- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಬ್ಯಾರಿ ಸಾಹಿತ್ಯ ಅಕಾಡೆಮಿಯ ನೂತನ ಅಧ್ಯಕ್ಷರಿಗೆ ಕತ್ತಿಯಿಂದ ಕಡಿದು ಕೊಲೆಯತ್ನ

Beary Sahitya Parishat New President Attacked [1]

ಮಂಗಳೂರು : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ನೂತನ ಅಧ್ಯಕ್ಷ ರಹೀಂ ಉಚ್ಚಿಲ ಅವರನ್ನು ನಾಲ್ವರು ಮುಸುಕುಧಾರಿಗಳ ತಂಡ ಗುರುವಾರ ಮಧ್ಯಾಹ್ನ ಬ್ಯಾರಿ ಅಕಾಡೆಮಿ ಕಚೇರಿಯಲ್ಲಿ ಕತ್ತಿಯಿಂದ ಕಡಿದು ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ,

Beary Sahitya Parishat New President Attacked [2]

ಬ್ಯಾರಿ ಅಕಾಡೆಮಿ ಕಚೇರಿಯಲ್ಲಿ ಮಧ್ಯಾಹ್ನ 1.30ರ ವೇಳೆಗೆ ಕಚೇರಿಯ ಚೇಂಬರ್‌ನಲ್ಲಿ ಒಬ್ಬರೇ ಕುಳಿತಿದ್ದ ಸಂದರ್ಭದಲ್ಲಿ ಎರಡು ಮೋಟಾರ್‌ ಸೈಕಲ್‌ಗ‌ಳಲ್ಲಿ ಬಂದ ನಾಲ್ವರು ಮುಸುಕುಧಾರಿಗಳು ಈ ಕೃತ್ಯ ಎಸಗಿದ್ದಾರೆ.

ಈ ಸಂದರ್ಭದಲ್ಲಿ ಹೊರಗೆ ಕಚೇರಿ ಸಹಾಯಕ ಸತೀಶ್‌ ರೈ ಮಾತ್ರ ಇದ್ದರು. ಅಪರಿಚಿತರು ಕಚೇರಿಗೆ ಬಂದು ಅಕಾಡೆಮಿ ಅಧ್ಯಕ್ಷರು ಇದ್ದಾರೆಯೇ ಎಂದು ವಿಚಾರಿಸಿ ಬಳಿಕ ನಮಗೆ ಅವರಲ್ಲಿ ಮಾತನಾಡುವುದಕ್ಕಿದೆ ಎಂದಿದ್ದರು. ಅದರಂತೆ ಕಚೇರಿ ಸಹಾಯಕ ಸತೀಶ್‌ ರೈ ಒಳಗೆ ಹೋಗಿ ಎಂದು ಹೇಳಿ ಒಳಗೆ ಕಳುಹಿಸಿದ್ದಾರೆ. ಆಗ ಇಬ್ಬರು ಒಳಗೆ ಹೋಗಿದ್ದು, ಇನ್ನಿಬ್ಬರು ಹೊರಗೆ ನಿಂತಿದ್ದರು. ಒಳಗೆ ಹೋದವರು ಕೆಲವೇ ನಿಮಿಷಗಳಲ್ಲಿ ರಹೀಂ ಅವರನ್ನು ಕತ್ತಿಯಿಂದ ಕಡಿದು ಗಾಯಗೊಳಿಸಿ ಹೊರಗೆ ಬಂದಿದ್ದಾರೆ. ಹಾಗೆ ಹೊರಗೆ ಬರುವಾಗ ಕಚೇರಿಯ ಬಾಗಿಲಿನ ಮತ್ತು ಕಿಟಿಕಿಯ ಗಾಜುಗಳನ್ನು ಪುಡಿ ಮಾಡಿದ್ದಾರೆ. ಈ ಶಬ್ದ ಕೇಳಿ ಕೈ ತೊಳೆಯಲು ಹೋಗಿದ್ದ ಕ್ಲರ್ಕ್‌ ವಿದ್ಯಾ ನಾಯಕ್‌ ಮತ್ತು ಖತೀಜ ಹಾಗೂ ಕಚೇರಿ ಸಹಾಯಕ ಸತೀಶ್‌ ರೈ ಬೊಬ್ಬೆ ಹಾಕಿದ್ದಾರೆ. ಆಸುಪಾಸಿನ ಜನರು ಓಡಿಬಂದಿದ್ದು, ಅಷ್ಟರಲ್ಲಿ ರಿಯಾಜ್‌ ಹರೇಕಳ ಅವರೂ ಅಲ್ಲಿಗೆ ತಲುಪಿದ್ದಾರೆ. ಅವರು ಕಚೇರಿ ಕೊಠಡಿ ಒಳಗೆ ಹೋಗಿ ನೋಡಿದಾಗ ರಹೀಂ ಉಚ್ಚಿಲ ಕುಳಿತಲ್ಲಿಯೇ ರಕ್ತದ ಮಡುವಿನಲ್ಲಿ ಬಿದ್ದಿದ್ದು, ಸಹಾಯಕ್ಕಾಗಿ ಅಂಗಲಾಚುತ್ತಿದ್ದರು. ರಿಯಾಜ್‌ ಹರೇಕಳ ಅವರು ಕೂಡಲೇ ರಹೀಂ ಅವರನ್ನು ಕೆಲವರ ಸಹಕಾರದಿಂದ ಎತ್ತಿ ಹೊರಗೆ ತಂದು ಆಟೋ ರಿಕ್ಷಾದಲ್ಲಿ ಹಾಕಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು.

Beary Sahitya Parishat New President Attacked [3]

ದುಷ್ಕರ್ಮಿಗಳು ತಮ್ಮ ಬೈಕ್‌ಗಳನ್ನು ಅಕಾಡೆಮಿ ಕಚೇರಿಯ ನೇರ ಎದುರು ಭಾಗದಲ್ಲಿ ಸುಮಾರು 100 ಮೀಟರ್‌ ದೂರ ಅತ್ತಾವರ ಕಟ್ಟೆಯ ಆಚೆ ಬದಿ ಕಾಸಾ ಗ್ರಾಂಡ್‌ ವಸತಿ ಸಮುಚ್ಚಯ ಬಳಿ ನಿಲ್ಲಿಸಿದ್ದರು. ಕೃತ್ಯ ಎಸಗಿ ಹಿಂದಿರುಗುವ ಸಂದರ್ಭದಲ್ಲಿ ಅವರು ತಮ್ಮನ್ನು ಯಾರೂ ಗುರುತು ಪತ್ತೆ ಹಚ್ಚಬಾರದೆಂದು ಕಣ್ಣಿಗೆ ಕಂದು ಬಣ್ಣದ ಬಟ್ಟೆ ಕಟ್ಟಿದ್ದರು. ಕೃತ್ಯ ಎಸಗಿದ ಬಳಿಕ ಈ ಬೈಕ್‌ಗಳನ್ನು ಏರಿ ಪರಾರಿಯಾದರು. ಹಾಗೆ ಹೋಗುವಾದ ತಾವು ಕೃತ್ಯಕ್ಕೆ ಬಳಸಿದ ಕತ್ತಿಯನ್ನು ಕಾಸಾ ಗ್ರಾಂಡ್‌ ವಸತಿ ಸಮುಚ್ಚಯದ ಬಳಿ ರಸ್ತೆಬದಿ ಎಸೆದು ಹೋಗಿದ್ದಾರೆ.

ರಹೀಂ ಅವರ ಮುಖ ಮತ್ತು ಬಾಯಿ, ತೋಳುಗಳು ಮತ್ತು ಹೊಟ್ಟೆಗೆ ಕಡಿಯಲಾಗಿದ್ದು, ತೀವ್ರತರವಾದ ಗಾಯಗಳಾಗಿವೆ. ಅವರನ್ನು ನಗರದ ಯೂನಿಟಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.