- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕುಕ್ಕೆ ಮಠದಲ್ಲಿಯೂ ಸರ್ಪ ಸಂಸ್ಕಾರ ಸೇವೆ ಮಾಡಬಹುದು, ಅದು ಮಾತ್ರ ಶಾಸ್ತ್ರೋಕ್ತ: ಪ್ರಮೋದ್ ಮುತಾಲಿಕ್

pramod-muthalik [1]ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುವ ಸರ್ಪ ಸಂಸ್ಕಾರ, ಆಶ್ಲೇಷಾ ಪೂಜೆ ಸೇರಿದಂತೆ ನಡೆಯುವ ಸೇವೆಗಳು ಶಾಸ್ತ್ರೋಕ್ತವಲ್ಲ. ಸುಬ್ರಹ್ಮಣ್ಯ ಮಠದಲ್ಲಿ ನಡೆಯುವ ಸೇವೆಗಳು ಮಾತ್ರ ಶಾಸ್ತ್ರೋಕ್ತವಾದವು ಎಂದು ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾಯಶ್ಚಿತವಾಗಿ ಮಾಡುವ ಸರ್ಪ ಸಂಸ್ಕಾರ, ಆಶ್ಲೇಷಾ ಪೂಜೆಯನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಾಮೂಹಿಕವಾಗಿ ಮಾಡಲಾಗುತ್ತದೆ. ಸಾಮೂಹಿಕವಾಗಿ ಸತ್ಯನಾರಾಯಣ ಪೂಜೆ ಮೊದಲಾದವುಗಳನ್ನು ಮಾಡುವುದು ಜಾಗೃತಿಗಾಗಿ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಾಡುವ ಸಾಮೂಹಿಕ ಪೂಜೆ ಶಾಸ್ತ್ರೋಕ್ತವಲ್ಲ. ಮಠದಲ್ಲಿ ನಡೆಯುವ ಸೇವೆಗಳು ಮಾತ್ರ ಶಾಸ್ತ್ರೋಕ್ತ ಎಂದರು.

ಮಠದಲ್ಲಿ ಸರ್ಪ ಸಂಸ್ಕಾರದ ಪೂಜೆಯನ್ನು ನಾಲ್ವರು ಅರ್ಚಕರ ಮೂಲಕ ಮಾಡಲಾಗುತ್ತದೆ. ಮತ್ತು ಅಲ್ಲಿ ಸೇವೆಗೆ ಹೆಚ್ಚು ಖರ್ಚು ಇರುತ್ತದೆ. ಆದರೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಾಮೂಹಿಕವಾಗಿ ನಡೆಯುವುದರಿಂದ ಕಡಿಮೆ ಖರ್ಚು ಆಗುತ್ತದೆ ಎಂದರು.

ಮಠ ಮತ್ತು ದೇವಸ್ಥಾನ ಎರಡು ಒಂದೇ ಆಗಿದ್ದರೂ ಅದನ್ನು ಪ್ರತ್ಯೇಕಿಸಲಾಗಿದೆ. ದೇವಸ್ಥಾನವು ಇದೀಗ ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿದೆ. ಆದರೆ ದೇವಸ್ಥಾನವು ಮಠಕ್ಕೆ ಸೇರಿರುವಂತಹದು. ದೇವಸ್ಥಾನ ಮಠಕ್ಕೆ ಸೇರಿದೆ ಎನ್ನುವುದಕ್ಕೆ ಹಲವು ದಾಖಲೆಗಳಿವೆ. ದೇವಸ್ಥಾನವು ಸರ್ಕಾರಕ್ಕೆ ಸಂಬಂಧಿಸಿದ್ದಲ್ಲ. ದೇವಸ್ಥಾನವನ್ನು ಮಠಕ್ಕೆ ಬಿಡಕೊಡಬೇಕೆಂದು ಅವರು ಆಗ್ರಹಿಸಿದರು.

ದೇವಸ್ಥಾನದ ಪಾವಿತ್ರ್ಯತೆ ಉಳಿಯಬೇಕಾಗಿದೆ. ಆದರೆ ದೇವಸ್ಥಾನದ ಹೆಸರಿನಲ್ಲಿ ರಚನೆಗೊಂಡಿರುವ ಸಂಘವೊಂದು ದೇವಸ್ಥಾನದ ವಠಾರದಲ್ಲಿಯೆ ಪ್ರತಿಭಟನೆ ಮಾಡಿ ಸ್ವಾಮೀಜಿಗಳಿಗೆ ನಿಂದನೆ ಮಾಡಿದ್ದಾರೆ. ಅಯೋಗ್ಯ, ನಿರ್ಲಜ್ಜರು ಈ ಕೆಲಸ ಮಾಡಿದ್ದಾರೆ ಎಂದು ಟೀಕಿಸಿದರು. ದೇವಸ್ಥಾನ ಮಾತ್ರವಲ್ಲ ಮಠದಲ್ಲಿಯೂ ಸರ್ಪ ಸಂಸ್ಕಾರ ಸೇವೆ ಮಾಡಬಹುದು ಎಂದು ಮುತಾಲಿಕ್ ಹೇಳಿದರು.