ಬೆಂಗಳೂರು: ರೈತ ವಿರೋಧಿ ನೀತಿ ಅನುಸರಿಸುತ್ತಿರುವ ನಿಮಗೆ ವಿಧಾನಸೌಧದಲ್ಲಿ ಅಧಿಕಾರ ನಡೆಸೋ ನೈತಿಕ ಹಕ್ಕಿಲ್ಲ. ಕೂಡಲೇ ರಾಜೀನಾಮೆ ಕೊಟ್ಟು ತೊಲಗಿ. ನೀವು ರಾಜೀನಾಮೆ ಕೊಡುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮೈತ್ರಿ ಸರ್ಕಾರದ ವಿರುದ್ಧ ಗುಡುಗಿದ್ದಾರೆ.
ರೈತ ಮಹಿಳೆ ಬಗ್ಗೆ ಅವಾಚ್ಯ ಶಬ್ದಗಳಿಂದ ಮಾತನಾಡಿದ ಸಿಎಂ ಕುಮಾರಸ್ವಾಮಿ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಿತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಮೈಸೂರು ಬ್ಯಾಂಕ್ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರು ಮತ್ತು ನೂರಾರು ಕಾರ್ಯಕರ್ತರು ಭಾಗಿಯಾಗಿ, ಸಿಎಂ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಯಡಿಯೂರಪ್ಪ, ಇದು ರೈತ ವಿರೋಧಿ ಕುಮಾರಸ್ವಾಮಿ ಸರ್ಕಾರ. ನಿನ್ನೆ ವಿಧಾನಸೌಧದಲ್ಲಿ ಕುಮಾರಸ್ವಾಮಿ ರಾಜಕೀಯ ದೊಂಬರಾಟ ಮಾಡಿದ್ರೂ ಯಾವುದೇ ತೀರ್ಮಾನಕ್ಕೆ ಬರಲು ಆಗಲಿಲ್ಲ. ನೀವು ಬೆಳಗಾವಿಗೆ ಬರೋದಾಗಿ ಹೇಳಿದ್ದೀರಿ, ಅಲ್ಲಿಗೆ ಹೋಗಲಿಲ್ಲ. ರೈತರು ಬೀದಿಗೆ ಇಳಿದರೂ ಹುಬ್ಬಳ್ಳಿಯಲ್ಲಿ ಮನೆ ಮಾಡಿದ್ದಿರಿ. ಒಂದು ದಿನ ಕೂಡ ಅಲ್ಲಿಗೆ ಹೋಗಲಿಲ್ಲ. ಚುನಾವಣೆ ಮುಗಿಯುತ್ತಿದ್ದಂತೆ ಮನೆ ಕಾಲಿ ಮಾಡಿದಿರಿ. ನಿಮ್ಮ ಯೋಗ್ಯತೆಗೆ ಗೆದ್ದಿದ್ದು 37 ಶಾಸಕರು ಮಾತ್ರ. ನೂರು ತಾಲೂಕುಗಳಲ್ಲಿ ಭೀಕರ ಬರ ಇದ್ದರೂ ಯಾವ ಸಚಿವರು ಹೋಗಲಿಲ್ಲ, ಯಾವುದೇ ಕೆಲಸಗಳು ಆಗುತ್ತಿಲ್ಲ. ಶಾಸಕರಿಗೆ ಅನುದಾನ ಬಿಡುಗಡೆಯಾಗಿಲ್ಲ. ಬೆಳಗಾವಿ ಅಧಿವೇಶನದಲ್ಲಿ ಒಂದು ಲಕ್ಷ ರೈತರನ್ನ ಸೇರಿಸಿ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ರೈತರ ಸಾಲ ಮನ್ನಾ ಆಗಿಲ್ಲ. ಬ್ಯಾಂಕ್ ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತೀರಾ ಕುಮಾರಸ್ವಾಮಿ? ಬೆಳಗಾವಿ ಅಧಿವೇಶನದಲ್ಲಿ ನಿಮ್ಮ ಡೊಂಬರಾಟ ಹೊರಹಾಕ್ತೇವೆ. ಸರ್ಕಾರದ ಬೊಕ್ಕಸ ಖಾಲಿ ಆಗಿದೆ. ನೀರಾವರಿ ಯೋಜನೆ ನಡೆಯುತ್ತಿಲ್ಲ. ಈ ಮುಖ್ಯಮಂತ್ರಿ ಮುಂದುವರಿಯಲು ಬಿಡಬಾರದು. ಮಹಿಳಾ ಕಾರ್ಯಕರ್ತೆಯರು ನಿರಂತರ ಹೋರಾಟ ಮಾಡಬೇಕು ಎಂದರು.
ಮಾಜಿ ಡಿಸಿಎಂ ಆರ್.ಅಶೋಕ್ ಮಾತನಾಡಿ, ಸುವರ್ಣಸೌಧದ ಬೀಗ ಒಡೆದಿದ್ದಕ್ಕೆ ರೈತರನ್ನ ಗೂಂಡಾಗಳು ಅಂತ್ತೀರಾ? ರೈತರನ್ನ ಗೂಂಡಾಗಳು ಎಂದು ನೀವು ಇತಿಹಾಸದಲ್ಲಿ ಉಳಿದು ಬಿಟ್ಟಿರಿ. ರಾಮಕೃಷ್ಣ ಹೆಗಡೆ ಅವರನ್ನ ಚಪ್ಪಲಿಯಲ್ಲಿ ಹೊಡೆಸಿದ ನಿಮ್ಮನ್ನ ಏನು ಅನ್ನಬೇಕು? ಅಧಿಕಾರ ಶಾಶ್ವತ ಅಲ್ಲ. ಮೀಸೆ ತಿರುವಿ ಮೆರೆದವರೆಲ್ಲ ಏನಾದರು ಗೊತ್ತಿದೆ. ರೈತ ಮಹಿಳೆ ಮುಖ್ಯಮಂತ್ರಿ ಅವರನ್ನ ನಾಲಾಯಕ್ ಅಂತ ಅಂದಿದ್ದಾರೆ. ಅದಕ್ಕೆ ಅರ್ಥ ಹುದ್ದೆಗೆ ಲಾಯಕ್ ಅಲ್ಲ ಅಂತ. ನಿಮಗೆ ಆ ಸಾಮರ್ಥ್ಯ ಇಲ್ಲ. ನೀವು ಮಹಿಳೆಗೆ ಹೇಳ್ತಿರಾ, ನಾಲ್ಕು ವರ್ಷಗಳಿಂದ ಎಲ್ಲಿ ಮಲಗಿದ್ದೆ ಅಂತ. ಇದು ಸರಿನಾ? ಐದುವರೆ ತಿಂಗಳಿಂದ ರೈತರ ಸಾಲ ಮನ್ನಾ ಮಾಡುತ್ತಲೇ ಇದ್ದೀರ. ಎಲ್ಲಿ ಸಾಲ ಮನ್ನಾ ಆಗಿದೆ ಹೇಳಿ ಕುಮಾರಸ್ವಾಮಿ. ರೈತರ ಸಾಲ ಮನ್ನಾ ಮಾಡೋದಕ್ಕೆ ನಿಮ್ಮಲ್ಲಿ ಹಣ ಇಲ್ಲ. ಸರ್ಕಾರದ ಖಜಾನೆ ಲೂಟಿಯಾಗಿದೆ. ಹಣ ಇಲ್ಲದೇ ಬ್ಯಾಂಕ್ಗಳನ್ನ ಎದರಿಸೋ ಕೆಲಸ ಮಾಡುತ್ತಿದ್ದೀರಾ ಎಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.
Click this button or press Ctrl+G to toggle between Kannada and English