ಎಎಂಆರ್ ಜಲ ವಿದ್ಯುತ್‌ ಕಂಪೆನಿಯ ವಿರುದ್ದ ಸೂಕ್ತ ಪರಿಹಾರಕ್ಕಾಗಿ ಪ್ರತಿಭಟನೆ

4:37 PM, Thursday, December 8th, 2011
Share
1 Star2 Stars3 Stars4 Stars5 Stars
(9 rating, 6 votes)
Loading...

AMR Project protest

ಬಂಟ್ವಾಳ : ಶಂಭೂರು ಜಲ ವಿದ್ಯುತ್‌ ಯೋಜನೆಯಿಂದ ಒಮ್ಮೆಲೆ ಹರಿದು ಬಿಡುವ ನೀರಿನಿಂದ ಹಲವು ಜೀವಗಳು ಬಲಿಯಾಗುತ್ತಿವೆ. ಮಂಗಳವಾರ ನೇತ್ರಾವತಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಮೂವರು ವಿದ್ಯಾರ್ಥಿಗಳ ಸಾವಿಗೆ ಎಎಂಆರ್ ಜಲ ವಿದ್ಯುತ್‌ ಕಂಪೆನಿಯೇ ಕಾರಣ ಎಂದು ಸಾರ್ವಜನಿಕರು, ಕಾಲೇಜು ವಿದ್ಯಾರ್ಥಿಗಳು, ಊರಿನ ಜನರು ಬಂಟ್ವಾಳ ತಹಶೀಲ್ದಾರ್‌ ಕಚೇರಿಯಲ್ಲಿ ಡಿ. 7ಬುಧವಾರದಂದು ಪ್ರತಿಭಟನೆ ನಡೆಸಿ ಸೂಕ್ತ ಪರಿಹಾರಕ್ಕೆ ಆಗ್ರಹಿಸಿದರು.

ಮಾಜಿ ಜಿ.ಪಂ. ಉಪಾಧ್ಯಕ್ಷ ಎಂ. ತುಂಗಪ್ಪ ಬಂಗೇರ ನೇತೃತ್ವದಲ್ಲಿ ತಹಶೀಲ್ದಾರ್‌ ಕಚೇರಿಗೆ ಮುತ್ತಿಗೆ ಹಾಕಲಾಯಿತು. ಜಲ ವಿದ್ಯುತ್‌ ಘಟಕದಿಂದ ಅನಿರೀಕ್ಷಿತ ನೀರು ಹರಿದು ಕಳೆದ ಮೂರು ವರ್ಷಗಳಲ್ಲಿ 11 ಜೀವಗಳು ಬಲಿಯಾಗಿದೆ, ಕಂಪೆನಿಯ ಅಧಿಕಾರಿಗಳಿಗೆ ಸಾರ್ವಜನಿಕ ಜೀವದ ಬಗ್ಗೆ ಯಾವುದೇ ಕಾಳಜಿ ಇಲ್ಲವಾಗಿದೆ. ನೀರು ಹೊರಗೆ ಬಿಡುವಾಗ ಸೈರನ್‌ ಮೊಳಗಿಸಬೇಕಾದ ಸೈರನ್‌ ಕೆಲಸ ಮಾಡುತ್ತಿಲ್ಲ ಎಂದು ಪ್ರತಿಭಟನಕಾರರು ದೂರಿದರು.

ಯಾವುದೇ ಸೂಚನೆಯಿಲ್ಲದೆ ಜಲ ವಿದ್ಯುತ್‌ ಘತಕದಿಂದ ತನಗೆ ಇಷ್ಟ ಬಂದ ಸಂದರ್ಭದಲ್ಲಿ ನೀರು ಬಿಡುತ್ತಾರೆ. ಶಂಭೂರಿನಿಂದ ತುಂಬೆಗೆ ನೀರು ಬರಲು 24 ತಾಸು ಬೇಕಾಗಿದ್ದು, ನದಿ ಕೆಳ ಪ್ರದೇಶದ ಜನರಿಗೆ ಮಾಹಿತಿ ಇರುವುದಿಲ್ಲ ಎಂದು ಆರೋಪಿಸಿದರು.

ಆಪಾಯ ಪ್ರದೇಶದಲ್ಲಿ ಮುನ್ನೆಚ್ಚರಿಕೆ ಫಲಕ, ಸೈರನ್‌ ಧ್ವನಿ ಪ್ರತಿಧ್ವನಿಸುವಷ್ಟು ದೂರಕ್ಕೆ ಶಂಭೂರಿನಿಂದ ತುಂಬೆವರೆಗೆ ಅಲ್ಲಲ್ಲಿ ಸೈರನ್‌ ಕೇಂದ್ರ, ನೀರು ಬಿಡುವ ಮೊದಲು ಸೈರನ್‌ ಮೊಳಗಿಸುವ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಲಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ಜಲ ವಿದ್ಯುತ್‌ ಯೋಜನೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರವೀಣ್‌, ಸೈಟ್‌ ಎಂಜಿನಿಯರ್‌ ಪ್ರೇಮನಾಥ್‌, ಎಚ್‌ಆರ್‌ಡಿ ರವೀಶ್‌, ಡೆಪ್ಯುಟಿ ಪ್ಲಾಂಟ್‌ ಮೆನೇಜರ್‌ ಗುರುದಾಸ್‌, ಪ್ರಸಾದ್‌ ಅವರು ತಹಶೀಲ್ದಾರ್‌ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕಂಪೆನಿ ಪರವಾಗಿ ಪಾಲ್ಗೊಂಡು ಮಾತುಕತೆ ನಡೆಸಿದರು.

ಪ್ರತಿಭಟನೆ ನಡೆಸಿ ಜಲ ವಿದ್ಯುತ್‌ ಘಟಕ ಅಧಿಕಾರಿಗಳನ್ನು ಕಚೇರಿಗೆ ಆಹ್ವಾನಿಸಿದ ತಹಶೀಲ್ದಾರ್‌ ನಾರಾಯಣ ರಾವ್‌ ಪ್ರತಿಭಟನಾಕಾರರ ಜೊತೆ ನೇರ ಮಾತುಕತೆ ನಡೆಸಿದರು. ಮಾತುಕತೆ ಬಳಿಕ ಕಂಪೆನಿಗೆ ಲಿಖತ ಆದೇಶ ನೀಡುವಂತೆ ಕೋರಿದರು. ಪರಿಹಾರ ಕ್ರಮಗಳ ಬಗ್ಗೆ ಕಂಪೆನಿ ಆಡಳಿತದ ಜೊತೆಗೆ ಚರ್ಚಿಸುವುದಾಗಿ ಹೇಳಿದರು.

ಪ್ರತಿಭಟನಕಾರರ ಆಗ್ರಹಕ್ಕೆ ಮಣಿದ ತಹಶೀಲ್ದಾರ್‌ ಮುಂದಿನ 24 ತಾಸು ಕಂಪೆನಿ ಉತ್ಪಾದನೆ ನಿಲುಗಡೆ ಮಾಡುವಂತೆ ಸೂಚಿಸಿದರು. ಡಿ. 8ರಂದು ಸೂಕ್ತ ಪರಿಹಾರ ಕ್ರಮದ ಕುರಿತು ಉತ್ತರಿಸುವಂತೆ ಸೂಚಿಸಿದರು.

ಮುಂದಿನ ಇಪ್ಪತ್ನಾಲ್ಕು ತಾಸುಗಳಲ್ಲಿ ಸಮರ್ಪಕ ಉತ್ತರ ನೀಡದಿದ್ದರೆ ಜಲ ವಿದ್ಯುತ್‌ ಘಟಕ ಪ್ರದೇಶದಲ್ಲಿ ಪ್ರತಿಭಟನೆ ನಡೆಸಿ ಕೆಲಸಕ್ಕೆ ತಡೆ ಉಂಟು ಮಾಡಲಾಗುವುದು ಎಂದು ಪ್ರತಿಭಟನಕಾರರು ಎಚ್ಚರಿಸಿದರು. ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಪುರುಷರು ಸಾರ್ವಜನಿಕರು ಭಾಗವಹಿಸಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English