ಮಂಗಳೂರು: ಮಂಗಳೂರಿನ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಯಕ್ಷಗಾನ ಮೇಳದಿಂದ ಕಳೆದ ಬಾರಿ ಕೈಬಿಡಲಾದ ಏಳು ಮಂದಿಗೆ ಈ ಬಾರಿಯೂ ಅವಕಾಶ ಸಿಕ್ಕಿಲ್ಲ.
ಕಟೀಲು ದೇವಸ್ಥಾನದಲ್ಲಿ ಆರು ಮೇಳಗಳಿದ್ದು, ಇದರಲ್ಲಿ ಐದನೇ ಮೇಳದಲ್ಲಿ ಪ್ರಸಿದ್ಧ ಭಾಗವತರಾದ ಪಟ್ಲ ಸತೀಶ್ ಶೆಟ್ಟಿಯವರನ್ನು ಒಂದನೇ ಮೇಳಕ್ಕೆ ವರ್ಗಾಯಿಸಲಾಗಿತ್ತು. ಇದರಿಂದ ಅಸಮಾಧಾನಗೊಂಡಿದ್ದ ಐದನೇ ಮೇಳದ ಕಲಾವಿದರು ಮೇಳಕ್ಕೆ ರಾಜೀನಾಮೆ ನೀಡಿದ್ದರು. ನಂತರ ನಡೆದ ಬೆಳವಣಿಗೆಯಲ್ಲಿ ಏಳು ಕಲಾವಿದರನ್ನು ಹೊರತುಪಡಿಸಿ ಇತರ ಕಲಾವಿದರನ್ನು ಮೇಳಕ್ಕೆ ಸೇರಿಸಲಾಗಿತ್ತು. ಆದರೆ ಏಳು ಮಂದಿ ಕಲಾವಿದರನ್ನು ಮೇಳಕ್ಕೆ ಸೇರಿಸಿಕೊಂಡಿರಲಿಲ್ಲ. ಈ ವಿಚಾರ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.
ಕಟೀಲು ಮೇಳದ ಯಕ್ಷಗಾನ ತಿರುಗಾಟ ಮಳೆಗಾಲದ ಬಳಿಕ ಮತ್ತೆ ಶುರುವಾಗಲಿದ್ದು, ಈ ಬಾರಿಯೂ ಕಲಾವಿದರನ್ನು ಯಕ್ಷಗಾನ ಮೇಳಕ್ಕೆ ಸೇರಿಸಲು ಆಡಳಿತ ಮಂಡಳಿ ನಿರಾಕರಿಸಿದೆ. ಕೈಬಿಟ್ಟ ಏಳು ಕಲಾವಿದರು ತಾವು ರಾಜೀನಾಮೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಕ್ಷಮೆ ಕೇಳಲು ಸಿದ್ಧ ಎಂದು ಈ ಹಿಂದೆಯೇ ತಿಳಿಸಿ ಅವಕಾಶ ನೀಡಬೇಕೆಂದು ಕೋರಿದ್ದರು.
ಇದಕ್ಕೆ ಸಂಬಂಧಿಸಿದಂತೆ ಕಟೀಲು ಆರು ಮೇಳಗಳ ಉಸ್ತುವಾರಿ ನೋಡುತ್ತಿರುವ ಮೇಳದ ಯಜಮಾನ ದೇವಿಪ್ರಸಾದ್ ಶೆಟ್ಟಿಯವರನ್ನು ಸಾಕಷ್ಟು ಬಾರಿ ಸಂಪರ್ಕಿಸಲಾಗಿದ್ದರೂ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಆಪಾದಿಸಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಟೀಲು ದೇವಳದ ಅರ್ಚಕ ಹರಿನಾರಾಯಣ ದಾಸ ಅಸ್ರಣ್ಣ, ಕೈಬಿಟ್ಟ ಕಲಾವಿದರು ಎಲ್ಲಿಯೂ ಕ್ಷಮೆ ಕೇಳಿಲ್ಲ ಮತ್ತು ಯಾರನ್ನು ಸಂಪರ್ಕಿಸಿಲ್ಲ ಎಂದಿದ್ದಾರೆ.
ಕಟೀಲು ಮೇಳಕ್ಕೆ ಸಂಬಂಧಿಸಿದಂತೆ ವಾಟ್ಸಪ್ , ಫೇಸ್ಬುಕ್ನಲ್ಲಿಯೂ ಅಪಪ್ರಚಾರ ಮಾಡಲಾಗುತ್ತಿದೆ. ಈ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚಿಸಿ ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲಾಗುವುದು ಎಂದು ತಿಳಿಸಿದರು.
ಕಳೆದ ವರ್ಷ ನಡೆದ ವಿದ್ಯಮಾನದ ನಂತರ ಕಟೀಲು ಮೇಳದಲ್ಲಿ ಗುರತಿಸಿಕೊಂಡಿದ್ದ ಕಲಾವಿದರು ಮತ್ತೇ ಹೇಗಾದರೂ ಕಟೀಲು ಮೇಳದಲ್ಲಿ ಅವಕಾಶ ಸಿಗುವಂತಾಗಬೇಕು ಎಂದು ಎದುರು ನೋಡಿದ್ದರು. ಆದರೆ ಅವರಿಗೆ ಈ ಬಾರಿಯೂ ಕಟೀಲು ಮೇಳದಲ್ಲಿ ಪಾತ್ರಧಾರಿಗಳಾಗುವ ಅವಕಾಶ ಕೈತಪ್ಪಿದೆ.
Click this button or press Ctrl+G to toggle between Kannada and English