- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಹಿಂದಿನ ಸರ್ಕಾರದ ಕೆಲ ಜನಪ್ರಿಯ ಕಾರ್ಯಕ್ರಮಗಳನ್ನು ತಡೆಯಲು ಅವಕಾಶ ಮಾಡಿಕೊಡಬೇಡಿ: ಸಿದ್ದರಾಮಯ್ಯ

siddaramaih [1]ಬೆಂಗಳೂರು: ಆರ್ಥಿಕ ಹೊರೆ ನೆಪವೊಡ್ಡಿ ಇಂದಿರಾ ಕ್ಯಾಂಟೀನ್ ಸೇರಿದಂತೆ ಹಿಂದಿನ ಸರ್ಕಾರದ ಕೆಲ ಜನಪ್ರಿಯ ಕಾರ್ಯಕ್ರಮಗಳನ್ನು ತಡೆಯಲು ಮುಂದಾದರೆ ಅದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸಮನ್ವಯ ಸಮಿತಿ ಕಾಂಗ್ರೆಸ್ ಸದಸ್ಯರಿಗೆ ಕಿವಿಮಾತು ಹೇಳಿದ್ದಾರೆ ಎನ್ನಲಾಗಿದೆ.

ಸಂಜೆ ನಡೆಯುವ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರಚನಾ ಸಮಿತಿ ಸಭೆಗೆ ಮುನ್ನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಸದಸ್ಯರಾದ ವೀರಪ್ಪ ಮೊಯ್ಲಿ, ಆರ್.ವಿ. ದೇಶಪಾಂಡೆ, ಡಿ.ಕೆ. ಶಿವಕುಮಾರ್ ಜತೆಗಿನ ಸಭೆಯಲ್ಲಿ ಈ ವಿಚಾರವಾಗಿ ಸಿದ್ದರಾಮಯ್ಯ ಗಮನ ಸೆಳೆದರು.

ಉಪಮುಖ್ಯಮಂತ್ರಿ ಪರಮೇಶ್ವರ್ ಕೂಡ ಉಪಸ್ಥಿತರಿದ್ದು ಅಗತ್ಯ ಸಲಹೆ ನೀಡಿದರು.

ಅದಾಗಲೇ ನಮ್ಮ ಹಲವು ಕಾರ್ಯಕ್ರಮಗಳಿಗೆ ಸಿಎಂ ಕುಮಾರಸ್ವಾಮಿ ಅಡ್ಡಗಾಲು ಹಾಕುವ ಸಾಧ್ಯತೆ ತೋರಿಸಿದ್ದಾರೆ. ಬಜೆಟ್ನಲ್ಲಿ ಸಾಲಮನ್ನಾ ಘೋಷಿಸಿ, ಹಣಕಾಸು ಕೊರತೆ ನೆಪವೊಡ್ಡಿ ಹಿಂದಿನ ಸರ್ಕಾರದ ಕಾರ್ಯಕ್ರಮಗಳಿಗೆ ತಡೆ ಒಡ್ಡಬಹುದು. ಇದರಿಂದ ಸಮ್ಮಿಶ್ರ ಸರ್ಕಾರದಲ್ಲಿ ಜನರಿಗೆ ಕಾಂಗ್ರೆಸ್ ಮೇಲಿನ ನಂಬಿಕೆ ಕಡಿಮೆ ಆಗಬಹುದು. ಇದು ನಮಗೆ ಮುಂದೆ ತೊಂದರೆ ಉಂಟುಮಾಡುವ ಸಾಧ್ಯತೆ ಇದೆ ಎಂದು ಸಭೆಯಲ್ಲಿ ಸಿದ್ದರಾಮಯ್ಯ ತಿಳಿಸಿದ್ದಾರೆ ಎನ್ನಲಾಗಿದೆ.

ಲೋಕಸಭೆ ಚುನಾವಣೆ ಮಾತ್ರವಲ್ಲ, ಸ್ಥಳೀಯ ಸಂಸ್ಥೆಗಳ ಚುನಾವಣೆ ಕೂಡ ಹತ್ತಿರದಲ್ಲಿದೆ. ಬಜೆಟ್ ನಲ್ಲಿ ನಮ್ಮ ಕಾರ್ಯಕ್ರಮ ಕ್ಕೆ ಹಿನ್ನಡೆ ಉಂಟಾದರೆ ಜನರ ಮುಂದೆ ತೆರಳುವುದು ಹೇಗೆ? ಜನರಿಗೆ ಏನು ಉತ್ತರ ಕೊಡಬೇಕು. ಸಂಜೆಯ ಸಭೆಯಲ್ಲಿ ನಾವು ಪಾಲ್ಗೊಳ್ಳಲು ಸಾಧ್ಯವಾಗಲ್ಲ. ಪಕ್ಷದ ನಿಲುವನ್ನು ನೀವೇ ಸಾಬೀತುಪಡಿಸಬೇಕು. ನಮ್ಮ ಪ್ರಣಾಳಿಕೆಯ ಭರವಸೆ, ಹಿಂದಿನ ಸರ್ಕಾರದ ಕಾರ್ಯಕ್ರಮಕ್ಕೆ ಯಾವುದೇ ಧಕ್ಕೆ ಆಗದಂತೆ ನೋಡಿಕೊಳ್ಳಿ. ಯಾವುದೇ ಗೊಂದಲದ ನಿರ್ಣಯ ಕೈಗೊಳ್ಳುವ ಸಂದರ್ಭ ಎದುರಾದರೆ ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಬೇಡಿ. ಸಮನ್ವಯ ಸಮಿತಿ ಸಭೆಯ ಮುಂದೆ ತನ್ನಿ. ನಾವು ಅದನ್ನು ನೋಡಿಕೊಳ್ಳುತ್ತೇವೆ. ಯಾವುದಕ್ಕೂ ಆತುರದಲ್ಲಿ ಒಪ್ಪಿಕೊಳ್ಳಬೇಡಿ ಎಂದಿದ್ದಾರೆ ಎನ್ನಲಾಗಿದೆ.

ಇದಕ್ಕೆ ಪರಮೇಶ್ವರ್ ಕೂಡ ಸಮ್ಮತಿ ಸೂಚಿಸಿದ್ದು, ಕಾಂಗ್ರೆಸ್ ಪಕ್ಷದ ನಿಲುವಿಗೆ ಬದ್ಧವಾಗಿರುತ್ತೇವೆ. ಯಾವುದೇ ಬಲವಂತಕ್ಕೆ, ಒತ್ತಡಕ್ಕೆ ಒಳಗಾಗಿ ನಿರ್ಧಾರ ಕೈಗೊಳ್ಳುವುದಿಲ್ಲ ಎಂದಿದ್ದಾರೆ.

ಒಟ್ಟಾರೆ ಸಭೆಯಲ್ಲಿ ಕಾಂಗ್ರೆಸ್ ಯೋಜನೆ, ಜನಪ್ರಿಯ ಕಾರ್ಯಕ್ರಮಗಳು, ಜೆಡಿಎಸ್ ಅನುಕೂಲಕ್ಕೆ ಬದಲಾಗುವುದು ಬೇಡ. ಆದಷ್ಟು ಪಕ್ಷದ ನಿಲುವು ಪ್ರತಿಪಾದಿಸಿ ಮುಂದಿನ ಚುನಾವಣೆಗೆ ಸಜ್ಜಾಗಬೇಕು. ಇಲ್ಲವಾದರೆಈಗಿನಷ್ಟೂ ಸ್ಥಾನ ಯಾವ ಚುನಾವಣೆಯಲ್ಲೂ ಸಿಗದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಸಭೆ ಮುಗಿದಿದ್ದು, ಎರಡು ಗಂಟೆ ಸುದೀರ್ಘ ಚರ್ಚೆ ನಡೆಯಿತು. ಸಚಿವ ಡಿ.ಕೆ. ಶಿವಕುಮಾರ್ ಸಭೆಯಿಂದ ತೆರಳುವಾಗ ಯಾವುದೇ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದರು.