- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮೈಸೂರು ದಸರಾ ಉತ್ಸವಕ್ಕೆ ಚಾಲನೆ ನೀಡಿದ ಇನ್ಫೋಸಿಸ್ ಅಧ್ಯಕ್ಷೆ ಸುಧಾಮೂರ್ತಿ

kumarswamy [1]ಮೈಸೂರು: ಕರ್ನಾಟಕ ಸರ್ಕಾರ ಭೂಮಿ ನೀಡಿದರೆ ಇನ್ಫೋಸಿಸ್ ವತಿಯಿಂದ ಕೊಡಗು ಜಿಲ್ಲೆಯ ಪ್ರವಾಹ ಪೀಡಿತರಿಗೆ ವಸತಿ ಕಲ್ಪಿಸಿಕೊಡಲಾಗುವುದು ಎಂದು ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ತಿಳಿಸಿದ್ದಾರೆ.

ಅವರು ಇಂದು ಬೆಳಗ್ಗೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ದೇವಿ ಚಾಮುಂಡಿಗೆ ಪುಷ್ಪಾರ್ಚನೆ ಸಲ್ಲಿಸಿ 9 ದಿನಗಳ ನವರಾತ್ರಿ ಹಾಗೂ 10ನೇ ದಿನ ವಿಜಯದಶಮಿಯ ನಾಡಹಬ್ಬಕ್ಕೆ ಅಧಿಕೃತ ಚಾಲನೆ ನೀಡಿ ಮಾತನಾಡಿದರು.

ಸರ್ಕಾರ ಮಾಡುವ ಯಾವುದೇ ಕೆಲಸದಲ್ಲಿ ನಾವು ಕೈಜೋಡಿಸುವುದು ನಮ್ಮ ಕೆಲಸವಾಗಿದೆ, ನಮಗೆ ಸಮಾಜದಿಂದ ಸಿಕ್ಕಿದ ಹಣ ಮತ್ತೆ ಸಮಾಜಕ್ಕೆ ಹೋಗಬೇಕು. ಹೀಗಾಗಿ ಕೊಡಗು ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳ ಜನರ ಪುನರ್ವಸತಿಗೆ ಸರ್ಕಾರ ಸ್ಥಳ ಗುರುತಿಸಿದರೆ ಇನ್ಫೋಸಿಸ್ ವತಿಯಿಂದ 25 ಕೋಟಿ ರೂಪಾಯಿ ವೆಚ್ಚದಲ್ಲಿ ವಸತಿ ನಿರ್ಮಿಸಿಕೊಡಲಾಗುವುದು ಎಂದು ಘೋಷಿಸಿದರು. ಇದನ್ನು ನಾನು ಕೊಡುಗೆ ಎಂದು ಭಾವಿಸದೆ ಕರ್ತವ್ಯ ಎಂದು ತಿಳಿಯುತ್ತೇನೆ ಎಂದು ಕೂಡ ಸುಧಾಮೂರ್ತಿ ಹೇಳಿದರು.

ದಸರಾ ಕೇವಲ ಇಂದು ನಿನ್ನೆಯದಲ್ಲ, ಸಾವಿರಾರು ವರ್ಷಗಳ ಇತಿಹಾಸ ಮೈಸೂರು ದಸರಾಗೆ ಇದೆ. ಹಿಂದಿನ ಕಾಲದಲ್ಲಿ ಇದನ್ನು ನವಮಿ ಹಬ್ಬ ಎಂದು ಕೂಡ ಆಚರಿಸುತ್ತಿದ್ದರೆ. ಕರ್ನಾಟಕ ರಾಜ್ಯದ ಉದಯ, ಕನ್ನಡ ಭಾಷೆ, ಸಂಸ್ಕೃತಿಯ ಉಳಿವು, ಬೆಳವಣಿಗೆಗೆ ಮೈಸೂರು ಮಹಾರಾಜರ ಕೊಡುಗೆ ಅಪಾರ. ಇದಕ್ಕೆ ನಾವು ಮೈಸೂರು ದೊರೆಗಳಿಗೆ ಎಂದಿಗೂ ಕೃತಜ್ಞರಾಗಿರಬೇಕು ಎಂದರು.

ದಸರಾ ಉದ್ಘಾಟಿಸಿರುವುದು ನನ್ನ ಪೂರ್ವಜನ್ಮದ ಪುಣ್ಯ ಎಂದು ಭಾವಿಸುತ್ತೇನೆ. ನನ್ನ ಜೀವನದ ಅತ್ಯಂತದ ಸಂತಸದ ದಿನ. ನಮ್ಮ ಕಾಲದಲ್ಲಿ ಇದಕ್ಕೆ ಅಜ್ಜಿ ‘ಮಹಾನವಮಿ ಹಬ್ಬ’ ಎಂದು ಹೇಳುತ್ತಿದ್ದರು. ಹಂಪಿಯಲ್ಲಿ ಇಂದಿಗೂ ಮಹಾನವಮಿ ದಿಬ್ಬವನ್ನು ಕಾಣಬಹುದು. ಮುಂದೆ ಮೈಸೂರು ಮಹಾರಾಜರು ಅದನ್ನು ಮುಂದುವರಿಸಿ ನಾಡಿನ ತುಂಬ ಪಸರುವಂತೆ ಮಾಡಿದರು. ಈ ವೈಭವದ ಉತ್ಸವ ಮತ್ತು ಹಬ್ಬವನ್ನು ಉಳಿಸಿದ್ದಕ್ಕೆ ಅವರಿಗೆ ನಾವು ಸದಾ ಕೃತಜ್ಞರಾಗಿರಬೇಕು ಎಂದು ಸುಧಾ ಮೂರ್ತಿ ಹೇಳಿದ್ದಾರೆ.