- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಬೀದಿ ವ್ಯಾಪಾರಿಗಳಿಗೆ “ಬಡವರ ಬಂಧು’ ಯೋಜನೆ ಪ್ರಾರಂಭಿಸಲು ಸರ್ಕಾರ ನಿರ್ಧಾರ: ಬಂಡೆಪ್ಪ ಕಾಶೆಂಪುರ್‌

bandeppa-3 [1]ಮಂಗಳೂರು: ಮೀಟರ್‌ ಬಡ್ಡಿ ಮುಕ್ತ ಕರ್ನಾಟಕಕ್ಕಾಗಿ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯ ನೀಡುವ “ಬಡವರ ಬಂಧು’ ಯೋಜನೆಗೆ ದೀಪಾವಳಿ ಹಬ್ಬದ ಮೊದಲು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ್‌ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ ಬುಧವಾರ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ಯೋಜನೆಯಡಿ 2 ಸಾವಿರ ರೂ.ಗಳಿಂದ 10 ಸಾವಿರ ರೂ. ವರೆಗೆ ಬಡ್ಡಿ ರಹಿತ ಸಾಲ ಸೌಲಭ್ಯ ಸಿಗಲಿದೆ. ಮಹಾನಗರ ಪಾಲಿಕೆಗಳಲ್ಲಿ 3 ಸಾವಿರ ಮಂದಿಗೆ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ 1 ಸಾವಿರ ಸೇರಿದಂತೆ ಒಟ್ಟು 53 ಸಾವಿರ ಮಂದಿಗೆ ಸೌಲಭ್ಯ ಸಿಗಲಿದೆ. ಪಿಗ್ಮಿ ಯೋಜನೆ ಮೂಲಕ ಸಾಲ ಮರು ಪಾವತಿಗೆ ಇರಲಿದೆ ಎಂದರು.

ಉದ್ಯಮ ಆರಂಭಿಸುವ ಸ್ವಸಹಾಯ ಗುಂಪು ಗಳಿಗೆ ಸಹಕಾರ ಇಲಾಖೆಯು “ಕಾಯಕ ಯೋಜನೆ’ಯಡಿ 10 ಲಕ್ಷ ರೂ. ಸಾಲ ಒದಗಿಸಲಿದೆ. ಇದರಲ್ಲಿ 5 ಲಕ್ಷ ರೂ.ಗಳಿಗೆ ಮಾತ್ರ ಶೇ. 4ರ ಬಡ್ಡಿ ದರ ಇರಲಿದೆ ಎಂದು ತಿಳಿಸಿದರು. ಸಮ್ಮಿಶ್ರ ಸರಕಾರ ಜಾರಿ ಮಾಡಿರುವ ರೈತರ 1 ಲಕ್ಷ ರೂ. ಸಾಲ ಮನ್ನಾ ಯೋಜನೆಯಡಿ ದ. ಕನ್ನಡ ಜಿಲ್ಲೆಯಲ್ಲಿ ರೈತರ 713 ಕೋಟಿ ರೂ. ಸಾಲ ಮನ್ನಾ ಆಗಲಿದೆ ಎಂದರು.

bandeppa [2]ದ.ಕ. ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ (ಪ್ಯಾಕ್ಸ್‌)ಗಳಲ್ಲಿ ಈಗಾಗಲೇ ಕಾಮನ್‌ ಸಾಫ್ಟ್ ವೇರ್‌ ಅಳವಡಿಸಲಾಗಿದೆ. ರಾಜ್ಯದ ಎಲ್ಲೆಡೆ ಇದರ ಅಳವಡಿಕೆಗೆ ಚಿಂತನೆ ನಡೆದಿದೆ. ಈ ಬಗ್ಗೆ ಇಲಾಖೆ 15 ದಿನದಲ್ಲಿ ವರದಿ ನೀಡಲಿದ್ದು ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಾಲ ಮನ್ನಾಕ್ಕಾಗಿ ರೈತರಿಂದ ದಾಖಲೆಯಾಗಿ ಆಧಾರ್‌ ಕಾರ್ಡ್‌ ಮತ್ತು ರೇಶನ್‌ ಕಾರ್ಡ್‌ ಮಾತ್ರವೇ ಕೇಳಲಾಗುತ್ತಿದೆ. ಒಟ್ಟು 22 ಲಕ್ಷ ರೈತರಿಗೆ ಋಣ ಮುಕ್ತ ಪ್ರಮಾಣ ಪತ್ರ ನೀಡಲು ಸಿದ್ಧತೆ ನಡೆಯುತ್ತಿದೆ. ಹಿಂದಿನ ಸಾಲ ಮನ್ನಾ ಯೋಜನೆಯಡಿ ದ.ಕ. ಜಿಲ್ಲೆಯ 380 ಕೋಟಿ ರೂ.ಗಳಲ್ಲಿ 2 ಕೋಟಿ ರೂ. ಸಹಕಾರಿ ಸಂಘಗಳಿಗೆ ಪಾವತಿಯಾಗಲು ಬಾಕಿ ಇದೆ. ಈ ಬಾರಿ ಸಾಲ ಮನ್ನಾ ಯೋಜನೆಯಡಿ ಬಿಲ್‌ ಬಂದ ಹಾಗೆ ಪ್ಯಾಕ್ಸ್‌ಗಳಿಗೆ ಹಣ ಬಿಡುಗಡೆ ಮಾಡಲಾಗುವುದು ಎಂದರು.

ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌, ರಾಜ್ಯ ಸಹಕಾರಿ ಸಂಘಗಳ ರಿಜಿಸ್ಟ್ರಾರ್‌ ಎಂ.ಕೆ. ಅಯ್ಯಪ್ಪ, ಜಿಲ್ಲಾ ಸಹಕಾರಿ ಸಂಘಗಳ ಉಪ ನಿಬಂಧಕ ಬಿ.ಕೆ. ಸಲೀಂ, ಎಸ್‌ಸಿಡಿಸಿಸಿ ಬ್ಯಾಂಕ್‌ನ ನಿರ್ದೇಶಕರು ಉಪಸ್ಥಿತರಿದ್ದರು.

bandeppa-2 [3]

bandeppa-4 [4]

bandeppa-5 [5]