- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮೀನುಗಾರಿಕೆಗೆ ತೆರಳಿದ್ದ ಮೀನುಗಾರಿಕಾ ಬೋಟು ಮುಳುಗಡೆ..ಮೀನುಗಾರಿಕರಿಂದ ರಕ್ಷಣೆ!

fishermen [1]ಉಡುಪಿ: ಮಲ್ಪೆ ಬಂದರಿನಿಂದ ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಮೀನುಗಾರಿಕಾ ಬೋಟು ಕೋಡಿಬೆಂಗ್ರೆ ಸಮೀಪ ಮುಳುಗಡೆಯಾಗಿದ್ದು, ಎರಡು ಬೋಟುಗಳು ಸುರತ್ಕಲ್ ಹಾಗೂ ಭಟ್ಕಳ ಸಮೀಪ ತಾಂತ್ರಿಕ ತೊಂದರೆಯಿಂದ ಸಮುದ್ರ ಮಧ್ಯೆ ಸಿಲುಕಿಕೊಂಡಿರುವ ಘಟನೆ ನಡೆದಿದೆ.

ಮಲ್ಪೆ ತೊಟ್ಟಂನ ಶಕುಂತಲ ಕರ್ಕೇರ ಎಂಬವರ ‘ಹನುಮ ಸಾನಿಧ್ಯ’ ಬೋಟು ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ಹೊರಟ್ಟಿದ್ದು, ಕೋಡಿಬೆಂಗ್ರೆಯ 12 ಮಾರು ದೂರದ ಸಮುದ್ರದಲ್ಲಿ ತಾಂತ್ರಿಕ ದೋಷದಿಂದ ಬೋಟಿನ ಇಂಜಿನ್ ಹಾಳಾಯಿತೆನ್ನಲಾಗಿದೆ.

ಸಮುದ್ರದಲ್ಲಿ ಭಾರೀ ಗಾಳಿಮಳೆಯ ಪರಿಣಾಮ ಕೆಟ್ಟು ನಿಂತ ಬೋಟು ಏಳು ಮಾರು ದೂರದವರೆಗೆ ದಡಕ್ಕೆ ಬಂದು ಕಲ್ಲಿಗೆ ಬಡಿದಿದ್ದರ ಪರಿಣಾಮ ಬೋಟಿನೊಳಗೆ ನೀರು ನುಗ್ಗಿ ಕೆಲ ಹೊತ್ತಿನ ಬಳಿಕ ಬೋಟು ಮುಳುಗಡೆಯಾಯಿತ್ತೆನ್ನಲಾಗಿದೆ.

ಬೋಟಿನಲ್ಲಿದ್ದ ಮೂವರು ಮೀನುಗಾರರನ್ನು ಸಮೀಪದಲ್ಲಿದ್ದ ‘ಭವ್ಯತ ಮತ್ತು ‘ಲಕ್ಷ್ಮೀ ಪಂಡರಿ’ ಬೋಟಿನವರು ರಕ್ಷಿಸಿದ್ದಾರೆ. ನಂತರ ಮುಳುಗಡೆಯಾಗುತ್ತಿದ್ದ ಬೋಟನ್ನು ಇತರ ಬೋಟುಗಳ ಸಹಾಯದಿಂದ ಹಗ್ಗ ಕಟ್ಟಿ ದಡಕ್ಕೆ ಎಳೆದು ತರಲಾಗಿದೆ. ಈ ಅವಘಡದಿಂದಾಗಿ ಸುಮಾರು 9 ಲಕ್ಷ ರೂ. ನಷ್ಟವಾಗಿದೆ.

ಎರಡು ದಿನಗಳ ಹಿಂದೆ ಮಲ್ಪೆ ಬಂದರಿನಿಂದ ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ‘ವಿಶ್ವಾಸ್’ ಎಂಬ ಬೋಟು ಸುರತ್ಕಲ್ ಸಮೀಪದ 35 ನಾಟಿಕಲ್ ಹಾಗೂ ‘ಲಕ್ಷ್ಮೀ ಜನಾರ್ದನ್’ ಎಂಬ ಬೋಟು ಭಟ್ಕಳ ಸಮೀಪದ 40 ನಾಟಿಕಲ್ ದೂರದ ಸಮುದ್ರದಲ್ಲಿ ಇಂಜಿನ್ ಸಮಸ್ಯೆಯಿಂದ ಕೆಟ್ಟು ನಿಂತಿರುವ ಬಗ್ಗೆ ವರದಿಯಾಗಿದೆ.

ವಿಶ್ವಾಸ್ ಬೋಟಿನಲ್ಲಿ ಒಟ್ಟು 9 ಮಂದಿ ಮತ್ತು ಲಕ್ಷ್ಮೀ ಜನಾರ್ದನ್ ಬೋಟಿನಲ್ಲಿ ಎಂಟು ಮಂದಿ ಮೀನುಗಾರರಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಬೋಟಿನವರು ಹಾಗೂ ಮಲ್ಪೆ ಮೀನುಗಾರರ ಸಂಘದವರು ಈಗಾಗಲೇ ಕರಾವಳಿ ಕಾವಲು ಪಡೆಯವರಿಗೆ ಮಾಹಿತಿ ನೀಡಿದ್ದು, ಭಾರೀ ಮಳೆಯಿಂದ ಕಡಲ ಅಬ್ಬರ ತೀವ್ರಗೊಂಡಿರುವುದರಿಂದ ಈ ಬೋಟುಗಳ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದೆ.

ಈ ಬೋಟಿನಲ್ಲಿರುವ ಮೀನುಗಾರರು ಇದೀಗ ಸಂರ್ಪಕದಲ್ಲಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ನಮ್ಮ ಕಾರ್ಯಾಚರಣೆಯ ವ್ಯಾಪ್ತಿ ಐದು ನಾಟಿಕಲ್ ದೂರವಾಗಿರುವುದರಿಂದ ಈ ಕುರಿತು ಈಗಾಗಲೇ ಮಂಗಳೂರು ಹಾಗೂ ಕಾರವಾರ ಕೋಸ್ಟ್ ಗಾರ್ಡ್ಗಳಿಗೆ ಮಾಹಿತಿ ರವಾನಿಸಲಾಗಿದೆ ಎಂದು ಮಲ್ಪೆ ಕರಾವಳಿ ಕಾವಲು ಪಡೆಯ ಡಿವೈಎಸ್ಪಿ ಜೈಶಂಕರ್ ತಿಳಿಸಿದ್ದಾರೆ.

ಅದೇ ರೀತಿ ಈಗಾಗಲೇ ಮೀನುಗಾರಿಕೆಗೆ ತೆರಳಿ ಹಿಂದಿರುಗುತ್ತಿರುವ ಬೋಟುಗಳಲ್ಲಿರುವ ಮೀನುಗಾರರ ಸಂಪರ್ಕ ಮಾಡಿ, ಕೆಟ್ಟು ನಿಂತಿರುವ ಬೋಟುಗಳಲ್ಲಿರುವ ಮೀನುಗಾರರನ್ನು ರಕ್ಷಿಸುವಂತೆ ತಿಳಿಸಲಾಗಿದೆ. ಸಮುದ್ರ ಸಾಕಷ್ಟು ಪ್ರಕ್ಷುಬ್ದಗೊಂಡಿರುವುದರಿಂದ ಯಾರಿಗೂ ಸಮುದ್ರಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಯಾರು ಕೂಡ ಮೀನುಗಾರಿಕೆಗೆ ತೆರಳದಂತೆ ಸೂಚನೆಯನ್ನು ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.