- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ನಿರಂತರ ಗೋಹತ್ಯೆ ಆರೋಪ : ಕುದ್ರೋಳಿ ಕಸಾಯಿಖಾನೆ‌ ಮುಚ್ಚಲು ವಿಎಚ್‌ಪಿ ಆಗ್ರಹ

vishwa-hindu [1]ಮಂಗಳೂರು: ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನಿದೆ. ಆದರೆ ಮಂಗಳೂರು ಮಹಾನಗರ ಪಾಲಿಕೆಯ ಅಧೀನದಲ್ಲಿರುವ ಕುದ್ರೋಳಿ ಕಸಾಯಿಖಾನೆಯಲ್ಲಿ ಮನಪಾ ಅಧಿಕಾರಿಗಳ ಅನುಮೋದನೆಯಿಂದಲೇ ಗೋಮಾತೆಯನ್ನು ವಧಿಸಲಾಗುತ್ತಿದೆ. ತಕ್ಷಣ ಕುದ್ರೋಳಿ ಕಸಾಯಿಖಾನೆ‌ ಮುಚ್ಚಬೇಕು ಎಂದು ವಿಶ್ವ ಹಿಂದೂ ಪರಿಷತ್ ರಾಜ್ಯ ಸರ್ಕಾರವನ್ನು ಆಗ್ರಹಿಸುವುದಾಗಿ ವಿಎಚ್‌ಪಿ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ ತಿಳಿಸಿದ್ದಾರೆ.

ನಗರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆದರೆ ಕುದ್ರೋಳಿ ಕಸಾಯಿಖಾನೆಯಲ್ಲಿ ಅನಧಿಕೃತವಾಗಿ ಜಾನುವಾರುಗಳನ್ನು ಹತ್ಯೆ ಮಾಡಲಾಗುತ್ತಿದೆ. ಅಲ್ಲಿ ನಿರಂತರ ಗೋಹತ್ಯೆ ನಡೆಯುತ್ತಿದೆ. ಪ್ರತಿ ತಿಂಗಳು 350-400 ಜಾನುವಾರುಗಳ ಹತ್ಯೆ ನಡೆಯುತ್ತಿದ್ದು, ಈ ದಾಖಲೆಗಳು ಮಾಹಿತಿ ಹಕ್ಕಿನಿಂದ ಪಡೆದ ಮಾಹಿತಿಯಿಂದಲೇ ಬಹಿರಂಗವಾಗಿದೆ ಎಂದು ಅವರು ತಿಳಿಸಿದರು.

ಈ ಕುರಿತು ಉತ್ತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರೂ ಏನು ಪ್ರಯೋಜನವಾಗಿಲ್ಲ. ಪೊಲೀಸರು ಈವರೆಗೂ ಪ್ರಕರಣ ಕೂಡ ದಾಖಲಿಸಿಕೊಂಡಿಲ್ಲ. ಪ್ರಕರಣ ದಾಖಲಿಸದಂತೆ ಪೊಲೀಸರಿಗೆ ಮೇಲಿನಿಂದ ಒತ್ತಡ ಹೇರಲಾಗುತ್ತಿದೆ ಎಂದು ದೂರಿದರು.

ಮಾಹಿತಿಯಂತೆ ಕುದ್ರೋಳಿ ಕಸಾಯಿಖಾನೆಯಲ್ಲಿ ಕಳೆದ 6 ತಿಂಗಳಲ್ಲಿ 1,800 ಜಾನುವಾರುಗಳ ಹತ್ಯೆ ನಡೆದಿದೆ. ಜಿಲ್ಲೆಯಲ್ಲಿ ಅನಧಿಕೃತ ಬೀಫ್ ಸ್ಟಾಲ್ ಗಳು ಕಾರ್ಯಾಚರಿಸುತ್ತಿವೆ. ತಕ್ಷಣ ಸರಕಾರ ಇದರ ವಿರುದ್ಧ ಕ್ರಮಕೈಗೊಳ್ಳಬೇಕು. ಕುದ್ರೋಳಿ ಕಸಾಯಿಖಾನೆಯ ಗುತ್ತಿಗೆಯನ್ನು ರದ್ದುಗೊಳಿಸಬೇಕು ಎಂದು ಶರಣ್ ಪಂಪ್‌ವೆಲ್ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಶಿವಾನಂದ ಮೆಂಡನ್, ಪ್ರದೀಪ್ ಪಂಪ್‌ವೆಲ್, ಪ್ರವೀಣ್ ಕುತ್ತಾರ್ ಹಾಗೂ ಭುಜಂಗ ಕುಲಾಲ್ ಮುಂತಾದವರು ಉಪಸ್ಥಿತರಿದ್ದರು.