- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮೀನುಗಾರಿಕೆ ಡೀಸೆಲ್ ಸಬ್ಸಿಡಿ ವಾರದೊಳಗೆ ಖಾತೆಗೆ ಜಮಾ ಮಾಡಲಾಗುವುದು: ವೆಂಕಟರಾವ್ ನಾಡಗೌಡ

venkat-rao [1]ಮಂಗಳೂರು: ಮೀನುಗಾರಿಕಾ ಬೋಟುಗಳಿಗೆ ನೀಡಬೇಕಾದ ಬಾಕಿ ಡೀಸೆಲ್ ಸಬ್ಸಿಡಿಯನ್ನು ಮುಂದಿನ ಒಂದು ವಾರದೊಳಗೆ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು ಎಂದು ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ತಿಳಿಸಿದ್ದಾರೆ.

ಇಂದು ನಗರದ ಧಕ್ಕೆ ಮೀನುಗಾರಿಕಾ ಬಂದರಿಗೆ ಭೇಟಿ ನೀಡಿ, ಮೀನುಗಾರ ಮುಖಂಡರ ಅಹವಾಲುಗಳನ್ನು ಆಲಿಸಿ ಮಾತನಾಡಿದರು. ಬಾಕಿ ಡೀಸೆಲ್ ಸಬ್ಸಿಡಿ ಕುರಿತು ಬೆಂಗಳೂರಿಗೆ ತೆರಳಿ ಅಧಿಕಾರಿಗಳೊಂದಿಗೆ ಚರ್ಚಿಸಿ ಕೂಡಲೇ ಹಣ ಬಿಡುಗಡೆ ಮಾಡಲಾಗುವುದು ಎಂದರು.

ಮಂಗಳೂರು ಮೀನುಗಾರಿಕಾ ಬಂದರಿನ 3ನೇ ಹಂತದ ವಿಸ್ತರಣೆಯ ಕಾಮಗಾರಿ ಪೂರ್ಣಗೊಳಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ಹೆಚ್ಚುವರಿ ಅನುದಾನ ಅಗತ್ಯವಿದ್ದು, ಇದಕ್ಕೆ ಅನುಮತಿ ನೀಡಲಾಗುವುದು. ಈ ಯೋಜನೆಗೆ ರಾಜ್ಯ ಸರ್ಕಾರದ ಅನುದಾನ ಬಿಡುಗಡೆಯಾಗಿದ್ದು, ಕೇಂದ್ರ ಸರ್ಕಾರದ ಪಾಲಿನ ಅನುದಾನ ಬಿಡುಗಡೆಯಾಗಬೇಕಿದೆ. ಈ ಬಗ್ಗೆ ಕೇಂದ್ರದೊಂದಿಗೆ ಮಾತುಕತೆ ನಡೆಸುವುದಾಗಿ ಸಚಿವರು ಹೇಳಿದರು.

3ನೇ ಹಂತದ ಬಂದರಿನ ವಿಸ್ತರಣೆಗೆ ಇನ್ನಷ್ಟು ಭೂಮಿ ಅಗತ್ಯ ಇರುವ ಬಗ್ಗೆ ಮೀನುಗಾರ ಮುಖಂಡರು ತಿಳಿಸಿದ್ದು, ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಪಡಿತರ ವ್ಯವಸ್ಥೆಯಲ್ಲಿ ಸೀಮೆಎಣ್ಣೆ ಪೂರೈಕೆಯನ್ನು ಕೇಂದ್ರ ಸರ್ಕಾರ ಕಡಿಮೆಗೊಳಿಸಿದ್ದು, ಈ ನಿಟ್ಟಿನಲ್ಲಿ ಮೀನುಗಾರಿಕಾ ದೋಣಿಗಳು ಸೀಮೆಎಣ್ಣೆಗೆ ಪರ್ಯಾಯವಾದ ಇಂಧನದತ್ತ ಗಮನಹರಿಸಬೇಕು ಎಂದು ಸಚಿವರು ಸಲಹೆ ನೀಡಿದರು.

ಮೀನುಗಾರ ಮಹಿಳೆಯರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವ ಯೋಜನೆಯನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಗಂಭೀರವಾಗಿ ಚಿಂತಿಸಲಿದೆ ಎಂದು ಸಚಿವ ನಾಡಗೌಡ ತಿಳಿಸಿದರು.ಸಭೆಯಲ್ಲಿ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ, ಮೀನುಗಾರಿಕಾ ಇಲಾಖಾ ನಿರ್ದೇಶಕ ವೀರಪ್ಪಗೌಡ, ಮೀನುಗಾರಿಕಾ ಉಪನಿರ್ದೇಶಕ ಮಹೇಶ್ ಕುಮಾರ್, ಮೀನುಗಾರ ಮುಖಂಡರು, ವಿವಿಧ ಮೀನುಗಾರಿಕಾ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಇದಕ್ಕೂ ಮೊದಲು ಸಚಿವರು ಮೀನುಗಾರಿಕಾ ಬಂದರಿನ ಎಲ್ಲಾ ಘಟಕಗಳಿಗೆ, ಜೆಟ್ಟಿ ಸ್ಥಾವರ, ಮಂಜುಗಡ್ಡೆ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.