- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಸುಮಾರು 3,500 ಹಾಸ್ಟೆಲ್​ಗಳ ಸ್ವರೂಪವನ್ನು ಸಮಗ್ರವಾಗಿ ಬದಲಾಯಿಸಲಾಗುವುದು: ಪ್ರಿಯಾಂಕ್ ಖರ್ಗೆ

priyanka-kharge [1]ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆ ರಾಜ್ಯದಲ್ಲಿ ನಡೆಸುತ್ತಿರುವ ಸುಮಾರು 3,500 ಹಾಸ್ಟೆಲ್ಗಳ ಸ್ವರೂಪವನ್ನು ಸಮಗ್ರವಾಗಿ ಬದಲಾಯಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ಕ್ರೈಸ್) ರಾಜ್ಯಾದ್ಯಂತ ನಡೆಸುತ್ತಿರುವ ವಸತಿ ಶಿಕ್ಷಣ ಶಾಲೆಗಳ ಪ್ರಿನ್ಸಿಪಾಲರುಗಳು ಹಾಗೂ ವಿದ್ಯಾರ್ಥಿ ನಿಲಯಗಳ ವಾರ್ಡನ್ಗಳ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಹಾಸ್ಟೆಲ್ಗಳ ಸಮಗ್ರ ಸುಧಾರಣೆಗಾಗಿ ವರದಿ ನೀಡಲು ಸಮಿತಿಯೊಂದನ್ನು ರಚಿಸಲಾಗಿದ್ದು, ಸಮಿತಿ ವರದಿ ನೀಡಿದ ನಂತರ ಹಾಸ್ಟೆಲ್ಗಳ ಕಾರ್ಯವೈಖರಿಯಲ್ಲಿ ಬಹಳಷ್ಟು ಬದಲಾವಣೆ ಹಾಗೂ ಸುಧಾರಣೆಗಳಾಗಲಿವೆ ಎಂದು ಸ್ಪಷ್ಟಪಡಿಸಿದರು.

ಸಮಾಜ ಕಲ್ಯಾಣ ಇಲಾಖೆಯ ವಸತಿ ಶಿಕ್ಷಣ ಶಾಲೆಗಳ ಪ್ರಿನ್ಸಿಪಾಲರು ಹಾಗೂ ಬೋಧಕ ಸಿಬ್ಬಂದಿ ತಮ್ಮ ವೃತ್ತಿಯಲ್ಲಿ ಪ್ರಾಮಾಣಿಕತೆ ಹಾಗೂ ಪಾರದರ್ಶಕತೆಯನ್ನು ಅಳವಡಿಸಿಕೊಂಡು ಕಾರ್ಯನಿರ್ವಹಿಸಬೇಕು. ಶಿಕ್ಷಕರು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸಬೇಕಲ್ಲದೆ, ಮೌಢ್ಯತೆಗೆ ಅವಕಾಶ ನೀಡದಂತೆ ಮಕ್ಕಳ ಮನಸ್ಸನ್ನು ಬೆಳೆಸುವಲ್ಲಿ ಪೂರಕವಾಗಬೇಕು. ಕುತೂಹಲ ಮೂಡುವಂತಹ ವಾತಾವರಣವನ್ನು ಮಕ್ಕಳಲ್ಲಿ ಸೃಷ್ಟಿಸುವುದರೊಂದಿಗೆ ಅವರಲ್ಲಿ ಪ್ರಶ್ನಿಸುವ ಮನಃಸ್ಥಿತಿಯನ್ನು ತರಬೇಕು ಎಂದು ಸೂಚಿಸಿದರು.

ರಾಜ್ಯದ ವಸತಿ ಶಾಲೆಗಳ 820 ಮಂದಿ ಪ್ರಾಂಶುಪಾಲರು ಹಾಗೂ 820 ಮಂದಿ ವಾರ್ಡನ್ಗಳು ಈ ಸಭೆಯಲ್ಲಿ ಭಾಗವಹಿಸಿದ್ದರು. ಸಮಾಜ ಕಲ್ಯಾಣ ಇಲಾಖೆಯ ಕ್ರೈಸ್ ರಾಜ್ಯಾದ್ಯಂತ ನಡೆಸುತ್ತಿರುವ ವಸತಿ ಶಿಕ್ಷಣ ಶಾಲೆಗಳು ಹಾಗೂ ವಿದ್ಯಾರ್ಥಿ ನಿಲಯಗಳ ವಾರ್ಡನ್ಗಳ ಸೇವಾ ವಿಷಯದಲ್ಲಿ ಇರುವ ನ್ಯೂನ್ಯತೆಗಳನ್ನು ಸರಿಪಡಿಸಲು ಈಗಾಗಲೇ ರಚಿಸಲಾಗಿರುವ ಸಮಿತಿಯಲ್ಲಿ ಸೂಕ್ತ ಶಿಫಾರಸುಗಳನ್ನು ಮಾಡುವಂತೆ ಕೋರಲಾಗುವುದು ಎಂದು ಇದೇ ವೇಳೆ ಸಚಿವ ಖರ್ಗೆ ತಿಳಿಸಿದರು.