- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ನಾಳೆ ಫಿಫಾ ವಿಶ್ವಕಪ್ ಫೈನಲ್..ಫ್ರಾನ್ಸ್-ಕ್ರೋವೇಷಿಯಾ ಮುಖಾಮುಖಿ!

football-cup [1]ಮಾಸ್ಕೋ: ರಷ್ಯಾದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ 21ನೇ ಫಿಫಾ ವಿಶ್ವಕಪ್ 2018 ಅಂತಿಮ ಹಂತಕ್ಕೆ ಬಂದು ನಿಂತಿದ್ದು, ಭಾನುವಾರ ಕಾಲ್ಚೆಂಡಿನ ಬಿಗ್ ಫೈನಲ್ ಪಂದ್ಯದಲ್ಲಿ ಫ್ರಾನ್ಸ್-ಕ್ರೋವೇಷಿಯಾ ತಂಡಗಳು ಮುಖಾಮುಖಿಯಾಗಲಿವೆ.

ಸೆಮಿಫೈನಲ್‌ನಲ್ಲಿ ಬೆಲ್ಜಿಯಂ ತಂಡವನ್ನು 1-0 ಗೋಲುಗಳ ಅಂತರದಲ್ಲಿ ಬಗ್ಗುಬಡಿದು ಫ್ರಾನ್ಸ್ ಉಪಾಂತ್ಯಕ್ಕೆ ತಲುಪಿದೆ. ಇತ್ತ ಮಗದೊಂದು ಜಿದ್ದಾಜಿದ್ದಿನ ಸೆಮೀಸ್ ಮುಖಾಮುಖಿಯಲ್ಲಿ ಇಂಗ್ಲೆಂಡ್ ವಿರುದ್ದ ಕ್ರೊಯೇಷ್ಯಾ 2-1ರ ಗೋಲುಗಳ ಅಂತರದ ಗೆಲುವು ದಾಖಲಿಸಿತ್ತು.

ಫ್ರಾನ್ಸ್ ಎರಡನೇ ಬಾರಿಗೆ ಕಿರೀಟ ಎದುರು ನೋಡುತ್ತಿದ್ದರೆ ಕ್ರೊಯೇಷ್ಯಾ ಇತಿಹಾಸ ರಚಿಸುವ ತವಕದಲ್ಲಿದೆ. ‘ಸಿ’ ಗುಂಪಿನಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿ ಎರಡು ಗೆಲುವು ಹಾಗೂ ಡ್ರಾ ಸೇರಿದಂತೆ ಒಟ್ಟು ಆರು ಅಂಕಗಳನ್ನು ಸಂಪಾದಿಸಿರುವ ಫ್ರಾನ್ಸ್ ಅಗ್ರಸ್ಥಾನದೊಂದಿಗೆ ಪ್ರಿ-ಕ್ವಾರ್ಟರ್ ಫೈನಲ್ ಹಂತವನ್ನು ತಲುಪಿತ್ತು.

ಅತ್ತ ಕ್ರೊಯೇಷ್ಯಾ ಬಲಿಷ್ಠ ಅರ್ಜೆಂಟೀನಾ, ನೈಜಿರಿಯಾಗಳಂತಹ ತಂಡಗಳನ್ನು ಮಣಿಸಿ ‘ಡಿ’ ಗುಂಪಿನಲ್ಲಿ ಎಲ್ಲ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಒಟ್ಟು ಒಂಬತ್ತು ಅಂಕಗಳನ್ನು ಸಂಪಾದಿಸಿ ಅಗ್ರಸ್ಥಾನದೊಂದಿಗೆ ಅಂತಿಮ 16ರ ಘಟ್ಟಕ್ಕೆ ತಲುಪಿತ್ತು.

ಇನ್ನು ಪ್ರಿ ಕ್ವಾರ್ಟರ್ ಹಾಗೂ ಕ್ವಾರ್ಟರ್ ಮುಖಾಮುಖಿಯಲ್ಲಿ ಅನುಕ್ರಮವಾಗಿ ಪ್ರಬಲ ಅರ್ಜೆಂಟೀನಾ ಹಾಗೂ ಉರುಗ್ವೆ ತಂಡಗಳನ್ನು ಮಣಿಸಿ ಫ್ರಾನ್ಸ್ ಅಂತಿಮ ನಾಲ್ಕರ ಘಟ್ಟಕ್ಕೆ ಪ್ರವೇಶಿಸಿತ್ತು. ಅತ್ತ ಕ್ರೊಯೇಷ್ಯಾ ಪ್ರಿ-ಕ್ವಾರ್ಟರ್‌ನಲ್ಲಿ ಡೆನ್ಮಾರ್ಕ್ ಹಾಗೂ ಕ್ವಾರ್ಟರ್‌ನಲ್ಲಿ ರಷ್ಯಾ ವಿರುದ್ದ ಗೆಲುವು ದಾಖಲಿಸಿತ್ತು. ಈ ಎರಡು ಪಂದ್ಯಗಳನ್ನು ಪೆನಾಲ್ಟಿ ಶೂಟೌಟ್ ಮೂಲಕ ಕ್ರೊಯೇಷ್ಯಾ ತನ್ನದಾಗಿಸಿಕೊಂಡಿತ್ತು ಎಂಬುದು ಗಮನಾರ್ಹವೆನಿಸುತ್ತದೆ.