- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ರಾಜಕೀಯ ಕಾರಣಕ್ಕಾಗಿ ಬಜೆಟ್ ಬಗ್ಗೆ ಟೀಕಿಸುವುದು ಸರಿಯಲ್ಲ: ಐವನ್ ಡಿಸೋಜ

ivan-desouza [1]ಮಂಗಳೂರು: ರಾಜ್ಯ ಸರಕಾರದ ಬಜೆಟ್‌ನಲ್ಲಿ ಕರಾವಳಿಗೆ ಏನೂ ಕೊಡುಗೆ ನೀಡಿಲ್ಲ ಎಂಬ ಬಿಜೆಪಿ ಶಾಸಕರ ಆರೋಪದಲ್ಲಿ ಹುರುಳಿಲ್ಲ. ಮೊದಲು ಅವರು ಬಜೆಟ್ ಪುಸ್ತಕವನ್ನು ಓದಲಿ ಬಳಿಕ ಮಾತನಾಡಲಿ. ಅದು ಬಿಟ್ಟು ರಾಜಕೀಯ ಕಾರಣಕ್ಕಾಗಿ ಬಜೆಟ್ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದ್ದಾರೆ.

ಶನಿವಾರ ತನ್ನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಫೆಬ್ರವರಿಯಲ್ಲಿ ಸಿದ್ದರಾಮಯ್ಯ ಸರಕಾರ ಮಂಡಿಸಿದ ಬಜೆಟ್‌ನ ಮುಂದುವರಿದ ಭಾಗ ಎಂದು ಸಿಎಂ ಕುಮಾರಸ್ವಾಮಿ ಮುನ್ನುಡಿಯಲ್ಲೇ ಹೇಳಿದ್ದಾರೆ. ಹಿಂದಿನ ಬಜೆಟ್ ಕಾರ್ಯಕ್ರಮಗಳನ್ನು ಮುಂದುವರಿಸುವುದಾಗಿಯೂ ಹೇಳಿದ್ದಾರೆ. ಇದನ್ನು ಅರ್ಥ ಮಾಡಿಕೊಳ್ಳಲು ಬಿಜೆಪಿ ಶಾಸಕರು ವಿಫಲರಾಗಿದ್ದಾರೆ. ಅಧಿಕ ಸ್ಥಾನ ಪಡೆದರೂ ಕೂಡ ಅಧಿಕಾರ ಸಿಗಲಿಲ್ಲ ಎನ್ನುವ ಹತಾಶೆಯಿಂದ ತಾಳ್ಮೆ ಕಳೆದುಕೊಂಡು ಬೇಕಾಬಿಟ್ಟಿ ಮಾತನಾಡುತ್ತಿದ್ದಾರೆ ಎಂದು ಹರಿಹಾಯ್ದರು.

ಬಜೆಟ್‌ನಲ್ಲಿ ರಾಜ್ಯದ 42 ಲಕ್ಷ ರೈತರ 34 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಲಾಗಿದೆ. ಇದರ ಉಪಯೋಗ ಕರಾವಳಿಯ ರೈತರಿಗೆ ಸಿಗುವುದಿಲ್ಲವೇ ? ಗರ್ಭಿಣಿಯರಿಗೆ ಮಾಸಾಶನ ನಿಗದಿ ಮಾಡಿದ್ದು, ವೃದ್ಧಾಪ್ಯ ವೇತನ ಜಾಸ್ತಿ ಮಾಡಿರುವುದು ಸಹಾಯ ಅಲ್ಲವೇ ? ಮೀನುಗಾರರಿಗೆ ಏನೂ ಕೊಡುಗೆ ನೀಡಿಲ್ಲ ಎಂದು ಬಿಜೆಪಿ ಶಾಸಕರು ಹೇಳುತ್ತಾರೆ. ಆದರೆ ಮೀನುಗಾರ ಮಹಿಳೆಯರಿಗೆ ಶೂನ್ಯ ಬಡ್ಡಿ ದರದಲ್ಲಿ 50 ಸಾವಿರ ರೂ. ಸಾಲ ಘೋಷಣೆ ಮಾಡಲಾಗಿದೆ.

ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ 2 ಸಾವಿರ ಕೋಟಿ ರೂ. ಅನುದಾನ ನೀಡಿ ಮೂಲ ಸೌಕರ್ಯಗಳ ಅಭಿವೃದ್ಧಿ ನಡೆಸಲಾಗುತ್ತಿದೆ. ಪಶ್ಚಿಮ ವಾಹಿನಿ ಯೋಜನೆಯಡಿ 200 ಕೋಟಿ ರೂ.ಗಳನ್ನು ಕಿಂಡಿ ಅಣೆಕಟ್ಟುಗಳ ನಿರ್ಮಾಣಕ್ಕೆ ಮೀಸಲಿರಿಸಲಾಗಿದೆ. ಅಲ್ಪಸಂಖ್ಯಾತರ ಅಭಿವೃದ್ಧಿಗೆ 2,750 ಕೋಟಿ ರೂ. ಅನುದಾನ ಇಡಲಾಗಿದೆ. ಇಷ್ಟೆಲ್ಲ ಇದ್ದರೂ ಏನೂ ಕೊಟ್ಟಿಲ್ಲ ಎನ್ನುವುದು ಸರಿಯಲ್ಲ. ಇಂಥ ಆರೋಪ ಮಾಡುವುದು ಬಿಟ್ಟು ಬಿಜೆಪಿ ಶಾಸಕರು ಅಭಿವೃದ್ಧಿಗೆ ಕೈಜೋಡಿಸಲಿ ಎಂದು ಐವನ್ ಡಿಸೋಜ ಸಲಹೆ ನೀಡಿದರು.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡುವಾಗ ಹಾಗೂ ವಿಶ್ವಾಸಮತ ಯಾಚನೆ ಸಂದರ್ಭ ಹಸಿರು ಶಾಲು ಹೊದ್ದು ತಾನು ರೈತ ಪರ ಎನ್ನುವುದನ್ನು ಬಿಂಬಿಸಿಕೊಂಡಿದ್ದರು. ಈಗ ಸಮ್ಮಿಶ್ರ ಸರಕಾರದ ಬಜೆಟ್‌ನಲ್ಲಿ 34 ಸಾವಿರ ಕೋಟಿ ರೂ.ಗಳಷ್ಟು ರೈತರ ಸಾಲ ಮನ್ನಾ ಮಾಡಿದ್ದರೂ ಇದು ಬಜೆಟ್ಟೇ ಅಲ್ಲ ಎಂದು ವಾದಿಸುತ್ತಿದ್ದಾರೆ. ಇದು ಯಡಿಯೂರಪ್ಪ ಅವರ ರೈತ ವಿರೋಧಿ ಧೋರಣೆಯನ್ನು ಎತ್ತಿ ತೋರಿಸುತ್ತದೆ. ‘ಇದು ರಾಮನಗರ, ಹಾಸನ, ಮಂಡ್ಯ, ಮೈಸೂರು ಜಿಲ್ಲಾ ಬಜೆಟ್’ ಎಂದೂ ಯಡಿಯೂರಪ್ಪ ಟೀಕಿಸಿದ್ದಾರೆ. ಆ ಭಾಗಕ್ಕೆ ನೀಡಿದ್ದು ಕೇವಲ ಸಾವಿರ ಕೋಟಿ ರೂ. ಮಾತ್ರ. ಉಳಿದ ಬಜೆಟ್ ಹಣವನ್ನು ರಾಜ್ಯದ ಪ್ರಗತಿಗೆ ಹಾಕಿಲ್ಲವೇ ? ಈ ಬಗ್ಗೆ ಬಿಜೆಪಿಗರು ಯಾಕೆ ಮಾತನಾಡುವುದಿಲ್ಲ ಎಂದು ಪ್ರಶ್ನಿಸಿದರು.