- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಚನ್ನಪಟ್ಟಣ ಮತ್ತು ರಾಮನಗರ ಕ್ಷೇತ್ರ ನನಗೆ ಎರಡು ಕಣ್ಣುಗಳು ಇದ್ದ ಹಾಗೆ: ಹೆಚ್.ಡಿ.ಕುಮಾರಸ್ವಾಮಿ

ramnagara [1]ರಾಮನಗರ: ಚನ್ನಪಟ್ಟಣ ಮತ್ತು ರಾಮನಗರ ಈ ಎರಡೂ ಕ್ಷೇತ್ರ ನನಗೆ ಎರಡು ಕಣ್ಣುಗಳು ಇದ್ದ ಹಾಗೆ. ಚನ್ನಪಟ್ಟಣ ಕ್ಷೇತ್ರದ ಜನತೆ ಋಣ ನನ್ನ ಮೇಲೆ ಇದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಜವಾಬ್ದಾರಿ ನನ್ನ ಮೇಲಿದೆ. ರಾಮನಗರ ಮತ್ತು ಚನ್ನಪಟ್ಟಣ ಕ್ಷೇತ್ರಕ್ಕೆ 24 ಗಂಟೆ ಕುಡಿಯುವ ನೀರು ಒದಗಿಸಲಾಗುವುದು. ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ. ಹಾಗಾಗಿ ಮುಂದಿನ ಸೆಪ್ಟೆಂಬರ್‌ ತಿಂಗಳವರೆಗೆ ಬಿಡಬೇಕಿದ್ದ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಲಾಗಿದೆ. ಇದರಿಂದಾಗಿ ಸದ್ಯಕ್ಕೆ ಕಾವೇರಿ ನೀರಿನ ಹಂಚಿಕೆ ಸಂಬಂಧ ನಮಗೂ ತಮಿಳುನಾಡಿಗೆ ಆಗುವ ಸಂಘರ್ಷ ನಿಂತಿದೆ ಎಂದು ಹೇಳಿದರು.

ಇನ್ನು ಹಾಲು ಉತ್ಪಾದಕರಿಗೆ ಸಹಾಯ ಮಾಡುವ ಉದ್ದೇಶದಿಂದ ರಾಜ್ಯದಲ್ಲಿ ನೂತನ ಐದು ಮೆಗಾ ಡೈರಿ ಸ್ಥಾಪನೆ ಮಾಡಲಾಗುವುದು. ರಾಮನಗರ ಮತ್ತು ಚನ್ನಪಟ್ಟಣ ಎರಡೂ ಕ್ಷೇತ್ರವನ್ನ ಅವಳಿ ನಗರವನ್ನಾಗಿ ಘೋಷಣೆ ಮಾಡಿ ಇದೇ ವರ್ಷದಲ್ಲಿ 2ಸಾವಿರ ಕೋಟಿ ರೂ. ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗುವುದು. ರಾಮನಗರ – ಚನ್ನಪಟ್ಟಣ ಹೆದ್ದಾರಿ ಮಧ್ಯೆ 500 ಎಕರೆ ಪ್ರದೇಶದಲ್ಲಿ ರೇಷ್ಮೆ ಸೂಪರ್ ಮಾರುಕಟ್ಟೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಇನ್ನು ರೈತರ ಸಾಲ ಮನ್ನ ವಿಚಾರದಲ್ಲಿ ದೇಶದ ಯಾವುದೇ ರಾಜ್ಯ ಮಾಡದ ರೈತರ ಸಾಲ ಮನ್ನಾ ಈ ನಿಮ್ಮ ಕುಮಾರಸ್ವಾಮಿ ಮಾಡಿದ್ದೇನೆ. ಯಾವ ಮಕ್ಕಳು ಸರ್ಕಾರಿ ಶಾಲೆಗೆ ಹೋಗುತ್ತಾರೆ ಆ ಮಕ್ಕಳಿಗೆ ಉಚಿತ ಬಸ್ಪಾಸ್ ನೀಡುತ್ತೇನೆ. ಖಾಸಗಿ ಶಾಲಾ ಮಕ್ಕಳಿಗೆ ಉಚಿತ ಬಸ್ಪಾಸ್ ಇಲ್ಲ. ಬಡ ವಿದ್ಯಾರ್ಥಿಗಳಿಗೆ ಮಾತ್ರ ಇದರ ಅವಕಾಶ ಸಾಧ್ಯ. ನಾಳೆ ಅಧಿಕಾರಿಗಳ‌ ಸಭೆ ಕರೆದು ಈ ವಿಚಾರವಾಗಿ ತೀರ್ಮಾನ ಮಾಡುತ್ತೇನೆ ಎಂದರು.

ಮಹದಾಯಿ ವಿಷಯವನ್ನು ವಿರೋಧ ಪಕ್ಷ ರಾಜಕೀಯ ಮಾಡಲು ಹೊರಟಿದೆ. ಈ ವಿಚಾರದಲ್ಲಿ ಉತ್ತರ ಕರ್ನಾಟಕವನ್ನು ಮರೆಯುವ ಪ್ರಶ್ನೆಯೇ ಇಲ್ಲ. ಉತ್ತರ ಕರ್ನಾಟಕಕ್ಕೆ ಜೆಡಿಎಸ್ ಕೊಡುಗೆ ಅಪಾರವಾಗಿದೆ. ಹಿಂದೆ ಜೆಡಿಎಸ್ ಅಧಿಕಾರದಲ್ಲಿದ್ದಾಗ ಉತ್ತರ ಕರ್ನಾಟಕವನ್ನು ಅಭಿವೃದ್ಧಿ ಮಾಡಿದೆ ಎಂದರು.

ಇನ್ನು ಉತ್ತರ ಕರ್ನಾಟಕದ ಪ್ರತ್ಯೇಕ ರಾಜ್ಯ ಕೂಗು ಸರಿಯಲ್ಲ. ನನಗೆ ದಕ್ಷಿಣ, ಉತ್ತರ ಎಂದು ಭೇದ ಭಾವ ಇಲ್ಲ. ಸಂಪೂರ್ಣ ರಾಜ್ಯದ ಅಭಿವೃದ್ಧಿ ನನಗೆ ಮುಖ್ಯ ಎಂದು ಸಿಎಂ ಕುಮಾರಸ್ವಾಮಿ ಹೇಳಿದರು.