- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ತಮಿಳುನಾಡಿಗೆ ಅಗತ್ಯವಾದಷ್ಟು ನೀರು ಬಿಡುವಂತೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸೂಚನೆ

kumarswamy-2 [1]ಬೆಂಗಳೂರು: ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕಾವೇರಿ ನದಿ ಪಾತ್ರದ ಜಲಾಶಯಗಳು ತುಂಬಿದ್ದು, ತಮಿಳುನಾಡಿಗೆ ಅಗತ್ಯವಾದಷ್ಟು ನೀರು ಬಿಡುವಂತೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಇತ್ತೀಚೆಗೆ ನಡೆದ ಕಾವೇರಿ ನೀರು ನಿರ್ವಹಣಾ ಮಂಡಳಿ ಸಭೆಯಲ್ಲಿ ತಮಿಳುನಾಡಿಗೆ ಜುಲೈ ತಿಂಗಳಲ್ಲಿ 34 ಟಿಎಂಸಿ ನೀರು ಹರಿಸುವಂತೆ ಸೂಚಿಸಲಾಗಿದೆ. ಇನ್ನು 50 ಟಿಎಂಸಿ ನೀರಿಗೆ ತಮಿಳುನಾಡಿನಿಂದ ಬೇಡಿಕೆ ಬರುವ ಸಾಧ್ಯತೆ ಇದ್ದು, ಒಟ್ಟು ಜುಲೈ ಮತ್ತು ಆಗಸ್ಟ್ತಿಂಗಳಲ್ಲಿ 84 ಟಿಎಂಸಿ ನೀರು ಪಡೆದುಕೊಳ್ಳಲು ತಮಿಳುನಾಡು ಸರ್ಕಾರ ಒತ್ತಡ ಹೇರುತ್ತಿದೆ.

ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಜುಲೈ ತಿಂಗಳಲ್ಲಿನ 31. 24 ಟಿಎಂಸಿ ನೀರು ಕೇಳಬೇಕಾದ ತಮಿಳುನಾಡು ಸರ್ಕಾರ ಎರಡೂವರೆ ಟಿಎಂಸಿ ಹೆಚ್ಚುವರಿ ನೀರು ಕೇಳಿದೆ. ಇದಕ್ಕೆ ಸಭೆಯಲ್ಲಿ ಕರ್ನಾಟಕದ ಪ್ರತಿನಿಧಿ ರಾಕೇಶ್‍ಸಿಂಗ್ ಅವರು ಪ್ರತಿರೋಧ ವ್ಯಕ್ತಪಡಿಸಿದ್ದಾರೆ.

ಆದಾಗ್ಯೂ ಪ್ರಾಧಿಕಾರದ ಅಧ್ಯಕ್ಷ ಮಸೂದ್ ಹುಸೇನ್ 34 ಟಿಎಂಸಿ ನೀರು ಬಿಡುವಂತೆ ಸೂಚಿಸಿರುವುದು ಕರ್ನಾಟಕದ ಪಾಲಿಗೆ ನುಂಗಲಾರದ ತುತ್ತಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಸಮೃದ್ಧ ಮಳೆಯಾಗಿ ಜಲಾಶಯಗಳು ತುಂಬಿ ಹರಿಯುತ್ತಿರುವುದರಿಂದ ಜುಲೈ ತಿಂಗಳ ಪಾಲಿನ ನೀರು ಬಿಡಲು ಯಾವುದೇ ಸಮಸ್ಯೆ ಇಲ್ಲ.

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನೀರು ಹರಿಸಲು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಅದರಂತೆ ಈಗಾಗಲೇ ತಮಿಳುನಾಡಿಗೆ ನೀರು ಹರಿದು ಹೋಗುತ್ತಿದೆ. ಆದರೆ, ಮಳೆಗಾಲ ಮುಗಿದ ನಂತರ ಸೆಪ್ಟೆಂಬರ್, ಅಕ್ಟೋಬರ್ ತಿಂಗಳಿನಲ್ಲಿ ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಡಿಮೆ ಇರಲಿದೆ. ಆ ಸಂದರ್ಭದಲ್ಲಿ ತಮಿಳುನಾಡಿನಿಂದ ಇದೇ ರೀತಿಯ ಬೇಡಿಕೆಗಳು ಬಂದರೆ ಪರಿಸ್ಥಿತಿ ನಿಭಾಯಿಸುವುದು ಹೇಗೆ ಎಂಬ ಚಿಂತೆ ಕಾಡಲಾರಂಭಿಸಿದೆ.

ಸದ್ಯಕ್ಕೆ ನೀರು ಬಿಡುವ ಮೂಲಕ ಪ್ರಾಧಿಕಾರದ ಆದೇಶ ಪಾಲನೆ ಮಾಡಿ ಸುಪ್ರೀಂ ಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಹೀಗಾಗಿ ಎಚ್ಚರಿಕೆ ಹೆಜ್ಜೆ ಇಡಲು ಕುಮಾರಸ್ವಾಮಿ ಅವರು ನಿರ್ಧರಿಸಿದ್ದು, ಈಗ ತಮಿಳುನಾಡಿಗೆ ನೀರು ಹರಿಸಲು ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.