ವಿಟ್ಲ : ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀ ಗುರುದೇವ ಬಂಧುಗಳ ಸಮಾವೇಶವನ್ನು ಆರೆಸ್ಸೆಸ್ ದಕ್ಷಿಣ ಮಧ್ಯಕ್ಷೇತ್ರೀಯ ಸಂಪರ್ಕ ಪ್ರಮುಖ್ ಡಾ| ಪ್ರಭಾಕರ ಭಟ್ ಕಲ್ಲಡ್ಕ ಗುರುವಾರ ಉದ್ಘಾಟಿಸಿದರು. ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯರು ಆಶೀರ್ವಚನ ನೀಡಿದರು.
ಸಂಸ್ಕಾರ ಮತ್ತು ಕರ್ಮಬಂಧಗಳಿಲ್ಲದ ಭಾವನೆಗಳು ಕೆಟ್ಟ ದಾರಿಯಲ್ಲಿ ಸಾಗುತ್ತದೆ. ಇವೆರಡನ್ನೂ ಬೆಸೆಯುವ ಮತ್ತು ಸಮಾಜದ ಋಣವನ್ನು ತೀರಿಸುವ ಉದ್ದೇಶದಿಂದ ಶ್ರೀ ಗುರುದೇವ ಬಂಧುಗಳ ಸಮಾವೇಶ ಸಂಘಟಿಸಲಾಗಿದೆ ಎಂದು ಅವರು ಹೇಳಿದರು.
ದಾನ ಧರ್ಮ ಸತ್ಕರ್ಮಗಳಿಂದ ಮಾನವ ಸದ್ಗುಣಳನ್ನು ಪಡೆಯಲು ಸಾಧ್ಯ, ಇಂದ್ರಿಯ ನಿಗ್ರಹ, ದಯಾಪರ ಪ್ರವೃತ್ತಿಯಿಂದ ಧರ್ಮದ ಚಿಂತನೆಯೊಂದಿಗೆ ದೇಶಪ್ರೆಮ ಸಾದ್ಯಾ ಎಂದು ಅವರು ಹೇಳಿದರು.
ಉದ್ಘಾಟನೆ ನೆರವೇರಿಸಿದ ಡಾ| ಪ್ರಭಾಕರ ಭಟ್ ಕಲ್ಲಡ್ಕ ಅವರು ಮಾತನಾಡಿ, ಒಡಿಯೂರು ಶ್ರೀಗಳು ಸಾಮಾಜಿಕ ಚಿಂತನೆಯಿಂದ ಒಡಿಯೂರು ಪ್ರಸಿದ್ದಿಯಾಗಿದೆ. ದೇಶದ ಹಿಂದುತ್ವವನ್ನು ಮತ್ತು ಆಧ್ಯಾತ್ಮಿಕ ಮನೋಭಾವನೆಯನ್ನು ಉಳಿಸಿ, ಬೆಳೆಸಿದ್ದು ಸನ್ಯಾಸಿಗಳು, ಸಾಧು ಸಂತರು ಎಂದು ಹೇಳಿದರು. ನಮ್ಮ ಸಂಸ್ಕೃತಿಯನ್ನು ವಿದೇಶಿಯರು ಇಷ್ಟ ಪಡುತ್ತಾರೆ ಅವರಿಗೆ ಅಲ್ಲಿ ಸಿಗದನ್ನು ಇಲ್ಲಿ ಬಂದು ಅನುಭವಿಸುತ್ತಾರೆ ಎಂದರು.
ಈ ಸಂದರ್ಭದಲ್ಲಿ ಶ್ರೀ ಗುರುದೇವ ಗ್ರಾಮ ವಿಕಾಸ ಯೋಜನೆಯ ನವನಿಕೇತನ ಯೋಜನೆಯಡಿ 48 ಗುಂಪು ಮನೆಗಳಲ್ಲಿ 9ನೇ ಮನೆಯ ಮೊದಲ ಕಂತನ್ನು ಕೊಳ್ನಾಡು ಗ್ರಾಮದ ಬಾರೆಬೆಟ್ಟು ನಿವಾಸಿ ಸುನಂದ ಅವರಿಗೆ ವಿತರಿಸಿದರು.
ಪೆರುವಾಯಿ ದಿವಾಕರ ರೈ ಮತ್ತು ಲಕ್ಷ್ಮಣ ಅಲ್ತಡ್ಕ ಅವರಿಗೆ ವೀಲ್ ಚೇರನ್ನು ಶ್ರೀಗಳು ವಿತರಿಸಿದರು. ಶಿಕ್ಷಕ ಗಣೇಶ ಆಚಾರ್ಯ ಅವರು ತಾನು ರಚಿಸಿದ ಸ್ವಾಮೀಜಿ ಅವರ ಚುಕ್ಕಿಚಿತ್ರವನ್ನು ಸಮರ್ಪಿಸಿದರು.
ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮತ್ತು ಸಾಧ್ವಿ ಶ್ರೀ ಮಾತಾನಂದಮಯೀ ಉಪಸ್ಥಿತರಿದ್ದರು.
ಆಥಿತಿಗಳಾಗಿ ಸುಳ್ಯ ಕೆವಿಜಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ| ಎನ್.ಎ. ಜ್ಞಾನೇಶ್, ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನ ಸಂಸ್ಕೃತ ವಿಭಾಗ ಮುಖ್ಯಸ್ಥ ಡಾ| ಸೋಂದಾ ಭಾಸ್ಕರ ಭಟ್, ತೆಂಕ ಎಡಪದವು ಶ್ರೀ ಭೂತನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯನಾಥ ವಿಠಲ ಶೆಟ್ಟಿ, ಮುಂಬಯಿ ಉದ್ಯಮಿ ವಿಶ್ವನಾಥ ಶೆಟ್ಟಿ ಐಕಳ ಭಾಗವಹಿಸಿದ್ದರು.
ಶ್ರೀ ಗುರುದೇವ ಗ್ರಾಮ ವಿಕಾಸ ಯೋಜನೆಯ ಪ್ರಧಾನ ಸಂಚಾಲಕ ತಾರಾನಾಥ ಕೊಟ್ಟಾರಿ ಸ್ವಾಗತಿಸಿದರು. ಪ್ರಕಾಶ್ ಶೆಟ್ಟಿ ಪೇಟೆಮನೆ ಮತ್ತು ವಿಕಾಸವಾಹಿನಿ-ಸ್ವಸಹಾಯ ಗುಂಪುಗಳ ಮೇಲ್ವಿಚಾರಕ ಸದಾಶಿವ ಅಳಿಕೆ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯನಿರ್ವಾಹಕ ಜಗನ್ನಾಥ ರೈ ವಂದಿಸಿದರು.
ಲೋಕಕಲ್ಯಾಣಾರ್ಥವಾಗಿ ವೇ|ಮೂ| ಕುರೋಮೂಲೆ ಚಂದ್ರಶೇಖರ ಉಪಾಧ್ಯಾಯರ ನೇತೃತ್ವದಲ್ಲಿ ಸಗ್ರಹಮುಖ ಬೃಹಸ್ಪತಿ ಹವನದ ಪೂರ್ಣಾಹುತಿ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು.