- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮಕ್ಕಳಿಗೆ ಸಾಹಿತ್ಯದ ಒಲವು ಮೂಡಿಸಿದರೆ ಮಾತ್ರ ಸಾಹಿತ್ಯ ಬೆಳವಣಿಯಾಗಲು ಸಾಧ್ಯ : ಪುನರೂರು

Punarooru [1]ಮಂಗಳೂರು : ಚಿಕ್ಕಮಕ್ಕಳಿಗೆ ಸಾಹಿತ್ಯದ ಒಲವು ಮೂಡಿಸಿದರೆ ಮಾತ್ರ ಸಾಹಿತ್ಯ, ಸಂಸ್ಕೃತಿ ಬೆಳವಣಿಯಾಗಲು ಸಾಧ್ಯ. ಇಂಗ್ಲಿಷ್ ಭಾಷೆ ಎಲ್ಲೆಡೆ ಪ್ರಭುತ್ವ ಸಾಧಿಸಿದರೂ ಕೂಡ ತಾಯಿ ಭಾಷೆಯಲ್ಲಿ ಓದಲು, ಬರೆಯಲು ಕಲಿಯುವಂತೆ ಮಕ್ಕಳಿಗೆ ಪ್ರೋತ್ಸಾಹ ನೀಡುವ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಹೆತ್ತವರು ಪ್ರೋತ್ಸಾಹ ನೀಡಬೇಕಿದೆ ಎಂದು  ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.

ರಾಜ್ಯ ಯುವ ಬರಹಗಾರರ ಒಕ್ಕೂಟದ ಕೇಂದ್ರ ಸಮಿತಿ ಬೆಂಗಳೂರು ಇದರ ವತಿಯಿಂದ ವಿವಿಧ ಸಾಧಕರಿಗೆ ಕುದ್ಮಲ್ ರಂಗರಾವ್ ರಾಜ್ಯ ಯುವ ಪ್ರಶಸ್ತಿ ಪ್ರದಾನ ಹಾಗೂ ಯುವ ಉದಯೋನ್ಮುಖ ಕವಿ-ಕಾವ್ಯ ಪ್ರಥಮ ರಾಜ್ಯ ಸಮ್ಮೇಳನ ರವಿವಾರ ನಗರದ ತುಳುಭವನದಲ್ಲಿ ಜರುಗಿತು.

ಸಮ್ಮೇಳನದ ಸರ್ವಾಧ್ಯಕ್ಷ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಮಾತನಾಡಿ, ಇಂತಹ ಸಮ್ಮೇಳನಗಳ ಮೂಲಕ ಯುವ ಬರಹಗಾರರಿಗೆ ಅವಕಾಶ ನೀಡಲು ಸಾಧ್ಯವಿದೆ. ಹೆಚ್ಚಿನ ಯುವ ಸಾಹಿತಿಗಳು ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡರೆ ಸಾಹಿತ್ಯ ಕ್ಷೇತ್ರ ಸಮೃದ್ಧವಾಗಿ ಬೆಳೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಚಿವ ಯು.ಟಿ.ಖಾದರ್ ಯುವ ಶಕ್ತಿ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಕೊಂಡರೆ ಸಾಹಿತ್ಯ ವಲಯ ಅಭಿವೃದ್ಧಿ ಕಾಣಲು ಸಾಧ್ಯ. ಅವರಲ್ಲಿರುವ ಹೊಸ ಚಿಂತನೆಗಳಿಂದ ಕನ್ನಡ ಸಾಹಿತ್ಯ ಉಜ್ವಲವಾಗಲಿದೆ ಎಂದರು.

ರಾಜ್ಯ ಯುವ ಬರಹಗಾರರ ಒಕ್ಕೂಟದ ಸಂಸ್ಥಾಪಕ ಹೂಹಳ್ಳಿ ನಾಗರಾಜ್, ಆರ್‌ಪಿಐ ರಾಜಾಧ್ಯಕ್ಷ ಡಾ.ಎಂ. ವೆಂಕಟಸ್ವಾಮಿ, ಮಂಗಳೂರು ವಿವಿ ಮಾಜಿ ಕುಲಸಚಿವ ಡಾ.ಪಿ.ಎಸ್. ಯಡಪಡಿತ್ತಾಯ, ಉಪನ್ಯಾಸಕ ಜೆ.ಜಿ.ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.

ಸೋಮನಿಂಗ ಎಚ್ ಹಿಪ್ಪರಗಿ ಸ್ವಾಗತಿಸಿದರು. ಚೇತನ ಕುಂಬ್ಳೆ ಕಾರ್ಯಕ್ರಮ ನಿರೂಪಿಸಿದರು.