- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕ್ಯಾಂಪ್ಕೋ  ವತಿಯಿಂದ “ಅಡಿಕೆ ಕೌಶಲ್ಯ ಪಡೆ” ಅರ್ಜಿ ಆಹ್ವಾನ

Areca-nut [1]ಪುತ್ತೂರು: ಅಡಿಕೆ ಮರ ಏರುವ ಕುಶಲಕರ್ಮಿಗಳನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ  ಕ್ಯಾಂಪ್ಕೋ   ನೇತೃತ್ವದಲ್ಲಿ “ಅಡಿಕೆ ಕೌಶಲ್ಯ ಪಡೆ” ತರಬೇತಿ ಶಿಬಿರ ನಡೆಯಲಿದೆ. ಡಿ.5 ರಿಂದ  ನಡೆಯುವ ಈ ಶಿಬಿರಕ್ಕೆ  ಆಸಕ್ತ ಅಭ್ಯರ್ಥಿಗಳು ಅರ್ಜಿ ಹಾಕಿಕೊಳ್ಳಬಹುದು ಎಂದು  ಕ್ಯಾಂಪ್ಕೋ   ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಿಪಿಸಿಆರ್‍ಐ , ಎ ಆರ್ ಡಿ ಎಫ್ , ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾನಿಲಯ ಶಿವಮೊಗ್ಗ , ತೋಟಗಾರಿಕಾ ಇಲಾಖೆ, ಅಡಿಕೆ ಪತ್ರಿಕೆ ಮತ್ತು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಹಾಗೂ ಇತರ ಸಂಘಟನೆಗಳು ಈ ತರಬೇತಿ ಕಾರ್ಯಕ್ರಮಕ್ಕೆ  ಸಹಕಾರ ಕೊಡುತ್ತಿವೆ.

ವಿಟ್ಲ ಸಿಪಿಸಿಆರ್‍ಐ ವಠಾರದಲ್ಲಿ 5 ದಿನಗಳ ಕಾಲ ಶಿಬಿರ ನಡೆಯಲಿದೆ. 18 ರಿಂದ 35 ವರ್ಷದ ಒಳಗಿನ ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಯ ಯುವಕರಿಗೆ ಆದ್ಯತೆ ನೀಡಲಾಗಿದೆ. ಶಿಬಿರಾರ್ಥಿಗಳು ಐದು ದಿನವೂ ಶಿಬಿರದ ಕೇಂದ್ರದಲ್ಲೇ ಉಳಿದುಕೊಳ್ಳಬೇಕಾಗುತ್ತದೆ. ಇವರಿಗೆ ತರಬೇತಿ ಅವಧಿಯಲ್ಲಿ ಸಮವಸ್ತ್ರ, ದಿನ ಭತ್ಯೆ ಸಹಿತ ವಸತಿ, ಊಟ ಕಾಫಿ ವ್ಯವಸ್ಥೆ ಇರುತ್ತದೆ.

ಶಿಬಿರದಲ್ಲಿ ಅಡಿಕೆ ಮರ ಏರುವ ಹಾಗೂ ಔಷಧಿ ಸಿಂಪಡಣೆ, ಅಡಿಕೆ ಕೊಯಿಲು ,ತಳೆ ಕಟ್ಟುವುದು, ಕೊಕ್ಕೆ ಕಟ್ಟುವುದು, ಔಷಧಿ ತಯಾರಿ, ಪ್ರಾಥಮಿಕ ಚಿಕಿತ್ಸೆ , ಜೀವವಿಮೆ ಸಹಿತ ವಿವಿಧ ಅಂಶಗಳ ಬಗ್ಗೆ ತಜ್ಞರು ಮಾಹಿತಿ ನೀಡುತ್ತಾರೆ. ಐದಾರು ಮಂದಿ ನುರಿತ ಕೊಯ್ಲುಗಾರರು ಶಿಬಿರಾರ್ಥಿಗಳಿಗೆ ಈ ಕುಶಲವಿದ್ಯೆಗಳನ್ನು ಕಲಿಸಿಕೊಡಲಿದ್ದಾರೆ.

ಅರ್ಜಿ ಫಾರಂ  ಕ್ಯಾಂಪ್ಕೋ   ಶಾಖೆಗಳಲ್ಲಿ ಲಭ್ಯವಿರುತ್ತದೆ.  ಅರ್ಜಿ ಸಲ್ಲಿಸಲು ನ.26 ಕೊನೆಯ ದಿನವಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ದೂರವಾಣಿ ಮೂಲಕ ತಿಳಿಸಲಾಗುತ್ತದೆ. ತರಬೇತಿ ಪಡೆದ ಅಭ್ಯರ್ಥಿಗಳಿಗೆ ಶಿಬಿರದ ಕೊನೆಯಲ್ಲಿ ಪ್ರಮಾಣಪತ್ರ, ಗುರುತಿನ ಚೀಟಿ ನೀಡಲಾಗುತ್ತದೆ. ತರಬೇತಿ ಹೊಂದಿದವರ ಭಾವಚಿತ್ರ ಮತ್ತು ಸಂಪರ್ಕ ವಿವರವನ್ನು  ಕ್ಯಾಂಪ್ಕೋ   ಜಾಲತಾಣದಲ್ಲಿ ಪ್ರಕಟಿಸಲಾಗುತ್ತದೆ. ಶಿಬಿರದ ಬಗ್ಗೆ ಹೆಚ್ಚಿನ ಮಾಹಿತಿಗೆ ಕ್ಯಾಂಪ್ಕೋ ಉಪಾಧ್ಯಕ್ಷ ಶಂಕರನಾರಾಯಣ ಖಂಡಿಗೆ 09946406321  ಅಥವಾ  ಎಆರ್‍ಡಿಎಫ್‍ನ ಡಾ.ಕೇಶವ ಭಟ್  8277085489 ಅವರನ್ನು ಸಂಪರ್ಕಿಸಬಹುದು ಎಂದು ಎಸ್.ಆರ್.ಸತೀಶ್ಚಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಳೆದ ತಿಂಗಳು ತೀರ್ಥಹಳ್ಳಿಯಲ್ಲಿ ಎಲೈಟ್ ಗ್ರೂಪ್ ಮತ್ತು ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾನಿಲಯ ಶಿವಮೊಗ್ಗ ನಡೆಸಿದ ಶಿಬಿರದಲ್ಲಿ 33 ಮಂದಿಗೆ ಅಡಿಕೆ ಮರ ಏರುವ ತರಬೇತಿ ಕೊಡಲಾಗಿತ್ತು. ಇವರಲ್ಲಿ ಹೆಚ್ಚಿನವರೂ ನುರಿತ ಕೊನೆಗಾರರೊಂದಿಗೆ ಸೇರಿ ದುಡಿಯತೊಡಗಿದ್ದಾರೆ. ಕೆಲಸ ಮಾಡುತ್ತಾ ಹೆಚ್ಚಿನ ಪರಿಣತಿ ಪಡೆಯುತ್ತಿದ್ದಾರೆ ಎಂದು ಎಸ್.ಆರ್.ಸತೀಶ್ಚಂದ್ರ ಹೇಳಿದ್ದಾರೆ.