- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ರಾಜ್ಯದಲ್ಲಿ ಬಿಜೆಪಿಯ ಅಧ್ಯಕ್ಷರಾದಿಯಾಗಿ ಎಲ್ಲರೂ ಬೇಲ್ ಗಾಡಿಗಳೇ: ಬಿ. ರಮಾನಾಥ ರೈ

ramanath-rai [1]ಮಂಗಳೂರು: ಕಾಂಗ್ರೆಸ್ ನ ಅನೇಕ ನಾಯಕರು ಬೇಲ್ ಗಾಡಿಗಳು ಎಂಬುದಾಗಿ ಜನರಾಡಿಕೊಳ್ಳುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ಬಿಜೆಪಿಯ ಅಧ್ಯಕ್ಷರಾದಿಯಾಗಿ ಎಲ್ಲರೂ ಬೇಲ್ ಗಾಡಿಗಳೇ. ಅವರನ್ನು ಪ್ರಧಾನಿ ಏನು ಮಾಡುತ್ತಾರೆ ಎಂಬುದನ್ನು ಹೇಳಲಿ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಸವಾಲೆಸೆದಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸರಕಾರದ ಆಡಳಿತ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಕೇಂದ್ರ ಸರಕಾರ ಚುನಾವಣೆ ಹತ್ತಿರ ಬರುತ್ತಿರುವಂತೆಯೇ ಗಿಮಿಕ್ ಮಾಡುತ್ತಿರುವುದೇ ಹೊರತು ಆಡಳಿತದಲ್ಲಿ ಸಂಪೂರ್ಣವಾಗಿ ಸೋತಿದೆ ಎಂದರು.

ಜನಧನ್ ಹೆಸರಿನಲ್ಲಿ ಜನರ ಬ್ಯಾಂಕ್ ಖಾತೆ ತೆರೆದು ಬ್ಯಾಂಕ್‌ಗೆ ದುಡ್ಡು ಜಮಾ ಆಗಿದೆಯೇ ಹೊರತು ಜನರಿಗೆ ಯಾವುದೇ ಸಹಾಯವಾಗಿಲ್ಲ. ಪೆಟ್ರೋಲ್, ಡೀಸೆಲ್ ಬೆಲೆ ಪ್ರತಿನಿತ್ಯದಂತೆ ಏರಿಕೆಯಾಗುತ್ತಿದೆ. ಇದರಿಂದ ಮುಚ್ಚಿದ್ದ ರಿಲಾಯನ್ಸ್ ಕಂಪನಿ ಮತ್ತೆ ತೆರೆಯುವಂತಾಗಿದೆ. ಅಡುಗೆ ಅನಿಲ ಯುಪಿಎ ಸರಕಾರದಲ್ಲಿ 400 ರೂ.ಗಳಿದ್ದು, ಎನ್‌ಡಿಎ ಸರಕಾರದಲ್ಲಿ 800 ರೂ.ಗಳಿಗೆ ಏರಿಕೆಯಾಗಿದೆ. ಕಪ್ಪು ಹಣ ನಿಗ್ರಹಕ್ಕಾಗಿ ನೋಟು ಅಮಾನ್ಯೀಕರಣಗೊಳಿಸಿದರು. ವಿದೇಶದಲ್ಲಿ ಕಪ್ಪು ಹಣ ಇದೆ ಅದನ್ನು ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ.ಗಳನ್ನು ಜಮಾ ಮಾಡುವುದಾಗಿ ಹೇಳಿದ್ದರು. ಯುಪಿಎ ಅವಧಿಯಲ್ಲಿ ಶೇ. 44ರಷ್ಟಿದ್ದ ಕಪ್ಪು ಹಣದ ಪ್ರಮಾಣ ಇದೀಗ ಶೇ. 88ಕ್ಕೇರಿದೆ. ಇದೀಗ ಎಲ್ಲರ ಖಾತೆಗೆ 30 ಲಕ್ಷ ರೂ. ಜಮಾ ಆಗಲಿದೆ ಎಂದು ಮಾಜಿ ಸಚಿವ ರೈ ವ್ಯಂಗ್ಯವಾಡಿದರು.

ಯುಪಿಎ ಸರಕಾರ ಒಂದು ಅವಧಿಯಲ್ಲಿ ರಾಷ್ಟ್ರದ ರೈತರ ಸಾಲ ಮನ್ನಾ ಮಾಡುವ ದಿಟ್ಟ ಹೆಜ್ಜೆ ಇರಿಸಿತ್ತು. ಆದರೆ ಪ್ರಸಕ್ತ ಎನ್‌ಡಿಎ ಸರಕಾರ ರೈತರ ಸಾಲ ಮನ್ನಾದ ಬಗ್ಗೆ ಮೌನ ವಹಿಸಿದೆ. ಆದರೆ ಉದ್ದಿಮೆದಾರರ ಎರಡೂವರೆ ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದೆ. ಒಟ್ಟಿನಲ್ಲಿ ಭಾರತೀಯ ಜನತಾ ಪಾರ್ಟಿ ಎಂಬುದು ಭಾರತೀಯ ಜೂಟ್ ಪಾರ್ಟಿ ಎಂದು ಅವರು ಟೀಕಿಸಿದರು.

ನಿರ್ಭಯಾ ಹತ್ಯೆ ಸಂದರ್ಭ ಅದನ್ನು ಕಾಂಗ್ರೆಸ್ಸಿನವರೇ ಮಾಡಿದರೆಂಬ ರೀತಿಯಲ್ಲಿ ಗುಲ್ಲೆಬ್ಬಿಸಲಾಯಿತು. ಆದರೆ ಇದೀಗ ಉತ್ತರ ಪ್ರದೇಶವೊಂದರಲ್ಲೇ ಒಂದರ ಮೇಲೊಂದರಂತೆ ಪ್ರಕರಣಗಳು ನಡೆಯುತ್ತಿವೆ. ಹಿಂದೆ ಗಡಿ ರಕ್ಷಣೆ ಬಗ್ಗೆ ಮಾತನಾಡಿದ್ದ ಪ್ರಧಾನಿ ಮೋದಿ, ಅಧಿಕಾರ ವಹಿಸಿಕೊಂಡ ಬಳಿಕ ಪಾಕ್ ಪ್ರಧಾನಿಯನ್ನು ಭೇಟಿ ಮಾಡಿ ಬಂದರು. ಕೇಂದ್ರ ಸರಕಾರ ಪ್ರಚಾರದಲ್ಲಿರುವ ಸರಕಾರವೇ ಹೊರತು ಜನಸಾಮಾನ್ಯರಿಗೆ ಯಾವುದೇ ಪ್ರಯೋಜನ ಆಗಿಲ್ಲ ಎಂದು ಮಾಜಿ ಸಚಿವ ರೈ ಹೇಳಿದರು.

ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸುತ್ತಾ, ಕಾಂಗ್ರೆಸ್ ಯಾವತ್ತೂ ಹಿಂದೂಗಳ ಮತವಾಗಲಿ, ಮುಸ್ಲಿಮರ ಮತವಾಗಲಿ ಬೇಡ ಎಂಬ ಮಾತನ್ನು ಹೇಳಿಲ್ಲ. ಅದೊಂದು ಅಪಪ್ರಚಾರದ ಭಾಗ ಎಂದರು.

ಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಾಗೂ ವಿಧಾನ ಪರಿಷತ್‌ನ ಸದಸ್ಯ ಹರೀಶ್ ಕುಮಾರ್, ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕ ಜೆ.ಆರ್. ಲೋಬೋ, ಮುಖಂಡರಾದ ಇಬ್ರಾಹೀಂ ಕೋಡಿಜಾಲ್, ಮುಹಮ್ಮದ್ ಹನೀಫ್ ಹಾಗೂ ಇತರರು ಉಪಸ್ಥಿತರಿದ್ದರು.