- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕೇಂದ್ರ ಸಚಿವ ಎಚ್‌.ಎನ್. ಅನಂತ್‌ಕುಮಾರ್ ನಿಧನ

Ananth Kumar [1]ಬೆಂಗಳೂರು: ಕೇಂದ್ರ ರಾಸಾಯನಿಕ, ರಸಗೊಬ್ಬರ ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಚ್‌.ಎನ್. ಅನಂತ್‌ಕುಮಾರ್ (59) ಸೋಮವಾರ ನಸುಕಿನ 3 ಗಂಟೆಗೆ ನಿಧನರಾದರು. ಚಾಮರಾಜಪೇಟೆಯ ಶಂಕರ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ಗಾಗಿ ಅವರು ಚಿಕಿತ್ಸೆ ಪಡೆಯುತ್ತಿದ್ದರು.

ಬಿಜೆಪಿ ರಾಜ್ಯ ಘಟಕದ ಆಧಾರ ಸ್ತಂಭಗಳಲ್ಲಿ ಒಂದಾಗಿದ್ದ ಅವರು, ಕಳೆದ ಕೆಲ ತಿಂಗಳುಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಪಾರ್ಥೀವ ಶರೀರವನ್ನು ಬಸವನಗುಡಿಯ ಮನೆಗೆ ತರಲಾಗಿದೆ. ನ್ಯಾಷನಲ್ ಕಾಲೇಜು ಮೈದಾನದಲ್ಲಿ 9 ಗಂಟೆಯ ನಂತರ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗುವುದು.

ಶಂಕರ ಕ್ಯಾನ್ಸರ್ ಆಸ್ಪತ್ರೆಗೆ ಕೆಲ ದಿನಗಳ ಹಿಂದೆ ದಾಖಲಾಗುವ ಮೊದಲು ಲಂಡನ್‌ ಮತ್ತು ನ್ಯೂಯಾರ್ಕ್‌ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಆರೋಗ್ಯ ಪರಿಸ್ಥಿತಿ ಬಿಗಡಾಯಿಸಿದ್ದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಅ.28ರಂದು ಅನಂತ್‌ಕುಮಾರ್ ಅವರನ್ನು ಭೇಟಿಯಾಗಿದ್ದರು.

ಆರು ಬಾರಿ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದ ಅನಂತ್‌ಕುಮಾರ್ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರಾಗಿ ಅವರು ತಮ್ಮ ಸಾರ್ವಜನಿಕ ಜೀವನ ಆರಂಭಿಸಿದರು. 1985ರಲ್ಲಿ ಎಬಿವಿಪಿಯ ರಾಷ್ಟ್ರ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಬಿಜೆಪಿಗೆ 1987ರಲ್ಲಿ ಸೇರ್ಪಡೆಯಾಗಿದ್ದರು.

1995ರಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನೇಮಕವಾಗಿದ್ದರು. ಲೋಕಸಭೆಗೆ 1996ರಲ್ಲಿ ಚುನಾಯಿತರಾದರು. 1998ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸಂಪುಟದಲ್ಲಿ ನಾಗರೀಕ ವಿಮಾನಯಾನ ಸಚಿವರಾಗಿದ್ದರು. 1999ರಲ್ಲಿ ಎನ್‌ಡಿಎ ಸರ್ಕಾರದಲ್ಲಿ ಪ್ರವಾಸೋದ್ಯಮ, ಕ್ರೀಡೆ ಮತ್ತು ಯುವಜನ ಸೇವೆ, ಸಂಸ್ಕೃತಿ, ನಗರಾಭಿವೃದ್ಧಿ ಮತ್ತು ಬಡತನ ನಿರ್ಮೂಲನೆ ಖಾತೆ ಸಚಿವರಾಗಿದ್ದರು. ಈ ಅವಧಿಯಲ್ಲಿ ಅವರ ಪ್ರಭಾವವೂ ಅಪಾರ ಪ್ರಮಾಣದಲ್ಲಿ ವೃದ್ಧಿಯಾಗಿತ್ತು.

ನಾರಾಯಣಶಾಸ್ತ್ರಿ ಮತ್ತು ಗಿರಿಜಾ ಎನ್‌.ಶಾಸ್ತ್ರಿ ಅವರ ಮಗನಾಗಿ ಜುಲೈ 22, 1959ರಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು. ಪತ್ನಿ ತೇಜಸ್ವಿನಿ ಮತ್ತು ಐಶ್ವರ್ಯ ಮತ್ತು ವಿಜೇತಾ ಹೆಸರಿನ ಪುತ್ರಿಯರು ಇದ್ದಾರೆ.

ಇಂದು ಬೆಳಿಗ್ಗೆ 10.30ರ ಸುಮಾರಿಗೆ ವಿಶೇಷ ವಿಮಾನದ ಮೂಲಕ ಪ್ರಧಾನಿ ಮೋದಿಯವರು ಬೆಂಗಳೂರಿಗೆ ಆಗಮಿಸಲಿದ್ದು, ಅಂತಿಮ ದರ್ಶನ ಪಡೆಯಲಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.

ಅನಂತ್ ಕುಮಾರ್ ಅವರು ಪತ್ನಿ ತೇಜಸ್ವಿನಿ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

ಅನಂತ್ ಕುಮಾರ್ ನಡೆದು ಬಂದ ದಾರಿ 

ಹುಟ್ಟಿದ ದಿನಾಂಕ- 22 ಜುಲೈ, 1959

ತಂದೆ: ಎಚ್.ಎನ್. ನಾರಾಯಣಶಾಸ್ತ್ರಿ

ತಾಯಿ: ಗಿರಿಜಾಶಾಸ್ತ್ರಿ. ಇವರು ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ಉಪಮೇಯರ್ ಆಗಿದ್ದರು

ಹೆಂಡತಿ: ತೇಜಸ್ವಿನಿ

ಮಕ್ಕಳು- ಐಶ್ವರ್ಯ ಮತ್ತು ವಿಜೇತಾ

ವಿದ್ಯಾಭ್ಯಾಸ- ಬಿ.ಎ ಪದವಿ ಕಾಡಸಿದ್ದೇಶ್ವರ ಕಾಲೇಜು ಹುಬ್ಬಳ್ಳಿ, ಎಲ್ಎಲ್ಎಂ (ಲಾ)- ಮೈಸೂರು ವಿಶ್ವವಿದ್ಯಾಲಯ

 

1.ವಿದ್ಯಾರ್ಥಿಯಾಗಿದ್ದಾಗ ಲೇ ಎಬಿವಿಪಿಯೊಂದಿಗೆ ಗುರುತಿಸಿಕೊಂಡಿದ್ದರು. ಹುಬ್ಬಳ್ಳಿ ಈದ್ಗಾ ಮೈದಾನ ಹೋರಾಟದಲ್ಲಿ ಭಾಗಿ

2.ತುರ್ತು-ಪರಿಸ್ಥಿತಿಯ ಸಂದರ್ಭದಲ್ಲಿ ಅವರನ್ನು 40 ದಿನ ಸೆರೆಮನೆ ವಾಸ

3. ಚಿಕ್ಕವಯಸ್ಸಿನಲ್ಲೇ, ಕರ್ನಾಟಕ ವಲಯದ ಬಿಜೆಪಿಯ ಪ್ರಧಾನ ಕಾರ್ಯದರ್ಶಿ

4. 1985ರಲ್ಲಿ ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಆಯ್ಕೆ

5. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ಅನಂತ್‌ಕುಮಾರ್ ನೇಮಕ

6. ಬಿಜೆಪಿಯ ಯುವ-ಮೋರ್ಚದಲ್ಲಿ ನಡೆಸಿದ ಕಾರ್ಯ ಚಟುವಟಿಕೆಗಳನ್ನು ಗಮನಿಸಿ 1996ರಲ್ಲಿ, ರಾಷ್ಟ್ರಮಟ್ಟದ ರಾಜಕೀಯ ವಲಯದಲ್ಲಿ ಕಾರ್ಯದರ್ಶಿಯಾಗಿ ಆಯ್ಕೆ

 

1982-85- ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕಾರ್ಯದರ್ಶಿ

1985-87- ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ರಾಷ್ಟ್ರೀಯ ಕಾರ್ಯದರ್ಶಿ

1987-88- ಭಾರತೀಯ ಜನತಾ ಪಾರ್ಟಿಯ ಕಾರ್ಯದರ್ಶಿ

1988-95-ಭಾರತೀಯ ಜನತಾ ಪಕ್ಷದ ಜನರಲ್ ಸೆಕ್ರೆಟರಿ

1995-98-ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ

1996- ಬಿಜೆಪಿಯಿಂದ ಲೋಕಸಭೆಗೆ ಆಯ್ಕೆ

1996-97-ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್ ಸೈನ್ಸ್ ಸದಸ್ಯರು

1996-97-ಕೆಂದ್ರ ಕೈಗಾರಿಕಾ ಸಚಿವಾಲಯದ ಸಂಸದೀಯ ಸಲಹಾ ಸಮಿತಿಯ ಸದಸ್ಯ

1996-97-ಕೇಂದ್ರ ರೈಲ್ವೆ ಸಚಿವಾಲಯದ ಸಂಸದೀಯ ಸ್ಥಾಯಿ ಸಮಿತಿಯ ಸದಸ್ಯ

1998- ಲೋಕಸಭೆಗೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಆಯ್ಕೆ

1998-99 ಕೇಂದ್ರ ವಿಮಾನ ಯಾನ ಸಚಿವ

1999-ಅಕ್ಟೋಬರ್- ಪ್ರವಾಸೋದ್ಯಮ ಇಲಾಖೆ ಸಚಿವ (ಹೆಚ್ಚುವರಿ)

1999- ಲೋಕಸಭೆಗೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಆಯ್ಕೆ ಮತ್ತೆ ಆಯ್ಕೆ

1999-2000- ಸಂಸ್ಕೃತಿ, ಯುವಜನ ಮತ್ತು ಕ್ರೀಡಾ ಸಚಿವ- ಕ್ಯಾಬಿನೆಟ್-

2000-2001- ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ

2001-ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಮತ್ತು ಬಡತನ ನಿರ್ಮೂಲನಾ ಸಚಿವ- (ಗ್ರಾಮೀಣಾಭಿವೃದ್ಧಿ ಸಚಿವ)

2003-04- ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ

2004- ಲೋಕಸಭೆಗೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಆಯ್ಕೆ

2004- ಕಲ್ಲಿದ್ದಲು ಮತ್ತು ಉಕ್ಕು ಸಮಿತಿ ಅಧ್ಯಕ್ಷ

2004- ಸಂಸದೀಯ ಸಾಮಾನ್ಯ ಸಂಗತಿಗಳ ಸಮಿತಿಯ ಸದಸ್ಯ

2005- ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ

2007- ಕೇಂದ್ರ ಸಂಸದೀಯ ಹಣಕಾಸ ಸಮಿತಿ ಅಧ್ಯಕ್ಷ

2007- ಕೇಂದ್ರ ಸಲಹಾ ಸಮಿತಿ ಸದಸ್ಯ

2009- ಲೋಕಸಭೆಗೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಆಯ್ಕೆ

2013- ಲೋಕಸಭೆಗೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಆಯ್ಕೆ- (ರಸಗೊಬ್ಬರ ಹಾಗೂ ಸಂಸದೀಯ ಸಚಿವ)