- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕಳೆದ ಮೂರು ದಿನಗಳಿಂದ ಭಾರಿ ಮಳೆ..ಶಾಲೆಗಳಿಗೆ ರಜೆ ಘೋಷಣೆ!

heavy-rain [1]ಚಿಕ್ಕಮಗಳೂರು: ಕಳೆದ ಮೂರು ದಿನಗಳಿಂದ ಮಲೆನಾಡು ಭಾಗದಲ್ಲಿ ಸುರಿಯುತ್ತಿದ್ದ ಧಾರಾಕಾರ ಮಳೆ ಕಳೆದ ರಾತ್ರಿಯಿಂದ ಮತ್ತೆ ಮುಂದುವರೆದಿದೆ.

ಚಿಕ್ಕಮಗಳೂರಿನ ಮೂಡಿಗೆರೆ, ಶೃಂಗೇರಿ, ಕಳಸ, ಬಾಳೆಹೊನ್ನೂರಿನಲ್ಲಿ ಇಡೀ ರಾತ್ರಿ ಮಳೆಯಾಗಿದೆ. ಶೃಂಗೇರಿಯಲ್ಲಿ ಕಳೆದ ಮೂರು ದಿನಗಳಿಂದಲೂ ಅಧಿಕವಾಗಿ ಮಳೆಯಾಗುತ್ತಿರುವ ಹಿನ್ನೆಲೆ ಮಕ್ಕಳ ಸುರಕ್ಷತೆಯ ದೃಷ್ಠಿಯಿಂದ ಶೃಂಗೇರಿ ತಾಲೂಕಿನ ನದಿಪಾತ್ರ, ತಗ್ಗುಪ್ರದೇಶ ಹಾಗೂ ಪ್ರವಾಹ ಪೀಡಿತ ಪ್ರದೇಶದ ಶಾಲೆಗಳಿಗೆ ರಜೆ ನೀಡುವ ಅಧಿಕಾರವನ್ನ ಬಿಇಒ ಉಮೇಶ್ ಶಾಲೆಯ ಆಡಳಿತ ಮಂಡಳಿಗೆ ವಹಿಸಿದ್ದಾರೆ.

ಉಳಿದಂತೆ ಕೊಪ್ಪ, ಎನ್.ಆರ್.ಪುರದಲ್ಲೂ ಮಳೆಯಾಗುತ್ತಿದ್ದು, ಬಿಟ್ಟು-ಬಿಟ್ಟು ಸುರಿಯುತ್ತಿರುವ ವರುಣನ ಅಬ್ಬರಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಮೂಡಿಗೆರೆ, ಕಳಸ ಭಾಗದಲ್ಲೂ ಕಳೆದ ರಾತ್ರಿ ಧಾರಾಕಾರ ಮಳೆಯಾಗಿದೆ. ಕಳಸ, ಶೃಂಗೇರಿ, ಬಾಳೆಹೊನ್ನೂರು ಭಾಗ ಪುನರ್ವಸು ಹಾಗೂ ಕುಂಭದ್ರೋಣ ಮಳೆಯಿಂದ ಕಂಗಾಲಾಗಿದೆ.

ಮಲೆನಾಡಲ್ಲಿ ರಾತ್ರಿ ವೇಳೆಯಲ್ಲೇ ಹೆಚ್ಚು ಮಳೆಯಾಗುತ್ತಿದ್ದು, ಹಗಲಲ್ಲಿ ಕೊಂಚ ಮಳೆ ಸುರಿಯುತ್ತಿದೆ. ತುಂಗಾ-ಭದ್ರಾ-ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿವೆ. ಮಲೆನಾಡಿನಾದ್ಯಂತ ಅಲ್ಲಲ್ಲೇ ರಸ್ತೆ, ಸೇತುವೆ, ಹಳ್ಳ-ಕೊಳ್ಳ-ಹೊಲಗದ್ದೆಗಳು ಜಲಾವೃತಗೊಂಡಿವೆ. ಕಳಸಾದಿಂದ ಹೊರನಾಡಿಗೆ ಸಂಪರ್ಕ ಕಲ್ಪಿಸೋ ಹೆಬ್ಬಾಳೆ ಸೇತುವೆ ಮತ್ತೊಮ್ಮೆ ಮುಳುಗಡೆಯಾಗುವ ಭೀತಿ ಎದುರಾಗಿದೆ. ಮತ್ತೆ ಸೇತುವೆ ಮುಳುಗಿದರೆ, ಈ ವರ್ಷದಲ್ಲಿ ನಾಲ್ಕನೇ ಬಾರಿ ಮುಳುಗಿದಂತಾಗಲಿದೆ.