- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ವಿಶ್ವ ಜೂನಿಯರ್​ ಅಥ್ಲೆಟಿಕ್ಸ್..ಚಿನ್ನದ ಪದಕ ಗೆದ್ದ ಹಿಮಾದಾಸ್!

hima-das [1]ಹೈದರಾಬಾದ್: 18 ವರ್ಷದ ತರುಣಿ ಹಿಮಾದಾಸ್ ಫಿನ್ಲ್ಯಾಂಡ್ನಲ್ಲಿ ನಡೆದ 20ರ ವಯೋಮಿತಿ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದು ನೂತನ ಇತಿಹಾಸ ರಚನೆ ಮಾಡಿರುವ ಜತೆಗೆ ಕೋಟಿ ಕೋಟಿ ಭಾರತೀಯರ ಹೃದಯ ಗೆದ್ದಿದ್ದಾಳೆ.

400 ಮೀ. ಓಟವನ್ನ 18ರ ಹರೆಯದ ಹಿಮಾ ಕೇವಲ 51.46 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಇನ್ನು ಇದೇ ವಿಭಾಗದಲ್ಲಿ ಸ್ಪರ್ಧಿಸಿದ ರೊಮನಿಯಾದ ಆಂಡ್ರಿಯಾ ಮಿಕ್ಲೋಸ್ (52.07 ಸೆಕೆಂಡು) ಬೆಳ್ಳಿ ಹಾಗೂ ಅಮೆರಿಕದ ಟೇಲರ್ ಮ್ಯಾನ್ಸನ್ (52.28 ಸೆಕೆಂಡು) ಕಂಚಿನ ಪದಕಕ್ಕೆ ಅರ್ಹವಾದರು.

ಹಿಮಾದಾಸ್ ಓರ್ವ ರೈತನ ಮಗಳು. ಅಸ್ಸೋಂ ರಾಜ್ಯದ ನಾಗೋನ್ ಜಿಲ್ಲೆಯ ಧಿಂಗ್ ಗ್ರಾಮದಲ್ಲಿ ಹುಟ್ಟಿರುವ ಈಕೆ ಅಪ್ಪಟ ರೈತ ಕುಟುಂಬದಿಂದ ಬಂದವಳು. ತಂದೆಗೆ ಇರುವುದು ಕೇವಲ 40 ಸೆಂಟ್ಸ್ ಭೂಮಿ, ಭತ್ತದ ಗದ್ದೆಯಲ್ಲಿ ಅಪ್ಪನ ಜೊತೆ ಕೆಲಸ ಮಾಡಿಕೊಂಡು ಪ್ರತಿದಿನ ಐದು ಕಿಲೋ ಮೀಟರ್ ದೂರದ ಶಾಲೆಗೆ ಹೋಗುತ್ತಿದ್ದಳು ಈ ದಾಸ್.

ಶಾಲಾ ದಿನಗಳಲ್ಲಿ ಫುಟ್ಬಾಲ್ ಆಟ ಆಡುತ್ತಿದ್ದ ಹಿಮಾ ದಾಸ್ಗೆ ಓಟದ ಬಗ್ಗೆ ಅಷ್ಟೊಂದು ಕ್ರೇಜ್ ಇರಲಿಲ್ಲ. ಗ್ರಾಮೀಣ ಮಟ್ಟದಲ್ಲಿ ನಡೆಯುತ್ತಿದ್ದ ಫುಟ್ಬಾಲ್ ಟೂರ್ನಿಯಲ್ಲಿ ಹಿಮಾ ಭಾಗಿಯಾಗುತ್ತಿದ್ದಳು.

ಆದರೆ, 2016ರಲ್ಲಿ ಶಾಲಾ ಮಟ್ಟದಲ್ಲಿ ನಡೆದಿದ್ದ 100 ಮತ್ತು 200 ಮೀಟರ್ ಓಟದಲ್ಲಿ ಭಾಗಿಯಾಗಿದ್ದ ಹಿಮಾ ಪ್ರಥಮ ಸ್ಥಾನ ಪಡೆದುಕೊಂಡಿದ್ದಳು. ಆ ವೇಳೆ ಆಕೆಯ ದೈಹಿಕ ಶಿಕ್ಷಕರು ಅಥ್ಲೆಟಿಕ್ಸ್ನತ್ತ ಹೆಚ್ಚು ಗಮನ ಹರಿಸುವಂತೆ ಹೇಳಿದರು. ಆದರೆ ತರಬೇತಿ ಪಡೆದುಕೊಳ್ಳಲು ಆಕೆಯ ಬಳಿ ಹಣ ಇರಲಿಲ್ಲ. ಕಾರಣ ಮನೆಯಲ್ಲಿ ಕಿತ್ತು ತಿನ್ನುವ ಬಡತನ.

2017ರಲ್ಲಿ ನಡೆದ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ನಲ್ಲಿ ಭಾಗಿಯಾಗಿದ್ದ ಹಿಮಾ ಓಟವನ್ನ ಗಮನಿಸಿದ್ದ ನಾಗೋನ್ ಜಿಲ್ಲಾ ಅಥ್ಲೆಟಿಕ್ಸ್ ಕೋಚ್ ನಿಪೋನ್ ದಾಸ್ ಆಶ್ಚರ್ಯಕ್ಕೊಳಗಾಗಿದ್ದರು. ಯಾವುದೇ ರೀತಿಯ ತರಬೇತಿ ಇಲ್ಲದೇ ಈಕೆಯ ಓಟ ನಿಜಕ್ಕೂ ಮೆಚ್ಚುವಂತಿತ್ತು.

ತದನಂತರ ಆಕೆಯ ತಂದೆಯೊಂದಿಗೆ ಮಾತನಾಡಿದ ಕೋಚ್ ನಿಪೋನ್ ತರಬೇತಿ ನೀಡುವಂತೆ ಒಪ್ಪಿಸಿದ್ದರು. ತದನಂತರ ಹಿಮಾ, ರಾಜ್ಯ, ರಾಷ್ಟ್ರೀಯ, ಏಷ್ಯನ್ ಗೇಮ್ಸ್ನಲ್ಲಿ ಮಿಂಚಿನ ಓಟ ಪ್ರದರ್ಶಿಸಿದ್ದಳು.

ಇನ್ನು 400 ಮೀಟರ್ ಓಟವನ್ನ ಸೆಮಿಫೈನಲ್ನಲ್ಲಿ 52.25 ಸೆಕೆಂಡ್ಗಳಲ್ಲಿ ಓಡಿದ್ದ ಹಿಮಾದಾಸ್ ಫೈನಲ್ಗೆ ಪ್ರವೇಶ ಪಡೆದುಕೊಂಡಿದ್ದರು. ಫೈನಲ್ನಲ್ಲಿ ಕೇವಲ 51.46ನಿಮಿಷಗಳಲ್ಲಿ ಗುರಿ ಮುಟ್ಟಿ ವಿಶ್ವವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ.

ಈ ಹಿಂದೆ ಕಳೆದ ಎಪ್ರಿಲ್ ತಿಂಗಳಿನಲ್ಲಷ್ಟೇ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್ 400 ಮೀಟರ್ ಫೈನಲ್‌ನಲ್ಲಿ 51.32 ಸೆಕೆಂಡುಗಳಲ್ಲಿ ಗುರಿ ತಲುಪಿದ ಈ ಆಸ್ಸೋಂ ಸ್ಪ್ರಿಂಟರ್ ಆರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು.

ಇನ್ನು ಗುವಾಹಟಿಯಲ್ಲಿ ನಡೆದ ರಾಷ್ಟ್ರೀಯ ಅಂತರ್ ರಾಜ್ಯ ಚಾಂಪಿಯನ್‌ಶಿಪ್‌ನಲ್ಲಿ 51.13 ಸೆಕೆಂಡುಗಳಲ್ಲಿ 400 ಮೀಟರ್ ಗುರಿ ಕ್ರಮಿಸಿದ್ದರು.

ಮುಂದಿನ ತಿಂಗಳು ನಡೆಯುವ ಏಷ್ಯನ್ ಗೇಮ್ಸ್ಗೆ ತಾವೂ ತಯಾರಿ ನಡೆಸಿರುವುದಾಗಿ ತಿಳಿಸಿರುವ ಅವರು, ಉತ್ತಮ ಪ್ರದರ್ಶನ ನೀಡುವ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.