- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ದ್ರಾವಿಡ ಸಂಪ್ರದಾಯದಂತೆ ಡಿಎಂಕೆ ಮುಖ್ಯಸ್ಥ ಮುತ್ತುವೇಲ್ ಕರುಣಾನಿಧಿ ಅಂತ್ಯ ಸಂಸ್ಕಾರ

Karunanidhi-funeral [1]ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ಮುಖ್ಯಸ್ಥ ಮುತ್ತುವೇಲ್ ಕರುಣಾನಿಧಿ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವದೊಂದಿಗೆ ಬುಧವಾರ ಮರೀನಾ ಬೀಚ್ ನಲ್ಲಿ ನೆರವೇರಿಸಲಾಯಿತು.

ಸೋಲರಿಯದ ಸರದಾರನೆಂದೆ ಖ್ಯಾತಿ ಪಡೆದಿದ್ದ ಮುತ್ತುವೇಲ್ ಅವರ ಲಕ್ಷಾಂತರ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನಿಗೆ ಕಣ್ಣೀರ ವಿದಾಯ ಹೇಳಿದರು.

ಸಂಜೆ ಮರೀನಾ ಬೀಚ್ ನಲ್ಲಿರುವ ಡಿಎಂಕೆ ಸಂಸ್ಥಾಪಕ ಹಾಗೂ ಅವರ ರಾಜಕೀಯ ಗುರು ಅಣ್ಣಾ ದೊರೈ ಅವರ ಅಣ್ಣ ಸ್ಮಾರಕದ ಬಳಿ ದ್ರಾವಿಡ ಸಂಪ್ರದಾಯದಂತೆ ಕರುಣಾನಿಧಿ ಅವರ ಅಂತ್ಯ ಸಂಸ್ಕಾರ ನಡೆಯಿತು.

Karunanidhi-funeral [2]ಅಂತ್ಯಸಂಸ್ಕಾರದಲ್ಲಿ ಕರುಣಾನಿಧಿ ಪುತ್ರರಾದ ಎಂ.ಕೆ.ಸ್ಟಾಲಿನ್, ಅಳಗಿರಿ, ಕುಟುಂಬ ಸದಸ್ಯರು ಹಾಗೂ ಸಾವಿರಾರು ಗಣ್ಯರು ಮತ್ತು ಲಕ್ಷಾಂತರ ಅಭಿಮಾನಿಗಳು ಭಾಗವಹಿಸಿದ್ದರು.

ಇದಕ್ಕು ಮುನ್ನ ಚೆನ್ನೈನ ರಾಜಾಜಿ ಹಾಲ್ ನಿಂದ ಮರೀನಾ ಬೀಚ್ ವರೆಗೆ ಪಾರ್ಥಿವ ಶರೀರದ ಮೆರವಣಿಗೆ ನಡೆಸಲಾಯಿತು.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕರುಣಾನಿಧಿ ಅವರು ಮಂಗಳವಾರ ಸಂಜೆ ಕಾವೇರಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದರು. ಇಂದು ಬೆಳಗ್ಗೆಯಿಂದ ರಾಜಾಜಿ ಹಾಲ್ ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಕರ್ನಾಟಕದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಸೇರಿದಂತೆ ಹಲವಾರು ಗಣ್ಯರು ಅಸ್ತಂಗತರಾದ ಎಂ.ಕರುಣಾನಿಧಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.