ಬೆಂಗಳೂರು: ಮೈತ್ರಿ ಸರ್ಕಾರಕ್ಕೆ ಮಾಡಿದಂತೆ ಬಿಜೆಪಿ ಬಿಬಿಎಂಪಿ ಮೇಯರ್ ಚುನಾವಣೆಯಲ್ಲೂ ಹೈವೋಲ್ಟೇಜ್ ಮಾಡಲು ಯತ್ನಿಸಿತು, ಆದರೆ ಯಾರೋ ಫ್ಯೂಸ್ ಕಿತ್ತುಕೊಂಡು ಹೋದರು ಎಂದು ಸಿಎಂ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಪಾಲಿಕೆ ಚುನಾವಣೆಯಲ್ಲೂ ಬಿಜೆಪಿಯವರು ಸರ್ಕಸ್ ಮಾಡಲು ಹೋದರು. ಆದರೆ ಯಾರೋ ಫ್ಯೂಜ್ಕಿತ್ತುಕೊಂಡು ಹೋಗಿದ್ದಾರೆ ಎನಿಸುತ್ತಿದೆ. ಅದರಲ್ಲಿ ಕರೆಂಟ್ ಹರಿಯಲಿಲ್ಲ. ಹೀಗಾಗಿ ಬಿಜೆಪಿ ಮತ್ತೆ ವಿಫಲವಾಯ್ತು ಎಂದು ಟೀಕಿಸಿದರು.
ಇದೇ ವೇಳೆ ಶಬರಿಮಲೈಗೆ ಸ್ತ್ರೀಯರ ಪ್ರವೇಶಕ್ಕೆ ಅವಕಾಶ ನೀಡಿ ಸುಪ್ರೀಂಕೋರ್ಟ್ ತೀರ್ಪು ನೀಡಿದ ಸಂಬಂಧ ಪ್ರತಿಕ್ರಿಯಿಸಿದ ಸಿಎಂ, ಸುಪ್ರೀಂಕೋರ್ಟ್ ಆದೇಶಿಸಿರುವುದಕ್ಕೆ ನಾನು ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಇದು ಜನರ ಧಾರ್ಮಿಕ ಭಾವನೆಗಳಿಗೆ ಸಂಬಂಧಿಸಿದ್ದು. ಯಾರಿಗೆ ನಂಬಿಕೆ ಇದೆಯೋ ಅದರಂತೆ ಅವರು ನಡೆದುಕೊಳ್ಳುತ್ತಾರೆ ಎಂದರು.
ರಾಜ್ಯದ ಆರ್ಥಿಕ ಪ್ರಗತಿ ಕಳೆದ ವರ್ಷದ ಆಗಸ್ಟ್ವರೆಗೆ ಶೇ. 27 ಇತ್ತು. ಈ ವರ್ಷದ ಆಗಸ್ಟ್ ವರೆಗೆ 24% ಇದೆ ಎಂದು ಸಿಎಂ ತಿಳಿಸಿದರು. ಚುನಾವಣೆ ಇದ್ದಿದ್ದರಿಂದ ಎರಡು ತಿಂಗಳ ಅವಧಿಯಲ್ಲಿ ಆರ್ಥಿಕ ಪ್ರಗತಿ ಆಗಲಿಲ್ಲ. ಈಗ ಆರ್ಥಿಕ ಪ್ರಗತಿಯನ್ನು ವೇಗಗೊಳಿಸುವ ಕಾರ್ಯಕ್ಕೆ ಚಾಲನೆ ಕೊಟ್ಟಿದ್ದೇವೆ. ಸರ್ಕಾರದ ಎಲ್ಲ ಕಾರ್ಯಕ್ರಮಗಳನ್ನೂ ಸಮರ್ಥವಾಗಿ ಜಾರಿ ಮಾಡುತ್ತೇವೆ. ತೆರಿಗೆ ಸಂಗ್ರಹದಲ್ಲಿ 34 ಶೇ. ಪ್ರಗತಿ ಸಾಧಿಸಿದ್ದೇವೆ ಎಂದು ತಿಳಿಸಿದರು.
ಇನ್ನು ಸರ್ಕಾರದ ಬಳಿ ಹಣ ಇಲ್ಲ ಎನ್ನುವ ಪ್ರತಿಪಕ್ಷದ ಬಳಿ ಮಾಹಿತಿ ಇದ್ದರೆ ಬಹಿರಂಗ ಪಡಿಸಲಿ. ಸಾಲ ಮನ್ನಾ ಯೋಜನೆಗೂ ಸರ್ಕಾರದ ಆರ್ಥಿಕ ಯೋಜನೆಗಳ ಜಾರಿಗೂ ಸಂಬಂಧವಿಲ್ಲ. ಬಿಬಿಎಂಪಿ, ನಗರೋತ್ಥಾನ ಯೋಜನೆ ಸೇರಿದಂತೆ ಯಾವ ಇಲಾಖೆಯಲ್ಲಿ ಪೆಂಡಿಂಗ್ ಬಿಲ್ ಇದೆ, ಅದನ್ನು ಕೊಡುವ ಜವಾಬ್ದಾರಿ ತೆಗೆದುಕೊಂಡಿದ್ದೇವೆ ಎಂದು ಸಿಎಂ ಸ್ಪಷ್ಟಪಡಿಸಿದರು.
Click this button or press Ctrl+G to toggle between Kannada and English