- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ನೋಡಬಹುದಾದ ”ಮದುವೆ ಮನೆ”

Ganesh Shruda Arya [1]

ಬೆಂಗಳೂರು : ನಿರ್ದೇಶಕ ಸುನಿಲ್ ಕುಮಾರ್ ಸಿಂಗ್ ಚೊಚ್ಚಲ ನಿರ್ದೇಶನದಲ್ಲಿಯೇ ಸದಭಿರುಚಿಯ ಉತ್ತಮ ಚಿತ್ರವೊಂದನ್ನು ಪ್ರೆಕ್ಷಕರಿಗೆ ನೀಡಿದ್ದಾರೆ. ಸೋಲಿನ ಸೆರಗಲ್ಲಿ ತೇಲಾಡುತಿದ್ದ ಗಣೇಶ್‌ಗೆ ಇಂತಹ ಚಿತ್ರವೊಂದರ ಅಗತ್ಯವಿತ್ತು. ಕತೆ, ಚಿತ್ರಕತೆ, ಸಂಭಾಷಣೆ, ಸಂಗೀತ, ಛಾಯಾಗ್ರಹಣ ಸೇರಿದಂತೆ ಎಲ್ಲಾ ವಿಭಾಗದಲ್ಲಿಯೂ ಈ ಚಿತ್ರ ಯಶಷ್ವಿಯಾಗಿದೆ.

ಚಿತ್ರದ ನಾಯಕಿ ಸುಮಾಳನ್ನು (ಶ್ರದ್ಧಾ ಆರ್ಯ) ಚಿತ್ರದ ನಾಯಕ ಸೂರಜ್ (ಗಣೇಶ್) ಅನಿರೀಕ್ಷಿತ ಸಂದರ್ಭದಲ್ಲಿ ಭೇಟಿಯಾಗುತ್ತಾನೆ. ಸುಮಾಳಿಗೆ ಮದುವೆ ಗೊತ್ತಾಗಿರುತ್ತದೆ. ಮದುವೆಯಾಗುವವನು ಎಸಿಪಿ ದುಷ್ಯಂತ್ (ಚಿರಂತ್). ಆದರೆ ಮದುವೆ ಮನೆಯ ಸಂಭ್ರಮದಲ್ಲಿ ಭಾಗಿಯಾಗಿದ್ದ ಸೂರಜ್ ಅಪರೂಪದ ಅವಕಾಶವೊಂದನ್ನು ಪಡೆಯುತ್ತಾನೆ. ಅದು, ಸುಮಾಳನ್ನು ಇಲ್ಲಿಂದ ಕರೆದುಕೊಂಡು ಹೋಗು ಎಂಬ ಕಾರ್ಯಭಾರ. ಆ ಸಂದರ್ಭದಲ್ಲಿ ಸುಮಾಳನ್ನು ಸೂರಜ್ ಅಪಹರಿಸುತ್ತಾನೆ. ಇದು ಗೊತ್ತಾದಾಗ ತಡವಾಗಿರುತ್ತದೆ. ಅಪಹರಣದ ಹಿಂದಿನ ಕಾರಣವನ್ನು ನೀವು ಪರದೆಯ ಮೇಲೆಯೇ ನೋಡಬೇಕಷ್ಟೆ.

ನಿರ್ದೇಶಕರು ಕಿರುತೆರೆಯಿಂದ ಬಂದಿರುವುದರಿಂದ, ಚಿತ್ರದಲ್ಲಿ ಸಾಕಷ್ಟು ತಿರುವುಗಳನ್ನು ಕೊಟ್ಟಿದ್ದಾರೆ. ಪ್ರಥಮಾರ್ಧದಲ್ಲಿ ಗಣೇಶ್-ಶ್ರದ್ಧಾ ಮುನಿಸು-ಪ್ರೀತಿ ಮುಂಗಾರು ಮಳೆಯನ್ನು ನೆನಪಿಸುತ್ತದೆ. ರೈಲಿನಲ್ಲಿ ನಡೆಯುವ ಸನ್ನಿವೇಶಗಳು, ಗಣೇಶ್ ಚೇಷ್ಟೆಗಳು ಕಚಗುಳಿ ಇಡುತ್ತವೆ. ಆದರೆ ಅದು ಎಲ್ಲವೂ ಅನಗತ್ಯವೆನಿಸದೆ ಅಚ್ಚುಕಟ್ಟಾಗಿದೆ. ಗಣೇಶ್ ತಂಗಿಯಾಗಿ ಸ್ಫೂರ್ತಿ ಮಿಂಚಿ ಮರೆಯಾಗುತ್ತಾರೆ. ಇದು ಇಡೀ ಕಥೆಯ ಹಿನ್ನಲೆ.

ವಿಭಿನ್ನ ಪ್ರೇಮಕಥೆಯನ್ನು ವಿಶೇಷ ನಿರೂಪಣೆಯೊಂದಿಗೆ ನಿರ್ದೇಶಕರು ತನ್ನ ಮೊದಲ ಚಿತ್ರದಲ್ಲೇ ನೀಡಿ ಮಾದರಿಯಾಗಿದ್ದಾರೆ. ಪ್ರೇಕ್ಷಕರಿಗೆ ಮನರಂಜನೆ, ಬೋಧನೆ, ಪ್ರಚೋದನೆ ನೀಡುವ ಉತ್ತಮ ಚಿತ್ರವನ್ನೇ ತೆರೆಗಿಳಿಸಿದ್ದಾರೆ.

ಗಣೇಶ್ ಅಭಿನಯ ಹಾಗೂ ಪಾತ್ರ ಸರಿಸಮಾನಾಗಿದೆ. ನಾಯಕಿ ಶ್ರದ್ಧಾ ಆರ್ಯ ಎಡವಿದ್ದಾರೆ. ಅವಿನಾಶ್, ಶರಣ್, ತಬಲ ನಾಣಿ ಪೋಷಕ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ.

ಶೇಖರ್ ಚಂದ್ರ ಛಾಯಾಗ್ರಹಣ, ಮಣಿಕಾಂತ್ ಕದ್ರಿ ಸಂಗೀತ ಹಾಗೂ ನಿರ್ದೇಶಕರ ಪ್ರಯತ್ನ ಎಲ್ಲೂ ಬೋರ್ ಹೊಡೆಸುವುದಿಲ್ಲ. ಇನ್ನೇಕೆ ತಡ ನೀವು ಹಾಗೂ ನಿಮ್ಮ ಮನೆಯವರು ಮದುವೆಮನೆಗೆ ಹೋಗಬಹುದು.