅಲ್ಲಿಯ ಸ್ಥಳೀಯರು ಮರಳು ತೆಗೆಯುವುದರಿಂದ ಆಗಿರುವ ಹಾನಿ ಬಗ್ಗೆ, ಪಿಲ್ಲರ್ ಕುಸಿತದ ಬಗ್ಗೆ ವೀಡಿಯೋ ರೆಕಾರ್ಡ್ ಮಾಡಿ ಕಳುಹಿಸಿದ್ದರು. ಆಗ ಜಿಲ್ಲಾಡಳಿತ ಸೇತುವೆ ಬದಿ ಯಂತ್ರಗಳನ್ನು ಉಪಯೋಗಿಸಿ ಮರಳು ತೆಗೆಯುವುದನ್ನು ನಿಲ್ಲಿಸಿಲ್ಲ. ಅಲ್ಲಿ ಕಳೆದ ಅವಧಿಯಲ್ಲಿ ಆಡಳಿತದಲ್ಲಿದ್ದವರ ಪ್ರಭಾವ, ಬೆಂಬಲದೊಂದಿಗೆ ಮರಳುಗಾರಿಕೆ ಕಾರ್ಯ ನಿರಂತರವಾಗಿ ಮುಂದುವರಿದಿತ್ತು.

ಅಧಿಕಾರಿಗಳು ಇಂತಹ ಸಂದರ್ಭಗಳಲ್ಲಿ ಮುಂಜಾಗೃತಾ ಕ್ರಮ ಕೈಗೊಂಡು ಪ್ರಸ್ತಾವಗಳನ್ನು ಸಲ್ಲಿಸುವ ಕೆಲಸ ಮಾಡುವುದು ಅವರ ಕರ್ತವ್ಯ. ಮೂರ್ನಾಲ್ಕು ವರ್ಷಗಳಿಂದ ದೂರು ಇರುವಾಗಲೂ ಅದರ ನಿರ್ವಹಣೆ ಮಾಡುವ ಕೆಲಸ ಆಗಬೇಕಿತ್ತು. ಹಾನಿಯಾಗಿದ್ದರೆ, ಅದನ್ನು ನಿರ್ವಹಣೆ ಮಾಡಲು ಆಗದಿದ್ದರೆ ಸರಕಾರಕ್ಕೆ ಈ ಬಗ್ಗೆ ಲಿಖಿತವಾಗಿ ತಿಳಿಸಬೇಕಿತ್ತು. ಇದೀಗ ಸೇತುವೆ ಕುಸಿದಿದ್ದು, ಎರಡು ವರ್ಷಕ್ಕೆ ಈ ಪ್ರದೇಶದ ಜನರ ದಿನನಿತ್ಯದ ಸಂಚಾರ ವ್ಯವಸ್ಥೆಗೆ ತೊಡಕುಂಟಾಗುವಂತಾಗಿದೆ ಎಂದರು.

ಇದೀಗ ಸ್ಥಳೀಯ ಶಾಸಕರ ಜತೆ ನಾನು ಆ ಪ್ರದೇಶಕ್ಕೆ ಭೇಟಿ ನೀಡಿ ತಾತ್ಕಾಲಿಕ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವಂತೆ ಜಿಲ್ಲಾಡಳಿತ ಹಾಗೂ ಎಂಆರ್‌ಪಿಎಲ್‌ಗೆ ಸೂಚನೆ ನೀಡಿದ್ದೇವೆ ಎಂದು ನಳಿನ್ ಕುಮಾರ್ ತಿಳಿಸಿದರು.

ಅಲ್ಲಿನ ಫಲ್ಗುಣಿ ತೂಗು ಸೇತುವೆಗೆ ರಸ್ತೆ ಇಲ್ಲವಾಗಿದ್ದು, ಅದನ್ನು ಕಲ್ಪಿಸಲಾಗಿದೆ. ಮತ್ತು ಸಮೀಪದ ತೋಡಿಗೆ ಮೋರಿ ಹಾಕಿ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ತೂಗುಸೇತುವವರೆಗೆ ಆ ಕಡೆಯಿಂದ ಟೆಂಪೋಗಳು ಬರುತ್ತವೆ. ತೂಗುಸೇತುವೆ ದಾಟಿದ ಮೇಲೆ ಇನ್ನೊಂದು ಬದಿಯಿಂದ ಟೆಂಪೋ ಮೂಲಕ ಜನರನ್ನು ಸಾಗಿಸಲು ವ್ಯವಸ್ಥೆ ಮಾಡಲಾಗಿದೆ. ತಾತ್ಕಾಲಿಕವಾಗಿ ವ್ಯವಸ್ಥೆ ಕಲ್ಪಿಸಲು ಜಿಲ್ಲಾಧಿಕಾರಿ ಜತೆ ಮಾತನಾಡಿ ಜಿಲ್ಲಾಧಿಕಾರಿಯೂ ಅಲ್ಲಿ ಭೇಟಿ ನೀಡಿ ಸಾರ್ವಜನಿಕರಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಲು ತಿಳಿಸಲಾಗಿದೆ.

ಸದ್ಯ ತಾತ್ಕಾಲಿಕವಾಗಿ ಪರ್ಮಿಟ್ ಇರುವ ಬಸ್ಸುಗಳನ್ನು ಗುರುಪುರ ಹೋಗುವ ಬಸ್ಸುಗಳು ಅಲ್ಲಿವರೆಗೆ ಹೋಗಿ ವಾಪಸ್ ಮಂಗಳೂರಿಗೆ ಬರಬೇಕು. ಆ ಕಡೆಯಿಂದ ಮುಲ್ಲರಪಟ್ನ ಬರುವ ಎಲ್ಲ ಬಸ್ಸುಗಳು ಮುಲ್ಲರಪಟ್ನದ ಸೇತುವೆವರೆಗೆ ಬರಬೇಕು. ಅಲ್ಲಿಂದ ಸೇತುವೆಯನ್ನು ಉಪಯೋಗಿಸಬಹುದು. ಶಾಲಾ ಮಕ್ಕಳಿಗೆ ತೊಂದರೆಯಾದಂತೆ ತೂಗು ಸೇತುವೆ ಉಪಯೋಗಿಸಬೇಕಾಗಿದೆ. ಮುಲ್ಲರಪಟ್ನದಿಂದ ಕೊಳ್ತಮಜಲು- ಪೊಳಲಿ ರಸ್ತೆಯಾಗಿ 2 ಕೆಎಸ್ಸಾರ್ಟಿಸಿ ಬಸ್ಸುಗಳನ್ನು ಓಡಿಸಲು ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ ಎಂದು ಸಂಸದರು ವಿವರಿಸಿದರು.

ಗುರುಪುರ ಸೇತುವೆಯೂ ಅಪಾಯದಲ್ಲಿದೆ. ಅದಕ್ಕೆ ಈಗಾಗಲೇ 33 ಕೋಟಿ ರೂ.ಗಳ ಟೆಂಡರ್ ಆಗಿದೆ. ಕಾಮಗಾರಿ ಆರಂಭಲಿದೆ. ಆದರೂ ತಾತ್ಕಾಲಿಕವಾಗಿ ಅದರ ರಕ್ಷಣೆಯ ಜವಾಬ್ದಾರಿ ಅಧಿಕಾರಿಗಳದ್ದು. ಅದನ್ನು ಎನ್‌ಐಟಿಕೆಯ ಮೂಲಕ ಪರಿಶೀಲನೆಗೆ ತಿಳಿಸಲಾಗಿದೆ. ಇದೇ ವೇಳೆ ಜಿಲ್ಲೆಯ 15 ವರ್ಷಗಳಿಗಿಂತ ಹಿಂದಿನ ಎಲ್ಲಾ ಸೇತುವೆಗಳನ್ನು ಸಾಮರ್ಥ್ಯವನ್ನು ತಜ್ಞ ಅಧಿಕಾರಿಗಳಿಂದ ಜಿಲ್ಲಾಡಳಿತ ಪರಿಶೀಲನೆ ನಡೆಸಬೇಕು. ಜಿಲ್ಲಾಡಳಿತ ಮಾಡದಿದ್ದಲ್ಲಿ ಅದನ್ನು ಎನ್‌ಐಟಿಕೆ ಮೂಲಕ ಮಾಡಲಾಗುವುದು ಎಂದು ಸಂಸದ ನಳಿನ್ ಕುಮಾರ್ ಹೇಳಿದರು.